ಮಂಗಳೂರು: ದುಷ್ಕರ್ಮಿಗಳಿಂದ ದಾಳಿಗೊಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಗಾಯಾಳುಗಳನ್ನು ಬಲವಂತವಾಗಿ ಆಸ್ಪತ್ರೆಯಿಂದ ಹೊರಕಳಿಸಿದ ಅಮಾನವೀಯ ಘಟನೆಯೊಂದು ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾಗಿದೆ.
ಧರ್ಮೆಂದ್ರ ಎಸ್ ಪೂಜಾರಿ ಹಾಗೂ ಧರ್ಮೆಂದ್ರ ಹೆಚ್ ಪೂಜಾರಿ ಎಂಬವರೇ ಆಸ್ಪತ್ರೆಯಿಂದ ಬಲವಂತಾಗಿ ಬಿಡುಗಡೆಗೊಂಡ ಗಾಯಾಳುಗಳು.
ಕಳೆದ ಶನಿವಾರ ರಾತ್ರಿ ಮೂಡುಬಿದಿರೆ ಸಮೀಪದ ಮಿಜಾರಿನಲ್ಲಿ ಧರ್ಮೆಂದ್ರ ಎಸ್ ಪೂಜಾರಿ ಹಾಗೂ ಧರ್ಮೆಂದ್ರ ಹೆಚ್ ಪೂಜಾರಿ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿಮಾಡಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ನಮ್ಮನ್ನು ಬಲವಂತವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.
ಇದೀಗ ವೆನ್ಲಾಕ್ ಆಸ್ಪತ್ರೆಯಿಂದ ಮೂಡುಬಿದಿರೆ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿರುವ ಈ ಇಬ್ಬರು ಗಾಯಾಳುಗಳ ಪೈಕಿ ಧರ್ಮೆಂದ್ರ ಹೆಚ್. ಪೂಜಾರಿ ತುಂಬಾ ಅಸ್ವಸ್ಥಗೊಂಡು ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿದ್ದರೂ, ಆಸ್ಪತ್ರೆಯಿಂದ ಬಲವಂತವಾಗಿ ಡಿಸ್ಚಾರ್ಜ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಟ್ಟಡದ ಸೆಂಟ್ರಿಂಗ್ ಗುತ್ತಿಗೆದಾರನಾದ ನಾನು ಶಿರ್ತಾಡಿಯಲ್ಲಿ ಕಟ್ಟಡದ ಕೆಲಸ ಮಾಡುತ್ತಿದ್ದು ಶನಿವಾರ ಎಂದಿನಂತೆ ಕೆಲಸಗಾರರಿಗೆ ಸಂಬಳ ವಿತರಿಸಿ ಧಮೇಂದ್ರ ಹೆಚ್. ಪೂಜಾರಿ ಹಾಗೂ ದೇವು ಯಾನೆ ಮುನೀರ್‌ನನ್ನು ಬೈಕ್‌ನಲ್ಲಿ ಕುಳ್ಳಿರಿಸಿ ರಾತ್ರಿ 8.30ರ ಸುಮಾರಿಗೆ ಮಿಜಾರು ಉಕರಿಯಲ್ಲಿರುವ ಅವರ ಮನೆ ಬಳಿಗೆ ಬಂದಿದ್ದು ಈ ವೇಳೆ ಏಳು ಬೈಕ್ ಹಾಗೂ ಒಂದು ಕಾರ್‌ನಲ್ಲಿ ಬಂದ 30 ಮಂದಿಯ ತಂಡ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಧರ್ಮೆಂದ್ರ ಎಸ್ ಪೂಜಾರಿ ತಿಳಿಸಿದ್ದಾರೆ.
ತಕ್ಷಣ ಸ್ಥಳೀಯರು ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಂದ 108 ಆ್ಯಂಬುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಮೈಯಲ್ಲಿ ರಕ್ತ ಸುರಿಯುತ್ತಲೆ ಇತ್ತು. ನೋವು ನಿವಾರಕ ಮಾತ್ರೆ ಮತ್ತು ಗ್ಲುಕೋಸ್ ಇಟ್ಟರು. ಭಾನುವಾರ ಸಂಜೆಯ ವರೆಗೂ ಸರಿಯಾದ ಚಿಕಿತ್ಸೆ ನೀಡಲಿಲ್ಲ. ಎದೆ ನೋವು ಸೊಂಟನೋವು ಇದೆ ಎಂದರೂ ಸರಿಯಾದ ಚಿಕಿತ್ಸೆ ನೀಡಿಲ್ಲ. ನಮಗೆ ಮೇಲಾಧಿಕಾರಿಗಳಿಂದ ಒತ್ತಡ ಇದೆ.ಇಂದೇ ಬಿಡುಗಡೆಗೊಳ್ಳಬೇಕೆಂದು ನಮ್ಮನ್ನು ಒತ್ತಾಯಿಸಿದರು. ಬಳಿಕ ಮಂಗಳವಾರ ಬೆಳಗ್ಗೆ ಇಟ್ಟಿದ್ದ ಗ್ಲುಕೋಸ್‌ನ್ನು ಅರ್ಧದಿಂದಲೇ ತುಂಡರಿಸಿ ತೆಗೆದು ಬಲವಂತವಾಗಿ ಬಿಡುಗಡೆಗೊಳಿಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.
Comments are closed.