ಕರಾವಳಿ

ದಲಿತರ ಮೇಲೆ ಹಲ್ಲೆ ಪ್ರಕರಣ; ಬಜರಂಗದಳದ ಕಾರ್ಯಕರ್ತರ ವಿರುದ್ಧ ದೂರು ದಾಖಲು

Pinterest LinkedIn Tumblr

cow

ಚಿಕ್ಕಮಗಳೂರು: ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದ ಮನೆಯಲ್ಲಿ ಅಕ್ರಮವಾಗಿ ಹಸುವನ್ನು ಹತ್ಯೆ ಮಾಡುತ್ತಿದ್ದಾರೆಂದು ಆರೋಪಿಸಿ ಎರಡು ದಲಿತ ಕುಟುಂಬಗಳ ಸದಸ್ಯರ ಮೇಲೆ ದಾಳಿ ನಡೆಸಿದ್ದ ಬಜರಂಗದಳದ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಲ್ಲಿನ ಜಯಪುರ ಪೊಲೀಸ್‌ ಠಾಣೆಯಲ್ಲಿ ಏಳು ಜನ ಬಜರಂಗದಳದ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಕಾಲೊನಿಯ ದಲಿತರ ಮನೆಯೊಂದರಲ್ಲಿ ಹಸುವಿನ ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ 20ಕ್ಕೂ ಹೆಚ್ಚು ಬಜರಂಗದಳದ ಕಾಯರ್ಕರ್ತರು ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರ ದಲಿತರಿಗೆ ಗಾಯಗಳಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಜುಲೈ 18ರಂದು ದಲಿತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಜುಲೈ 10ರ ರಾತ್ರಿ ಈ ಘಟನೆ ನಡೆದಿದ್ದು, ಬಜರಂಗದಳದ ಕಾಯರ್ಕರ್ತರ ವಿರುದ್ಧ ದೂರು ದಾಖಲಾಗಿದ್ದರೂ ಪೊಲೀಸರು ಅವರನ್ನು ಬಂಧಿಸಲಿಲ್ಲ ಎಂದು ಸ್ಥಳೀಯ ದಲಿತರು ಆರೋಪಿಸಿದ್ದಾರೆ.

28ರಂದು ಜಯಪುರ ಚಲೋ ಚಳವಳಿ: ಕೊಪ್ಪ ತಾಲ್ಲೂಕಿನ ಜಯಪುರದಲ್ಲಿ ಗೋಹತ್ಯೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ದಲಿತರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಖಂಡಿಸಿ ಇದೇ 28ರಂದು ಜಯಪುರ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಅಶೋಕ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಅಲ್ಪಸಂಖ್ಯಾತ, ದಲಿತ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಅಂದು ಜಯಪುರದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕೊಪ್ಪ ತಾಲ್ಲೂಕಿನ ಜಯಪುರ ಹೇರೂರು ಸಮೀಪದ ಕುಂದೂರು ವಾಸಿಗಳಾದ ದಲಿತ ಅಂಗವಿಕಲ ಬಾಲರಾಜ್, ಧನು, ಸಂದೀಪ್‌, ಮುತ್ತಪ್ಪ ಅವರ ಮೇಲೆ ಗೋಮಾಂಸ ಸೇವಿಸುತ್ತಿದ್ದೀರಿ ಎಂದು ಸಂಘಪರಿವಾರದ ಮುಖಂಡರು ಅಮಾನುಷ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆ ಪ್ರಕರಣದಲ್ಲಿ ಸಂಘಪರಿವಾರದ ಮುಖಂಡರಾದ ಸಂಪತ್‌, ಮಂಜು ಎಂಬುವವರು 30ರಿಂದ 40 ಮಂದಿ ಗುಂಪು ಕಟ್ಟಿಕೊಂಡು ಹಠಾತ್‌ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ಭಾರತೀಯ ದಂಡ ಸಂಹಿತೆ 307ರ ಕಲಂ ಅಡಿ ಬಂಧಿಸಬೇಕು ಎಂದು ಆಗ್ರಹಿಸಿದರು.

ದಲಿತರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳಲ್ಲಿ ಸಂಪತ್‌ ಎಂಬಾತ ಈ ಹಿಂದೆ ತನಿಕೋಡು ಎನ್‌ಕೌಂಟರ್‌ ಹೆಸರಿನಲ್ಲಿ ಕಬೀರ್‌ ಎಂಬಾತನ ಹತ್ಯೆ ನಡೆದಾಗ, ಕಬೀರ್‌ ಶವ ನೋಡಲು ಬಂದಿದ್ದ ಆತನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದ. ಈ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿಯೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ಮುಖಂಡ ಕೌಳಿ ರಾಮು ಮಾತನಾಡಿ, ಸಂಘಪರಿವಾರದವರು ತಮ್ಮ ಸ್ವಾರ್ಥಕ್ಕಾಗಿ ದಲಿತರನ್ನು ಪ್ರಜ್ಞಾಪೂರ್ವಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸತ್ತ ದನಗಳನ್ನು ತಿನ್ನುವ ಪರಿಸ್ಥಿತಿಗೆ ದಲಿತರನ್ನು ತಂದು ನಿಲ್ಲಿಸಿರುವುದು ಇದೇ ಹಿಂದೂ ಸಮಾಜ ಎಂದು ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್‌ ಮೊಹಿಯುದ್ದೀನ್‌, ಜಿಲ್ಲಾ ಅಧ್ಯಕ್ಷ ಹಸನಬ್ಬ, ಕಾರ್ಯದರ್ಶಿ ಟಿ.ಎಲ್‌.ಗಣೇಶ್‌, ರಿಜ್ವಾನ್‌ ಖಾನ್‌ ಇದ್ದರು.

Comments are closed.