ಮಂಗಳೂರು: ಪಿಲಿಕುಳ ಡಾ| ಶಿವರಾಮ ಕಾರಂತ ನಿಸರ್ಗಧಾಮದ ಮೃಗಾಲಯಕ್ಕೆ ಮುಂದಿನ ಆರು ತಿಂಗಳೊಳಗೆ ಮಧ್ಯ ಆಫ್ರಿಕಾದಿಂದ ಜಿರಾಫೆ, ಚಿಂಪಾಂಜಿ ಹಾಗೂ ಝೀಬ್ರಾ ಜೋಡಿಗಳನ್ನು ಆಮದು ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತೇಕ ದೇಶದೊಳಗೆ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಒಂದು ಮೃಗಾಲಯದಿಂದ ಇನ್ನೊಂದು ಮೃಗಾಲಯಕ್ಕೆ ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ದಾನಿಗಳ ಸಹಕಾರ ಪಡೆದು ಪಿಲಿಕುಳಕ್ಕೆ ಮಧ್ಯ ಆಫ್ರಿಕಾದಿಂದ ಈ ಹೊಸಬರನ್ನು ಖರೀದಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಈ ಪ್ರಾಣಿಗಳನ್ನು ಖರೀದಿಸಲು ಈಗಾಗಲೇ ಪ್ರಾಯೋಜಕರನ್ನು ಸಂಪರ್ಕಿಸಿ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಲಾಗಿದೆ. ಸಹಕಾರಕ್ಕಾಗಿ ಈಗಾಗಲೇ ಕೆಲವೊಂದು ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಈ ಪ್ರಾಣಿಗಳಿಗೆ ಒಟ್ಟು ಸುಮಾರು 1.75 ಕೋ. ರೂ.ವೆಚ್ಚವಾಗಲಿದ್ದು, ಜಿರಾಫೆ ಜೋಡಿ 75 ಲಕ್ಷ ರೂ.ಗಳಿಗೆ, ಚಿಂಪಾಂಜಿ ಹಾಗೂ ಝೀಬ್ರಾಗಳ ಜೋಡಿಯನ್ನು ತಲಾ 50 ಲಕ್ಷ ರೂ.ಗಳಿಗೆ ಖರೀದಿಸಲು ಸಿದ್ಧತೆ ನಡೆಯುತ್ತಿದೆ.
ಪ್ರಸ್ತುತ ಪಿಲಿಕುಳದಲ್ಲಿ ಅಪರೂಪದ 120 ಜಾತಿಯ ಪ್ರಾಣಿ, ಪಕ್ಷಿ, ಉರಗಗಳಿವೆ. ಹುಲಿ, ಚಿರತೆ, ಆನೆ ಸೇರಿದಂತೆ ಒಟ್ಟು 1,200ದಷ್ಟು ವನ್ಯಜೀವಿಗಳನ್ನು ಹೊಂದಿದ್ದು, ಇವುಗಳಲ್ಲಿ ವಿನಾಶದಂಚಿನಲ್ಲಿರುವ ವನ್ಯಜೀವಿಗಳೂ ಇರುವುದು ವಿಶೇಷ. ಇಲ್ಲಿನ ಪ್ರಾಣಿಗಳನ್ನು ವಿನಿಮಯ ಮಾಡುವ ಕುರಿತು ಕೂಡ ಪ್ರಯತ್ನ ನಡೆದಿದೆ. ಆಫ್ರಿಕಾದಿಂದ ಜೋಡಿ ಪ್ರಾಣಿಗಳನ್ನು ತರುವುದರಿಂದ ಎಲ್ಲವನ್ನೂ ಒಟ್ಟಿಗೆ ತರುವಂತಿಲ್ಲ. ಆ ಪ್ರಾಣಿಗಳನ್ನು ಮಧ್ಯ ಆಫ್ರಿಕಾದಿಂದ ವಿಮಾನದ ಮೂಲಕ ತರಬೇಕಾಗಿರುವುದರಿಂದ ಹಲವಾರು ರೀತಿಯ ಪ್ರಕ್ರಿಯೆಗಳನ್ನು ನಿರ್ವಹಿಸಲು ಹೆಚ್ಚಿನ ಸಮಯಬೇಕು. ಆಮದು ಕಾರ್ಯ ಸುಸೂತ್ರವಾಗಿ ನಡೆದರೆ ಮುಂದಿನ 6 ತಿಂಗಳಲ್ಲಿ ಈ ಪ್ರಾಣಿಗಳು ಪಿಲಿಕುಳ ತಲುಪಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು..
ಪಿಲಿಕುಳ ನಿಸರ್ಗಧಾಮವು, ಪಿಲಿಕುಳ ಮೃಗಾಲಯದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮಧ್ಯ ಆಫ್ರಿಕಾದಿಂದ ಈ ಪ್ರಾಣಿಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಮಾಹಿತಿ ನೀಡಿದರು.
Comments are closed.