ಮಂಗಳೂರು: ಮಾಲಿನ್ಯ ನಿಯಂತ್ರಣ ಮತ್ತು ಘನ ತ್ಯಾಜ್ಯ ವಿಲೇವಾರಿ ಕುರಿತು ಜನಜಾಗೃತಿ ಮೂಡಿಸಲು ನಗರದ ಯುವ ಸಂಗೀತಗಾರರ ‘ವಿಕ್’ ಮ್ಯೂಸಿಕ್ ಬ್ಯಾಂಡ್ ನಗರದಲ್ಲಿ ಆಂಟಿ ಪೊಲ್ಯುಷನ್ ಡ್ರೈವ್ ಪ್ರತಿಷ್ಠಾನದೊಂದಿಗೆ ಕೈಜೋಡಿಸಿದೆ.
ಯಾವುದೇ ಜನಪರ ಕಾರ್ಯಕ್ರಮದ ಬೆಂಬಲಕ್ಕೆ ನಿಲ್ಲುವ ಈ ಜಾಝ್ ಮತ್ತು ರಾಕ್ ಮ್ಯೂಸಿಕ್ ಕಲಾವಿದರ ತಂಡ ನಗರ ಪ್ರದೇಶದಲ್ಲಿ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ನಾಗರಿಕರ ಪಾತ್ರ ಮತ್ತು ನಗರದ ಸ್ವಚ್ಛತೆನ್ನು ಕಾಪಾಡಲು ಘನ ತ್ಯಾಜ್ಯ ವಿಲೇವಾರಿ ಕುರಿತು ಅರಿವು ಮೂಡಿಸಲು ಎಪಿಡಿ ಪ್ರತಿಷ್ಠಾನದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಮೂಲದಲ್ಲೇ ಹಸಿ, ಒಣಗಿದ ಮತ್ತಿತರ ಕಸ ವಿಗಂಡನೆ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಿಸುತ್ತಿರುವ ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಕಂಪನಿ ಕೂಡ ಸಂಗೀತ ತಂಡ ಮತ್ತು ಎಪಿಡಿ ಪ್ರತಿಷ್ಠಾನಕ್ಕೆ ಸಹಯೋಗ ನೀಡಿದೆ.
ಜನರನ್ನು ಆಕರ್ಷಿಸುವ ಶಕ್ತಿ ಸಂಗೀತಕ್ಕಿದ್ದು, ಜನರಲ್ಲಿ ಜಾಗೃತಿಯನ್ನು ಮೂಡಿಸಲು ಸಂಗೀತ ಅತ್ಯುತ್ತಮ ಮಾಧ್ಯಮವಾಗಿದೆ ಎಂಬುದು ಸಂಗೀತ ತಂಡದ ಸದಸ್ಯರ ಅಭಿಪ್ರಾಯ. ನಗರದ ಆಯ್ದ ಸ್ಥಳಗಳಲ್ಲಿ ಯುವ ಸಂಗೀತ ಕಲಾವಿದರು ರಾಕ್ ಮತ್ತು ಜಾಝ್ ಸಂಗೀತ ಪ್ರದರ್ಶನ ನೀಡಲಿದ್ದಾರೆ.
ಪರಿಸರ ಮಾಲಿನ್ಯ ಮತ್ತು ಘನತ್ಯಾಜ್ಯ ವಿಲೇವಾರಿ ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ಇವುಗಳನ್ನು ನಿವಾರಿಸಲು ಜಾಗೃತ ನಾಗರಿಕರ ಸಕ್ರಿಯ ಸಹಭಾಗಿತ್ವದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಗೀತ ಕಾರ್ಯಕ್ರಮ ಮೂಲಕ ಜನರನ್ನು ಉತ್ತೇಜಿಸುವ ಪ್ರಯತ್ನ ಇದಾಗಿದೆ ಎಂದು ಯುವ ಹಾಡುಗಾರ ಡಾ. ಜಾರ್ಜ್ ಜಾಕಬ್ ಅಭಿಪ್ರಾಯ.
ನಗರದಲ್ಲಿ ಆಯೋಜಿಸಲಾದ ಈ ಸಂಗೀತ ಕಾರ್ಯಕ್ರಮಗಳಿಂದ ಸಂಗ್ರಹವಾಗುವ ದೇಣಿಗೆಯನ್ನು ಎಪಿಡಿ ಪ್ರತಿಷ್ಠಾನ ಪರಿಸರ ಸಂರಕ್ಷಣಾ ಕಾರ್ಯಕ್ರಮಕ್ಕಾಗಿ ವಿನಿಯೋಗಿಸಲಿದೆ. ಸಂಗೀತ ಕಾರ್ಯಕ್ರಮಗಳ ದಿನಾಂಕ,ಸ್ಥಳ ಮತ್ತು ಕಲಾವಿದರ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
Comments are closed.