ಕರಾವಳಿ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ತಿರುಪತಿ ಭಕ್ತರ ದಂಡು; ಪೇಜಾವರ ಶ್ರೀಗಳಿಗೆ ಗುರು ವಂದನೆ

Pinterest LinkedIn Tumblr

ಉಡುಪಿ: ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಆಚರಣೆಯ ದಿನದಂದು ತಮ್ಮ ಗುರುಗಳನ್ನು ಸ್ಮರಿಸಿ ಗೌರವಿಸುವ ಸಂಪ್ರದಾಯವಿದೆ. ಪೊಡವಿಗೊಡೆಯನ ಕ್ಷೇತ್ರವಾದ ಉಡುಪಿ ಕೃಷ್ಣ ಮಠದಲ್ಲಿ ತಿರುಪತಿಯ ಭಕ್ತರ ದಂಡೇ ನೆರೆದಿತ್ತು. ಭಜನೆ, ನೃತ್ಯದ ಮೂಲಕ ಕೃಷ್ಣನನ್ನು ನೆನೆದರು. ತಿರುಪತಿಯ ಭಕ್ತರು ಪೊಡವಿಗೊಡೆಯನ ಕ್ಷೇತಕ್ಕೆ ಆಗಮಿಸಿ ತಮ್ಮ ಭಕ್ತಿಯನ್ನು ಪ್ರದರ್ಶಿಸಿದ ಅಪರೂಪದ ಕ್ಷಣವಿದು.

Udupi_Shri Krishna Mutt_Udupi (1) Udupi_Shri Krishna Mutt_Udupi (2)

ಆಷಾಡ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಆಚರಣೆ ಈ ಹಿಂದಿನಿಂದಲೂ ನಡೆದು ಬಂದ ಆಚರಣಾ ಪದ್ದತಿಯಾಗಿದೆ. ಈ ದಿನ ಗುರುಗಳನ್ನು ಸ್ಮರಿಸಿ, ಅವರಿಗೆ ಗೌರವ ನೀಡುವುದು ಪದ್ದತಿ. ಈ ಹಿನ್ನಲೆಯಲ್ಲಿ ಉಡುಪಿಯ ಕೃಷ್ಣನ ಕ್ಷೇತ್ರದಲ್ಲೂ ಪೇಜಾವರ ಶ್ರೀಗಳಿಗೆ ಗೌರವ ವಂದನೆ ನೀಡಲಾಯಿತು. ಈ ಗೌರವ ವಂದನೆ ನೀಡಿದ್ದು ಆಂದ್ರ ಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಮುಖ್ಯಸ್ಥರಾದ ಆನಂದ ತೀರ್ಥಾಚಾರ್ಯ ಪಗಡಾಲ್ ಅವರು. ಕಳೆದ ಹಲವು ವರ್ಷಗಳಿಂದ ದಾಸ ಸಾಹಿತ್ಯ ಪ್ರಾಜೆಕ್ಟ್ ಗುರು ಪೂರ್ಣಿಮಾ ದಿನ ಗುರುಗಳಿಗೆ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಹಿನ್ನಲೆಯಲ್ಲಿ ಈ ಭಾರಿ ಐತಿಹಾಸಿಕ ಪರ್ಯಾಯದ ಪೀಠಾರೋಹಣವನ್ನು ಏರಿದ ಪೇಜಾವರ ಶ್ರೀಗಳಿಗೆ ಈ ಗೌರವ ವಂದನೆಯನ್ನು ನೀಡಲಾಯಿತು. ತಿರುಪತಿ ದೇವರ ಪ್ರಸಾದ ಸಹಿತ ಸೀರೆ, ಗುರು ಕಾಣಿಕೆಯನ್ನು ನೀಡಲಾಯಿತು.

ಪೊಡವಿಗೊಡೆಯನ ಕ್ಷೇತ್ರದಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರ ಭಜನೆ, ನೃತ್ಯ ಈ ಗುರು ಪೂರ್ಣಿಮೆಗೆ ವಿಶೇಷ ಮೆರುಗನ್ನು ನೀಡಿತು. ದಾಸ ಸಾಹಿತ್ಯ ಪ್ರಾಜೆಕ್ಟ್ ನ ಮೂಲಕ ೫ ಸಾವಿರ ಮಹಿಳಾ ಭಜನಾ ತಂಡದ ಸದಸ್ಯರು ರಥಬೀದಿಯಲ್ಲಿ ಭಜನೆ, ನೃತ್ಯವನ್ನು ಮಾಡುವ ಮೂಲಕ ದೇವರನ್ನು ನೆನೆದರು. ಸುರಿಯುತ್ತಿರುವ ಮಳೆಯನ್ನು ಕೂಡಾ ಲೆಕ್ಕಿಸದೇ ಭಜನೆ, ನೃತ್ಯದಲ್ಲಿ ತಲ್ಲೀನರಾಗಿದ್ದು ಕಂಡು ಬಂತು. ತಿರುಪತಿಯಿಂದ ಗುರುವಂದನೆ ಸ್ವೀಕರಿಸಿದ ಪೇಜಾವರ ಶ್ರೀಗಳು ತಿರ್ಪತಿಯ ಭಕ್ತರು ಮಳೆಯ ಜೊತೆ ಭಕ್ತಿಯ ಮಳೆಯನ್ನು ಹರಿಸಿದ್ದೀರಿ ಎಂದು ಮಹಿಳಾ ಭಕ್ತರ ಹಾಗೆನೇ ದಾಸ ಸಾಹಿತ್ಯದ ಕಾರ್ಯವನ್ನು ಶ್ಲಾಘಿಸಿದರು.

ಒಟ್ಟಿನಲ್ಲಿ ಗುರು ಪೂರ್ಣಿಮೆಯ ಅರ್ಥ ಪೂರ್ಣವಾದ ಕಾರ್ಯಕ್ರಮ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸಂಪನ್ನಗೊಂಡಿದ್ದು ಮೊದಲ ಬಾರಿಗೆ ತಿರುಪತಿಯ ೫ ಸಾವಿರಕ್ಕೂ ಹೆಚ್ಚು ಭಕ್ತರ ದಂಡು ಆಗಮಿಸಿದ್ದು ವಿಶೇಷ ಮೆರುಗಿಗೆ ಕಾರಣವಾಗಿತ್ತು.

Comments are closed.