*ಯೋಗೀಶ್ ಕುಂಭಾಸಿ
ಕುಂದಾಪುರ: ಮನೆಯಲ್ಲಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ತನ್ನ ಬಗ್ಗೆ ಪೋಷಕರಲ್ಲಿ ಪ್ರೀತಿ ಇಲ್ಲ ಎಂದು ಡೆತ್ ನೊಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯ ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಬಿದ್ಕಲ್‌ಕಟ್ಟೆ ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಗಣೇಶ್ ಶೆಟ್ಟಿ ಅವರ ಪುತ್ರಿ ಪ್ರಗತಿ (16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಸ್ಥಳೀಯ ಬಿದ್ಕಲ್‌ಕಟ್ಟೆ ಸರಕಾರಿ ಕಾಲೇಜಿನ ಪ್ರಥಮ ಪಿಯೂಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ.
ಘಟನೆ ವಿವರ: ಪ್ರತಿಭಾನ್ವಿತೆಯಾಗಿದ್ದ ಪ್ರಗತಿ ಶೆಟ್ಟಿ ಬಡ ಕುಟುಂಬದವಳಾಗಿದ್ದು ತನ್ನ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸದವರೆಗೂ ಬಹುತೇಕ ಮನೆಯಿಂದ ದೂರವಿದ್ದು ಹಾಸ್ಟೇಲಲ್ಲಿ ಉಳಿದು ತನ್ನ ವಿದ್ಯಾರ್ಜನೆ ಮಾಡಿದ್ದಳು. ಹತ್ತನೇ ತರಗತಿಯ ಪರೀಕ್ಷೆಯಲ್ಲಿಯೂ ಉತ್ತಮ ಅಂಕ ಗಳಿಸಿದ ಆಕೆ ಬಿದ್ಕಲ್‌ಕಟ್ಟೆ ಸರಕಾರಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತಿದ್ದಳು. ಆಕೆ ವಿದ್ಯಾಭ್ಯಾಸಕ್ಕಾಗಿಯೇ ಬಾಡಿಗೆ ಮನೆಯಲ್ಲಿದ್ದ ಗಣೇಶ್ ಶೆಟ್ಟಿ ಕುಟುಂಬ ಬಿದ್ಕಲಕಟ್ಟೆಯಲ್ಲಿ ಐದು ಸೆಂಟ್ಸ್ ಜಾಗದಲ್ಲಿ ಎಪ್ರಿಲ್ ತಿಂಗಳಲ್ಲಿ ತಮ್ಮದೇ ಆದ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಆ ನಿವಾಸದಲ್ಲಿ ತಂದೆ ತಾಯಿ ಹಾಗೂ ಕಿರಿಯ ಸಹೋದರಿ ಜೊತೆಗಿದ್ದ ಪ್ರಗತಿ ಶೆಟ್ಟಿ ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದಳು.
ಮುಂಗೋಪಿಯಾದಳೇ ವಿದ್ಯಾರ್ಥಿನಿ..?: ಆಕೆ ಕುಟುಂಬಿಕರ ಪ್ರಕಾರ ಕೊಂಚ ಮುಂಗೋಪಿಯಾಗಿದ್ದ ಆಕೆ ತನ್ನ ಮನಸ್ಸಿಗೆ ಸ್ವಲ್ಪವೇ ಘಾಸಿಯಾದರೂ ಕೂಡ ಕಾಲೇಜಿನಿಂದ ಬಂದು ತನ್ನ ಖಾಸಗಿ ಕೋಣೆಯ ಒಳಗೆ ಹೋಗಿ ಚಿಲಕ ಹಾಕಿಕೊಂಡು ಮೌನವಾಗಿರುತ್ತಿದ್ದಳು. ಬೆಳಿಗ್ಗೆಯಾದರೇ ಆಕೆ ಲವಲವಿಕೆಯಿಂದ ತನ್ನ ಕೆಲಸವನ್ನು ಆರಂಭಿಸುತ್ತಿದ್ದಳು. ಅಂತೆಯೇ ಶನಿವಾರ ಸಂಜೆ ಕಾಜೇಜಿನಿಂದ ಬಂದ ಆಕೆ ತನ್ನ ಕೋಣೆಯೊಳೆಗೆ ಹೊಕ್ಕು ಒಳಗಿನಿಂದ ಚಿಲಕ ಹಾಕಿಕೊಳ್ಳುತ್ತಾಳೆ. ಈಕೆ ಮೌನ ಹಾಗೂ ಕೋಪದ ಬಗ್ಗೆ ಅರಿವಿದ್ದ ಆಕೆ ಪೋಷಕರು ಸುಮ್ಮನ್ನಿದ್ದು ಭಾನುವಾರ ರಜಾದಿನವಾದ ಕಾರಣ ಆಕೆ ಬೆಳಿಗ್ಗೆ ಸರಿಯಾಗಬಹುದೆಂಬ ನಿರೀಕ್ಷೆಯಲ್ಲಿದ್ದರು.
ಆದರೇ ಭಾನುವಾರ ಬೆಳಿಗ್ಗೆಯಾದರೂ ಪ್ರಗತಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರಲಿಲ್ಲ. ಕೊನೆಗೂ ಆಕೆ ಕೋಣೆಯ ಕಿಟಕಿ ತೆರೆದು ನೋಡಿದಾಗ ಅದೇ ಕಿಟಕಿಯ ಸರಳಿಗೆ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆ ಬರೆದಿಟ್ಟ ಡೆತ್ ನೋಟ್ ಪ್ರಕಾರ ಆಕೆಗೆ ಮನೆಯವರ ಪ್ರೀತಿ ಕೊರತೆ ಇತ್ತು ಎನ್ನಲಾಗಿದೆ. ಆಕೆ ಡೆತ್ ನೋಟಿನಲ್ಲಿ ಕೂಡ ಅದೇ ಮಾತುಗಳನ್ನು ಬರೆದಿದ್ದಳು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬ್ರಹ್ಮಾವರ ಸಿ.ಪಿ.ಐ. ಶ್ರೀಕಾಂತ್, ಕೋಟ ಪಿ.ಎಸ್.ಐ. ಕಬ್ಬಾಳರಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿ.ಪಂ. ಸದಸ್ಯೆ ಸುಪ್ರಿತಾ ಕುಲಾಲ್ ಹಾಗೂ ಮುಖಂಡರಾದ ಉದಯ್ ಕುಲಾಲ್, ಹರಿಪ್ರಸಾದ್ ಶೆಟ್ಟಿ ಗ್ರಾ.ಪಂ.ನವರು ಭೇಟಿ ನೀಡಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.