ಕರಾವಳಿ

ಭತ್ತ ಕೃಷಿಯನ್ನು ಲಾಭದಾಯಕವಾಗಿಸಲು ಯಾಂತ್ರೀಕೃತ ಕೃಷಿ ಮಾಡಿ- ಕೃಷಿ ಸಚಿವ ಕೃಷ್ಣ ಭೈರೇಗೌಡ

Pinterest LinkedIn Tumblr

ಉಡುಪಿ: ವಿವಿಧ ಕಾರಣಗಳಿಂದ ಮಲೆನಾಡು ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಪ್ರಮುಖ ಆಹಾರ ಭತ್ತದ ಕೃಷಿ ನಶಿಸುತ್ತಿದ್ದು, ಭತ್ತದ ಕೃಷಿಯನ್ನು ಲಾಭದಾಯಕವಾಗಿಸಲು ಯಾಂತ್ರೀಕೃತ ಭತ್ತದ ಬೆಳೆಗೆ ಒತ್ತು ಕೊಡಿ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡರು ಹೇಳಿದರು.

ಉಡುಪಿಯ ಬ್ರಹ್ಮಾವರದ ಗುಚ್ಛ ಗ್ರಾಮ ಅಗ್ರಹಾರದಲ್ಲಿ ಯಾಂತ್ರೀಕೃತ ಭತ್ತ ನಾಟಿಯ ಆಂದೋಲನಕ್ಕೆ ಯಂತ್ರದ ಮೂಲಕ ನಾಟಿ ಮಾಡಿ ಚಾಲನೆ ನೀಡಿ, ರೈತರಿಗೆ ಈ ಬಗ್ಗೆ ಮಾಹಿತಿ ನೀಡಿ ಕೃಷಿಯನ್ನು ಲಾಭದಾಯಕವಾಗಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದರು. ಭತ್ತ ಆಹಾರ ಮಾತ್ರವಾಗಿರದೆ ನಮ್ಮ ಸಂಸ್ಕೃತಿಯೂ ಹೌದು ಎಂದ ಸಚಿವರು, ಭತ್ತದ ಬೆಳೆಗೆ ಮತ್ತೆ ಮರುಜೀವ ನೀಡಬೇಕಿದೆ ಎಂದರು.

Bramhavara_Agriculuture_Minister (2) Bramhavara_Agriculuture_Minister (1) Bramhavara_Agriculuture_Minister (5) Bramhavara_Agriculuture_Minister (4) Bramhavara_Agriculuture_Minister (3)

ಭತ್ತದ ಉತ್ಪಾದನೆ ಹೆಚ್ಚಿಸಲು, ಖರ್ಚು ತಗ್ಗಿಸಲು ಕಳೆದೆರಡು ವರ್ಷಗಳಿಂದ ಕೃಷಿ ಇಲಾಖೆ ವಿಜ್ಞಾನಿಗಳ ಮುಖಾಂತರ ನಿರಂತರ ಯತ್ನಿಸುತ್ತಿದೆ. ಹೊಸ ತಳಿ ಅಭಿವೃದ್ಧಿಗೆ ಸಮಯಾವಕಾಶ ಬೇಕಿದೆ. ಆದರೆ ಕೃಷಿ ಕಾರ್ಮಿಕರ ಕೊರತೆ ಹಾಗೂ ಸಂಬಳ ಹೆಚ್ಚಳದಿಂದ ಭತ್ತ ಬೆಳೆಯಲು ರೈತರು ಹಿಂದೇಟು ಹಾಕುತ್ತಿರುವುದಕ್ಕೆ ಪರಿಹಾರವಾಗಿ ಯಂತ್ರಗಳ ಮೂಲಕ ನಾಟಿ, ಕಟಾವು, ಕಳೆ ತೆಗೆಯುವಂತಹುದನ್ನು ಮಾಡುವುದರಿಂದ ಎಕರೆಗೆ 4000 ರೂ. ವೆಚ್ಚವಾಗಲಿದೆ. ಇದೇ ಕೂಲಿ ಕಾರ್ಮಿಕರನ್ನು ಬಳಸಿ ಕೃಷಿ ಮಾಡಿದರೆ ಎಕರೆಗೆ 8000 ರೂ. ವೆಚ್ಚ ಬೀಳಲಿದೆ ಎಂದು ಸಚಿವರು ಹೇಳಿದರು.

ಯಂತ್ರೋಪಕರಣ ಬಳಕೆ ಎಲ್ಲ ರೈತರಿಗೆ ಲಭ್ಯವಾಗಿಸಲು ಕೃಷಿಯಂತ್ರ ಧಾರೆ ಕೇಂದ್ರಗಳಲ್ಲಿ ಬಾಡಿಗೆಗೆ ಲಭ್ಯವಾಗಲಿದೆ ಎಂದ ಸಚಿವರು, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೃಷಿಯಂತ್ರ ಬಾಡಿಗೆ ಕೇಂದ್ರಗಳ ಸಂಖ್ಯೆ 7 ಕ್ಕೇರಿದೆ. ರೈತರಿಂದ ಬೇಡಿಕೆ ಬಂದರೆ ಇಂತಹ ಇನ್ನೂ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಆಸಕ್ತ ರೈತರಿಗೆ ಸಬ್ಸಿಡಿಯನ್ನು ನೀಡಲಾಗುವುದು ಎಂದು ಸಚಿವರು ಹೇಳಿದರು.

ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆಯಿಂದ ಕೃಷಿಕರು ಅನುಕೂಲ ಪಡೆಯುತ್ತಿದ್ದು, ರೈತರಿಗೆ ಅನುಕೂಲವಾಗುವ ಎಲ್ಲ ವ್ಯವಸ್ಥೆಗಳನ್ನು ಸರ್ಕಾರ ಆದ್ಯತೆ ಮೇಲೆ ಕೈಗೊಳ್ಳುತ್ತಿದೆ ಎಂದರು.

ರಸಗೊಬ್ಬರಕ್ಕೆ ಪರ್ಯಾಯವನ್ನು ಬಳಸಿ ಎಂದು ಕೃಷಿಕರಿಗೆ ಸಲಹೆ ಮಾಡಿದ ಸಚಿವರು, ಸ್ತ್ರೀ ಶಕ್ತಿ ಮೂಲಕ ನರ್ಸರಿ ಮಾಡಿ; ನೆಟ್‌ವರ್ಕಿಂಗ್ ಮೂಲಕ ಯಾಂತ್ರಿಕ ಕೃಷಿಯನ್ನು ಕೃಷಿಕರಿಗೆ ಪರಿಚಯಿಸಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಎಲ್ಲರೂ ಸೇರಿ ರೈತರಿಗೆ ಮಾಹಿತಿ ನೀಡಿ, ತರಬೇತಿ ನೀಡಿ ಎಂದು ಸಚಿವರು ಸಲಹೆ ಮಾಡಿದರು.

ಯಾಂತ್ರೀಕೃತ ಭತ್ತದ ಬೇಸಾಯದ ಸಿ ಡಿ ಬಿಡುಗಡೆ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಆಹಾರ ಅಮೃತವಾಗಲಿ; ಕೃಷಿಕರಿಗೆ ಕ್ರಿಮಿನಾಶಕ, ಗೊಬ್ಬರ ಬಳಕೆ ಬಗ್ಗೆ ಸಮಗ್ರ ಮಾಹಿತಿ ನೀಡಿ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಅವರು ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷೀಯ ಭಾಷಣ ಮಾಡಿದರು. ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರಸ್ವತಿ, ಉಪಸ್ಥಿತರಿದ್ದರು.

ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಡಾ ಎಂ ಕೆ ನಾಯ್ಕ್ ಸ್ವಾಗತಿಸಿದರು. ಉಪಕುಲಪತಿ ಡಾ ಸಿ ವಾಸುದೇವಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ಎಂ ಹನುಮಂತಪ್ಪ ವಂದಿಸಿದರು.

Comments are closed.