ಕಾಸರಗೋಡು, ಜು.15 : ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ನಿಷೇಧಿತ ಪಾನ್ ಮಸಾಲಾ ಉತ್ಪನ್ನಗಳನ್ನು ವಿದ್ಯಾನಗರ ಠಾಣಾ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ತಳಂಗರೆಯ ಅನಾಸ್ ಮತ್ತು ಜುನೈದ್ ಎಂದು ಗುರುತಿಸಲಾಗಿದೆ.
ಒಂದೂವರೆ ಕ್ವಿ೦ಟಾಲ್ ಪಾನ್ ಮಸಾಲ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರು ಗೋಣಿ ಚೀಲಗಳಲ್ಲಿ ತುಂಬಿಸಿ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಕರ್ನಾಟಕದಿಂದ ಎರ್ನಾಕುಲಂ ಕಡೆಗೆ ಇದನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಥೋಮ್ಸನ್ ಜೋಸ್‌ರವರಿಗೆ ಲಭಿಸಿದ ಖಚಿತ ಮಾಹಿತಿಯಂತೆ ವಿದ್ಯಾನಗರ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಪರಾರಿಯಾಗಿದ್ದು, ಬಳಿಕ ಬೆನ್ನಟ್ಟಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದರು.
ಕೇರಳದಲ್ಲಿ ಪಾನ್ ಮಸಾಲ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದ್ದು, ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕೇರಳಕ್ಕೆ ಪಾನ್ ಮಸಾಲ ಉತ್ಪನ್ನಗಳು ಅಕ್ರಮವಾಗಿ ಹರಿದು ಬರುತ್ತಿದೆ. ಶಾಲಾ ಪರಿಸರ ಹಾಗೂ ಹೊರರಾಜ್ಯಗಳ ಕಾರ್ಮಿಕರನ್ನು ಕೇಂದ್ರೀಕರಿಸಿ ಸಾಗಾಟ ಹಾಗೂ ಮಾರಾಟ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ತಪಾಸಣೆ ಮತ್ತು ನಿಗಾ ಇಡಲು ತೀರ್ಮಾನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments are closed.