ಉಡುಪಿ(ಹೆಬ್ರಿ): ಉಡುಪಿಯ ಹಿರಿಯಡಕ ಸಮೀಪದ ಪೆರ್ಣಂಕಿಲ ಕುಕ್ಕಿಕಟ್ಟೆಯ ಮರಾಠಿ ಸಮಾಜ ಮಂದಿರದ ಬಳಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನಲ್ಲಿ ಚಿರತೆಯೊಂದು ಸೆರೆಯಾಗಿದೆ.
ಕೆಲವು ದಿನಗಳಿಂದ ಈ ಪರಿಸರದಲ್ಲಿ ಚಿರತೆಯೊಂದು ಸಂಚರಿಸುತ್ತಿರುವ ವಿಷಯವನ್ನು ತಿಳಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖಾ ಸಿಬಂದಿ ಈ ಭಾಗದಲ್ಲಿ 6 ದಿನಗಳ ಹಿಂದೆ ಬೋನೊಂದನ್ನು ಚಿರತೆ ಸೆರೆಗಾಗಿ ಇಟ್ಟಿದ್ದರು.
ಆಹಾರ ಅರಸಿ ಬಂತು ಚೀತಾ….
ಇಲಾಖೆಯವರು ಇಟ್ಟ ಬೋನಿನೊಳಗೆ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಮಧ್ಯರಾತ್ರಿ ಆಹಾರ ಅರಸುತ್ತ ಬಂದ 3 ವರ್ಷ ಪ್ರಾಯದ ಹೆಣ್ಣು ಚಿರತೆ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ನಾಯಿಗೆ ಪ್ರತ್ಯೇಕ ಗೂಡು ಇದ್ದುದರಿಂದ ಅದಕ್ಕೆ ಯಾವುದೇ ತೊಂದರೆ ಆಗಲಿಲ್ಲ. ಬೆಳಗ್ಗೆ ಸ್ಥಳೀಯರಿಂದ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಸೆರೆಯಾದ ಚಿರತೆಯನ್ನು ಕೊಂಡೊಯ್ದರು.
ವಲಯ ಅರಣ್ಯಾಧಿಕಾರಿ ರಮೇಶ್ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ನರೇಶ್, ಅರಣ್ಯ ರಕ್ಷಕ ಮನೋಹರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Comments are closed.