ಪುತ್ತೂರು,ಜುಲೈ.11: ಮುಂಡೂರು ಗ್ರಾಮದ ಕುರೆಮಜಲುವಿನಲ್ಲಿ ಗೃಹಿಣಿಯೋರ್ವರು ತನ್ನ ಎರಡು ವರ್ಷದ ಮಗುವಿನೊಂದಿಗೆ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಮೃತಪಟ್ಟರವರನ್ನು ಕುರೆಮಜಲು ನಿವಾಸಿ ಸತೀಶ್ ಪೂಜಾರಿಯವರ ಧರ್ಮಪತ್ನಿ ವೇದಾವತಿ (26) ಹಾಗೂ ಪುತ್ರ ಮನಿಷ್ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಶನಿವಾರ ರಾತ್ರಿ ಎಂದಿನಂತೆ ಮನೆಯವರೆಲ್ಲಾ ಒಟ್ಟಾಗಿ ಕುಳಿತು ಟಿವಿ ನೋಡಿ ಬಳಿಕ ಮಲಗಿದ್ದರು. ಆ ಸಂದರ್ಭದಲ್ಲಿ ವೇದಾವತಿಯವರು ಬೆಡ್‌ಶೀಟ್ ಸಹಿತ ಮಗುವನ್ನು ಎತ್ತಿಕೊಂಡು ಹೋಗಿದ್ದಾರೆ. ರಾತ್ರಿ 12 ಗಂಟೆ ಸುಮಾರಿಗೆ ಮಗುವಿನೊಂದಿಗೆ ಮನೆಯಿಂದ ಹೊರ ಬಂದಿದ್ದ ವೇದಾವತಿ ಅವರು ಸುಮಾರು ಹೊತ್ತು ಕಳೆದರೂ ಹಿಂದಿರುಗದಿದ್ದರಿಂದ ಅನುಮಾನಗೊಂಡ ಪತಿ ಸತೀಶ್ ಪೂಜಾರಿ ಹುಡುಕಾಟ ನಡೆಸಿದರು.
ಮನೆಯಿಂದ ಸ್ವಲ್ಪ ದೂರದಲ್ಲಿರುವ ಕೆರೆಯ ಬಳಿ ವೇದಾವತಿ ಅವರ ಮೊಬೈಲ್ ಫೋನ್ ಪತ್ತೆಯಾಗಿತ್ತು. ಗಾಬರಿಗೊಂಡ ಸತೀಶ್ ಪೂಜಾರಿಯವರು ನೆರೆ ಮನೆಯ ವರನ್ನು ಸಂಪರ್ಕಿಸಿದ್ದು, ಬಳಿಕ ಅಗ್ನಿಶಾಮಕದಳದವರು ಕಾರ್ಯಾಚರಣೆ ನಡೆಸಿದಾಗ ಕೆರೆಯಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ. ಮಂಗಳೂರಿನಲ್ಲಿ ಶವದ ಮಹಜರು ಕಾರ್ಯ ನಡೆಸಿ ರವಿವಾರ ಸಂಜೆ ಅಂತ್ಯಕ್ರಿಯೆ ನಡೆಸಲಾಗಿದೆ.
ಸ್ಥಳಕ್ಕೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಭೇಟಿ ನೀಡಿ ತನಿಖಾ ಕಾರ್ಯ ನಡೆಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.