ಮಂಗಳೂರು,ಜು.18: ಪೋಷಕರು ತಮ್ಮ ಮಕ್ಕಳನ್ನು ಆರೇಳು ವರ್ಷಗಳ ಪ್ರಾಯದಲ್ಲೇ ಓಡುವುದು, ಜಿಗಿಯುವುದು ಮೊದಲಾದ ಆಟಗಳ ಮೂಲಕ ಕ್ರೀಡಾ ಮನೋಭಾವ ಬೆಳೆಸಿದಲ್ಲಿ ಮುಂದೆ ಮಕ್ಕಳು ಕ್ರೀಡಾಲೋಕದಲ್ಲಿ ಸದೃಢ ಚಾಂಪಿಯನ್ಗಳಾಗಿ ಮೆರೆಯಲು ಸಾಧ್ಯವಾಗುತ್ತದೆ ಎಂದು ಟೆನಿಸ್ನ ಮಾಜಿ ಚಾಂಪಿಯನ್, ಖ್ಯಾತ ಟೆನಿಸ್ ಕೋಚ್ ಎರ್ನಿಕೋ ಪಿಪರ್ನೊ ಸಲಹೆ ನೀಡಿದ್ದಾರೆ.
ಕ್ರೀಡೆಯ ಮೂಲಕ ದೈಹಿಕ ಸದೃಢತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕ್ರೀಡಾ ಸಾಮಗ್ರಿಗಳನ್ನು ಪೂರೈಸುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಹಾಮ್ಸ್ ಮಾರ್ಟ್ ವತಿಯಿಂದ ಹಮ್ಮಿಕೊಂಡಿರುವ ‘ಸದೃಢ ಮತ್ತು ಉಜ್ವಲ’ ಅಭಿಯಾನ’ಕ್ಕೆ ಮಾಜಿ ರಣಜಿ ಕ್ರಿಕೆಟ್ ಆಟಗಾರ ಅರ್ಜಿತ್ ಘೋಷ್ ಅವರೊಂದಿಗೆ ಚಾಲನೆ ನೀಡಿ ಬಳಿಕ ಎರ್ನಿಕೋ ಪಿಪರ್ನೊ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರತಿನಿತ್ಯ ಕ್ರೀಡಾಪಟುಗಳು ಈ ಅಭಿಯಾನದಲ್ಲಿ ಭಾಗವಹಿಸಿ ಕ್ರೀಡಾಳುಗಳಿಗೆ ಪ್ರೋತ್ಸಾಹ, ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ. ಕ್ರೀಡೆಗಳಲ್ಲಿ ಆಸಕ್ತಿ ಇರುವವರು ಮತ್ತು ಕ್ರೀಡೆಯ ಮೂಲಕ ದೇಹ ಸದೃಢತೆಯನ್ನು ಬಯಸುವರಿಗಾಗಿ ಬಾಸ್ಕೆಟ್ ಬಾಲ್, ಹ್ಯಾಂಡ್ ಬಾಲ್, ಸೈಕ್ಲಿಂಗ್, ಆರ್ಚರಿ, ಟೇಬಲ್ ಟೆನ್ನಿಸ್, ಸ್ಕಿಪ್ಪಿಂಗ್, ಟ್ರೆಡ್ಮಿಲ್ ಓಟ, ಟ್ರಾಂಪಲಿನ್ ಜಂಪಿಂಗ್, ಇನ್ ಹೌಸ್ ಗಾಲ್ಫ್ ತರಬೇತಿ, ಸ್ಕೇಟಿಂಗ್ ಮೊದಲಾದ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದವರು ಹೇಳಿದರು.
ಹಾಮ್ಸ್ ಮಾರ್ಟ್ ಳಿತ ನಿರ್ದೇಶಕ ವೌರಿಸ್ ಡೇಸಾ ಅವರು ಮಾತನಾಡಿ, ಕ್ರೀಡೆಯ ಬಗ್ಗೆ ಚರ್ಚೆ ಮತ್ತು ಸಂವಾದಕ್ಕೂ ಹಾಮ್ಸ್ ಮಾರ್ಟ್ ಅವಕಾಶ ಕಲ್ಪಿಸುತ್ತಿದ್ದು, ಕ್ರೀಡೆಗೆ ಉತ್ತೇಜನ ನೀಡಲು ಬಯಸುವ ಕ್ರೀಡಾಪಟುಗಳು ಸಂಸ್ಥೆಯ ಪಾಲುದಾರರಾಗಿಯೂ ಕಾರ್ಯ ನಿರ್ವಹಿಸಲು ಅವಕಾಶವಿದೆ ಎಂದು ಹೇಳಿದರು.
ಟಿ.ವಿ ನಿರೂಪಕರಿಗೆ ಅಗತ್ಯವಿರುವ ಮಾತಿನ ಕಲೆ ಮತ್ತು ಸಂವಹನ ಕೌಶಲ್ಯವನ್ನು ವೃದ್ದಿಸಲು ಆಯ್ದ 50 ಮಂತಿಗೆ ತರಬೇತಿ ನೀಡಲಾಗುವುದು. ತರಬೇತಿಗೆ ಆಯ್ಕೆ ಪ್ರಕ್ರಿಯೆ ಆಗಸ್ಟ್ 1ರಿಂದ ಆರಂಭಗೊಳ್ಳಲಿದೆ. ಇದಕ್ಕಾಗಿ, ಜುಲೈ 20ರಿಂದ ಹಾಮ್ಸ್ ಮಾರ್ಟ್ ನಲ್ಲಿ ನೋಂದಣಿ ಕಾರ್ಯ ಆರಂಭಗೊಳ್ಳಲಿದೆ ಎಂದು ಪಿ.ಎ. ಜೋಶ್ ತಿಳಿಸಿದ್ದಾರೆ.
ಉದ್ಯೋಗಾವಕಾಶಕ್ಕೆ ಒತ್ತು ನೀಡುವ ಉದ್ದೇಶದಿಂದ ಹಾಮ್ಸ್ ಮಾರ್ಟ್ ‘ವಿಶ್ವದರ್ಜೆಯ 50 ಟಿವಿ ನಿರೂಪಕರ ಗುರಿ’ ಎಂಬ ವಿನೂತನ ಕಾರ್ಯಕ್ರಮವೊಂದಕ್ಕೆ ಮುಂದಾಗಿದೆ. ಒಎನ್ಜಿಸಿ- ಎಂ ಆರ್ ಪಿ ಎಕ್ ನ ಮಾಜಿ ಪ್ರಧಾನ ವ್ಯವಸ್ಥಾಪಕರಾಗಿರುವ ಪಿ.ಎ. ಜೋಶ್ ಅವರ ನಾಯಕತ್ವದಲ್ಲಿ ಟಿವಿ ನಿರೂಪಕರಾಗುವವರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ.
ಭಾರತೀಯ ಕ್ರೀಡಾ ಪಟುಗಳಲ್ಲಿ ಬಾಲ್ಯದಲ್ಲಿ ದೇಹದ ಸದೃಢತೆಗೆ ಹಾಗೂ ತರಬೇತಿಗೆ ನೀಡುವ ಪ್ರೋತ್ಸಾಹ, ಬೆಂಬಲದ ಕೊರತೆಯಿಂದಾಗಿ ಕ್ರೀಡಾ ಕ್ಷೇತ್ರದಲ್ಲಿ ವೈಯಕ್ತಿಕ ಚಾಂಪಿಯನ್ಗಳ ಸಂಖ್ಯೆ ವಿರಳಕ್ಕೆ ಕಾರಣವಾಗುತ್ತಿದೆ. ಟೆನಿಸ್ ಕ್ರೀಡೆಗೆ ಮಕ್ಕಳನ್ನು ಪೋಷಕರು ಕಳುಹಿಸುವಾಗ ಸುಮಾರು 11 ವರ್ಷಗಳು ಕಳೆದಿರುತ್ತದೆ. ಆದರೆ ಅಷ್ಟರವರೆಗೆ ಮಕ್ಕಳಿಗೆ ಓಡುವುದು, ಜಿಗಿಯುವುದು, ಹಾರುವುದು ಮೊದಲಾದ ಕ್ರೀಡೆಯ ಪ್ರಾಥಮಿಕ ಹಂತದ ತರಬೇತಿಯೂ ಇಲ್ಲದಿರುವುದರಿಂದ ಅವರನ್ನು ಇಂತಹ ಚಟುವಟಿಕೆಗಳಿಗೆ ಒಗ್ಗಿಸಿಕೊಳ್ಳಬೇಕಾದರೆ ಮೂರ್ನಾಲ್ಕು ವರ್ಷಗಳನ್ನು ವ್ಯಯಿಸಬೇಕಾಗುತ್ತದೆ. ಮಕ್ಕಳಿಗೆ ಸಿಕ್ಕಿದ್ದನ್ನೆಲ್ಲಾ ತಿನ್ನಿಸುವ ಪೋಷಕರು ಐದಾರು ವರ್ಷಗಳಲ್ಲಿಯೇ ಮಕ್ಕಳಿಗೆ ಆಹಾರ ಸೇವನೆ ಬಗ್ಗೆ ಶಿಸ್ತಿನ ಜತೆಗೇ ಕ್ರೀಡಾ ಚಟುವಟಿಕೆಗಳ ಬಗ್ಗೆ ಪ್ರೋತ್ಸಾಹಿಸಿದರೆ ಮುಂದೆ ಆ ಮಗು ಸದೃಢ ಚಾಂಪಿಯನ್ ಆಗುವುದರಲ್ಲಿ ಸಂದೇಹವೇ ಬೇಡ ಎಂದು ಹೇಳಿದರು.
ಟೆನ್ನಿಸ್ ಲೋಕದ ಚಾಂಪಿಯನ್ಗಳಾದ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಝಾ ಮೊದಲಾದವರಿಗೆ ಟೆನಿಸ್ ತರಬೇತುದಾರರೂ ಆಗಿರುವ ಎರ್ನಿಕೋ ತಮ್ಮ ಅನುಭವಗಳನ್ನು ಸುದ್ದಿಗಾರರ ಜತೆ ಹಂಚಿಕೊಂಡರು. ಲಿಯಾಂಡರ್ ಪೇಸ್ರ ತಂದೆಯ ಆಗ್ರಹದ ಮೇರೆಗೆ ಅವರಿಗೆ ಆರಂಭದಲ್ಲಿ ಉಚಿತವಾಗಿ ತರಬೇತು ನೀಡಲಾರಂಭಿಸಿದೆ. ಇದರ ಪರಿಣಾಮವಾಗಿಯೇ ಲಿಯಾಂಡರ್ 1991ರಲ್ಲಿ ಯುಎಸ್ ಓಪನ್ ಚಾಂಪಿಯನ್ಶಿಪ್ ತಮ್ಮದಾಗಿಸಿಕೊಂಡರು. ಕ್ರೀಡಾ ತರಬೇತುದಾರರು ಕೂಡಾ ತಮಗೇನು ಅಗತ್ಯ ಎಂಬುದಕ್ಕಿಂತ ಮುಖ್ಯವಾಗಿ ತಾನು ತರಬೇತುಗೊಳಿಸುತ್ತಿರುವ ಕ್ರೀಡಾಪಟುವಿನ ಸಾಮರ್ಥ್ಯ, ಆತನ ಬೇಕು ಬೇಡಗಳ ಬಗ್ಗೆ ಹೆಚ್ಚಿನ ಒತ್ತು ನೀಡಿದಾಗ ಕ್ರೀಡಾ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಾಗುತ್ತದೆ. ಲಿಯಾಂಡರ್ ಹಲವಾರು ಏಳು ಬೀಳುಗಳ ನಡುವೆಯೂ ಪ್ರಸ್ತುತ 42ರ ಹರೆಯದಲ್ಲೂ ಟೆನಿಸ್ ಲೋಕದ ತಾರೆಯಾಗಿ ಕಂಗೊಳಿಸುತ್ತಿರಲು ಕಾರಣ, ಆತನೊಬ್ಬ ಮಹಾನ್ ಹೋರಾಟಗಾರ ಎಂದು ಬಣ್ಣಿಸಿದರು.
ಕೊಲ್ಕತ್ತಾದಲ್ಲಿ ತನ್ನ ಎರ್ನಿಕೋ ಪಿಪರ್ನೊ ಟೆನ್ನಿಸ್ ಟ್ರಸ್ಟ್ ಮೂಲಕ ತಾನೂ ನಾಲ್ಕೈದು ಮಂದಿ ಯುವ ಟೆನ್ನಿಸ್ ಕ್ರೀಡಾಪಟುಗಳಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ ಪಿಪರ್ನೊ, 1971ರ ಅವಧಿಯಲ್ಲಿ ಕ್ರೀಡೆಯನ್ನು ವೃತ್ತಿಯಾಗಿಸಿದವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದರೆ, ಪ್ರಸ್ತುತ ಬ್ಯಾಡ್ಮಿಂಟನ್, ಕಬಡ್ಡಿ ಮೊದಲಾದ ಕ್ರೀಡೆಗಳ ಮೂಲಕ ಕ್ರೀಡೆಯನ್ನೇ ವೃತ್ತಿಯಾಗಿಸಿಕೊಂಡು ಜೀವನ ಸಾಗಿಸುತ್ತಿರುವ ಸಂಖ್ಯೆ ಸಾವಿರಾರು ಆಗಿದೆ. ಅದೆಷ್ಟೋ ಸಂಖ್ಯೆಯ ಕ್ರೀಡಾಪಟುಗಳು ಕ್ರೀಡೆಯ ಮೂಲಕ ಉಜ್ವಲ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಇಂದು ಕ್ರೀಡೆಗೆ ಹೆಚ್ಚಿನ ಸೌಲಭ್ಯಗಳಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಂಪ್ಯೂಟರ್ ಗೇಮ್ಗಳಿಗೆ ಸೀಮಿತಗೊಳಿಸುವ ಬದಲು ಮೈದಾನದಲ್ಲಿ ದೇಹಕ್ಕೆ ವ್ಯಾಯಾಮ ನೀಡುವ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಅವರು ಅಭಿಪ್ರಾಯಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಮಾಜಿ ರಣಜಿ ಕ್ರಿಕೆಟ್ ಆಟಗಾರ ಅರ್ಜಿತ್ ಘೋಷ್ ಮಾತನಾಡಿ, ಕ್ರೀಡೆಯು ದೈಹಿಕ ಹಾಗೂ ಮಾನಸಿಕ ದೃಢತೆಯ ಜತೆಗೆ ಜೀವನ ಕೌಶಲ್ಯವನ್ನು ಕಲಿಸುತ್ತದೆ ಎಂದರು. ಕ್ರೀಡಾ ಮನೋಭಾವದ, ಕ್ರೀಡೆಯನ್ನು ತನ್ನದಾಗಿಸಿಕೊಂಡವರು ಜೀವನದಲ್ಲಿ ಎದುರಾಗುವ ಯಾವುದೇ ರೀತಿಯ ಸಂಕಷ್ಟಗಳನ್ನು ಎದುರಿಸಲು ಸಮರ್ಥರಾಗಿರುತ್ತಾರೆ ಎಂದು ಅವರು ಹೇಳಿದರು.
ಒಲಿಂಪಿಕ್ಸ್ನ ಟೆನ್ನಿಸ್ ಮಿಕ್ಸ್ಡ್ ಡಬಲ್ಸ್ನಲ್ಲಿ ಭರವಸೆ: ಎರ್ನಿಕೋ ಪಿಪರ್ನೊ
ಪ್ರಸಕ್ತ ಸಾಲಿನ ಒಲಿಂಪಿಕ್ಸ್ನಲ್ಲಿ ಟೆನ್ನಿಸ್ನಲ್ಲಿ ಮಿಕ್ಸ್ಡ್ ಡಬಲ್ಸ್ನಲ್ಲಿ ರೋಹನ್ ಮತ್ತು ಸಾನಿಯಾ ಮಿರ್ಝಾ ಮೇಲೆ ಸಾಕಷ್ಟು ಭರವಸೆ ಇದೆ. ಸಿಂಗಲ್ಸ್ನಲ್ಲಿ ಲಿಯಾಂಡರ್ ಪೇಸ್ ಆಡುತ್ತಿದ್ದರೂ, ಅವರಿಗೆ 42 ವರ್ಷವಾಗಿರುವ ಕಾರಣ ಅತಿಯಾದ ಭರವಸೆಯನ್ನು ಇಟ್ಟುಕೊಳ್ಳಲು ಸಾಧ್ಯವಾಗದು. ಹಾಗಿದ್ದರೂ ಅದೃಷ್ಟ ಹೇಗಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಒಲಿಂಪಿಕ್ಸ್ನಲ್ಲಿ ಭಾರತೀಯ ಟೆನ್ನಿಸ್ ಕ್ರೀಡಾಗಳುಗಳ ಕುರಿತಂತೆ ಖ್ಯಾತ ಟೆನಿಸ್ ಕೋಚ್ ಎರ್ನಿಕೋ ಪಿಪರ್ನೊ ಅಭಿಪ್ರಾಯಿಸಿದ್ದಾರೆ.
Comments are closed.