ಕರಾವಳಿ

ಕಾಂಗ್ರೆಸ್ ಪಕ್ಷವನ್ನು ನಾಶ ಮಾಡುತ್ತಿರುವ ಸಿ.ಎಂ.ಸಿದ್ದರಾಮಯ್ಯರವರೇ ನೈತಿಕತೆ ಇದ್ದರೆ ರಾಜಿನಾಮೆ ನೀಡಿ : ಪೂಜಾರಿ

Pinterest LinkedIn Tumblr

Poojary_Press_Meet_1

ಮಂಗಳೂರು : ಮಂತ್ರಿಮುಖ್ಯ ಸಿದ್ದ ರಾಮಯ್ಯ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ.ಒಬ್ಬ ವ್ಯಕ್ತಿಗಾಗಿ ಕಾಂಗ್ರೆಸ್ ಪಕ್ಷವನ್ನೇ ನಾಶ ಮಾಡಲು ಹೊರಟಿದ್ದಾರೆ. ಸಿಎಂ ಬಗ್ಗೆ ಜನರಿಗೆ ಜಿಗುಪ್ಸೆ ಉಂಟಾಗಿದೆ. ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ನೈತಿಕತೆ ಇದ್ದರೆ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಆಗ್ರಹಿಸಿದ್ದಾರೆ.

ದ.ಕ.ಜಿಲ್ಲಾ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನಡೆದೊಕೊಂಡ ರೀತಿ ಜನರ ಬಾವನೆಗೆ ವಿರುದ್ಧವಾಗಿದೆ. ಎಫ್ಐಆರ್ ದಾಖಲಿಸಲು ಗಣಪತಿಯವರು ನೀಡಿದ ಹೇಳಿಕೆ ಸಾಕು. ಆದರೂ ಇಲ್ಲಿಯ ತನಕ ಎಫ್ಐಆರ್ ದಾಖಲಾಗಿಲ್ಲ. ಲಜ್ಜಾಹೀನರಾಗಿ ಸಚಿವ ಜಾರ್ಜ್‌ ರಕ್ಷಣೆಗೆ ನಿಂತು ಪಕ್ಷದ ಮಾನವನ್ನು ಹರಾಜು ಹಾಕುತ್ತಿದ್ದೀರಿ. ಕಾಂಗ್ರೆಸ್ ಪಕ್ಷವನ್ನು ಕೊಲ್ಲುತ್ತಿದ್ದೀರಿ. ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆಯುತ್ತಿಬೆ. ಜನರಿಗೆ ಸರ್ಕಾರದ ಮೇಲೆ ಜಿಗುಪ್ಸೆ, ತಾತ್ಸಾರ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

Poojary_Press_Meet_2

ಸಿದ್ದರಾಮಯ್ಯ ಅವರು ಸಚಿವರು, ಪೊಲೀಸ್ ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ. ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗಣಪತಿ ಧರ್ಮಪತ್ನಿ ಪಾವನಾ ಮಾನ ತೆಗೆಯುವ ಕೆಲಸ ಮಾಡುತ್ತಿದ್ದೀರಿ. ಅವರ ಹೇಳಿಕೆ ಪಡೆದಿಲ್ಲ, ಹೇಳಿಕೆ ಯಾಕೆ ಪಡೆದಿಲ್ಲ? ನಿಮಗೆ ನಾಚಿಕೆಯಾಗಬೇಕು. ಯಾಕಾಗಿ, ಯಾರಿಗಾಗಿ ಈ ಮೂವರನ್ನು ರಕ್ಷಿಸುತ್ತಿದ್ದೀರಿ. ನಿಮಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾದರೇ ಎಂದು ಪೂಜಾರಿ ಪ್ರಶ್ನಿಸಿದರು

ರಾಜ್ಯದ ಜನತೆ ಕಾಂಗ್ರೆಸ್ ಬಗ್ಗೆ ಅವಹೇಳನ ಕಾರಿಯಾಗಿ ಟೀಕಿಸುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಸಿದ್ದರಾಮಯ್ಯರವರ ಮೂರು ವರ್ಷದ ಸೇವೆ ಜನರಿಗೆ ಸಾಕು.ಕಾಂಗ್ರೆಸ್ ನ ಉಳಿವಿಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗುವ ಅರ್ಹತೆಯ ಸಾಕಷ್ಟು ನಾಯಕರಿದ್ದಾರೆ. ದಲಿತರಲ್ಲಿ ಡಾ. ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಉಗ್ರಪ್ಪ, ಬಿಲ್ಲವರಲ್ಲಿ ಕಾಗೋಡು ತಿಮ್ಮಪ್ಪ, ಒಕ್ಕಲಿಗರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್, ಲಿಂಗಾಯತರಲ್ಲಿ ಹೆಚ್.ಕೆ. ಪಾಟೀಲ್, ಎಸ್.ಆರ್. ಪಾಟೀಲ, ಕುರುಬರಲ್ಲಿ ಹೆಚ್. ವಿಶ್ವನಾಥ್, ಹೆಚ್.ಎಂ. ರೇವಣ್ಣ. ಇವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬಹುದು.

ಶಾಸಕಾಂಗ ಪಕ್ಷದ ಸಭೆ ಕರೆದು ಹೊಸ ನಾಯಕರನ್ನು ಆಯ್ಕೆ ಮಾಡಬೇಕು.ಶಾಸಕರು ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿ. ಸಿದ್ದರಾಮಯ್ಯನವರೇ ನಿಮಗೆ ಪಕ್ಷದ ಮೇಲೆ ಅಭಿಮಾನ ಇದ್ದರೆ ಕೂಡಲೇ ರಾಜೀನಾಮೆಯನ್ನು ನೀಡಿ ಹೊರಬನ್ನಿ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರೇ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪೂಜಾರಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಕಳ್ಳಿಗೆ ತಾರನಾಥ ಶೆಟ್ಟಿ, ಅರುಣ್ ಕುವ್ಯೆಲ್ಲೋ, ಮನಪಾ ಸದಸೈ ಅಪ್ಪಿ ಮುಂತಾದವರು ಉಪಸ್ಥಿತರಿದ್ದರು.

Comments are closed.