ಮಂಗಳೂರು, ಜು.27: ಮಂಗಳೂರಿನ ಪ್ರವಾಸಿ ತಾಣಗಳಿಗೆ ಭೋರ್ಗರೆಯುವ ಶಾಂತ ಸಮುದ್ರದ ಜೊತೆಗೆ ಪಿಲಿಕುಳ ನಿಸರ್ಗಧಾಮ ಕೂಡ ಇದೀಗ ಆಕರ್ಷಣೆಯ ಕೇಂದ್ರವಾಗಿದೆ. ಇಲ್ಲಿನ ಜೈವಿಕ ಉದ್ಯಾನವನ, ವಿಜ್ಞಾನ ಸೆಂಟರ್, ಪಾರಂಪರಿಕ ಗ್ರಾಮ, ಗುತ್ತಿನ ಮನೆ ಸೇರಿದಂತೆ ದಿನವಿಡೀ ವೀಕ್ಷಣೆ ಮಾಡಬಹುದಾದಷ್ಟು ಪ್ರವಾಸಿ ತಾಣಗಳು ಇಲ್ಲಿವೆ.
ಇದೀಗ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮಕ್ಕೆ ಮತ್ತಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯಾಗಿ ನಿಸರ್ಗಧಾಮದ ಲೇಕ್ ಗಾರ್ಡನ್ ನಲ್ಲಿ ನಿರ್ಮಿಸಲಾಗಿರುವ ಮಿನಿ ಐಫೆಲ್ ಟವರ್ ಇಂದು ಅನಾವರಣಗೊಂಡಿದ್ದು, ಪ್ರವಾಸಿಗರನ್ನು ಮನಸೆಳೆಯುತ್ತಿದೆ. ಈ ಮಿನಿ ಐಫೆಲ್ ಟವರ್ ನ ನಾಮಫಲಕವನ್ನು ಬುಧವಾರ ರಾಜ್ಯದ ಅರಣ್ಯ, ಪರಿಸರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಅನಾವರಣಗೊಳಿಸಿದರು.
ಇದೇ ಸಂದರ್ಭದಲ್ಲಿ 28 ಲಕ್ಷ ರೂ.ಗಳ ಜೈವಿಕ ಮಾಹಿತಿ ಕೇಂದ್ರ ಉದ್ಘಾಟನೆ ಹಾಗೂ ಸಚಿವ ರಮಾನಾಥ ರೈಯವರು ಪಿಲಿಕುಳದ ಮೃಗಾಲಯದ ಒಳಗೆ ಹಿಂದೂಸ್ಥಾನ್ ಪೆಟ್ರೋಲಿಯಂ ಲಿಮಿಟೆಡ್ (ಎಚ್ಪಿಸಿಎಲ್) ಪ್ರಾಯೋಜಿತ 28 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಿರುವ ಜೈವಿಕ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವನ್ ಡಿಸೋಜಾ, ಎಚ್.ಪಿ.ಸಿ. ಎಲ್ ನ ಮುಖ್ಯ ವ್ಯವಸ್ಥಾಪಕ ರಾಕೇಶ್ ಅಗರ್ವಾಲ್, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್ ನಲ್ಲಿ ಪ್ರಪಂಚ ಹಾಗೂ ದೇಶದ ಸುಮಾರು 10 ಅದ್ಭುತಗಳ ಮಾದರಿಗಳನ್ನು ರಚಿಸುವ ನಿಟ್ಟಿನಲ್ಲಿ ಮಿನಿ ಐಫೆಲ್ ಟವರ್ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್ ನ ಮಾದರಿಯನ್ನು ಹೋಲುವ ಸುಮಾರು 50 ಅಡಿ ಎತ್ತರದ ಕಬ್ಬಿಣದ ಮಾದರಿ ಇದಾಗಿದೆ. ಚೆನ್ನೈ ಮೂಲದ ಪರಿಣಿತರ ತಂಡ ಇದನ್ನು ನಿರ್ಮಿಸಿದ್ದು, ಪ್ರವಾಸಿಗರು ಇದರ ಎದುರು ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವ ಅವಕಾಶವೂ ಇಲ್ಲಿದೆ.
ಸದ್ಯ, ಪಿಲಿಕುಳ ನಿಸರ್ಗಧಾಮದಲ್ಲಿ ಮತ್ತಷ್ಟು ಪ್ರವಾಸಿ ತಾಣಗಳು ವೀಕ್ಷಣೆಗೆ ಲಭ್ಯವಾಗುತ್ತಿದೆ. ವಿಶ್ವ ಮತ್ತು ದೇಶದ ವಿಶೇಷ ಪ್ರವಾಸಿ ತಾಣಗಳ ಮಾದರಿಯನ್ನು ಪಿಲಿಕುಳದಲ್ಲಿ ನಿರ್ಮಿಸಲಾಗುತ್ತಿದೆ. ವಿಶ್ವದ ಎಲ್ಲ ಪ್ರವಾಸಿ ತಾಣಗಳಿಗೂ ಜನರು ಭೇಟಿ ನೀಡುವುದು ಅಸಾಧ್ಯ. ವಿದ್ಯಾರ್ಥಿಗಳಿಗೆ ಅಧ್ಯಯಕ್ಕೆ ಸಹಾಯಕವಾಗಲಿ ಎಂಬ ಕಾರಣಕ್ಕೆ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ. ಪ್ರಾರಂಭಿಕ ಹಂತವಾಗಿ ಐ- ಫೆಲ್ ಟವರ್ ನಿರ್ಮಾಣಗೊಂಡಿದೆ. ತಾಜ್ ಮಹಲ್, ಚೀನಾ ಮಹಾಗೋಡೆ, ಈಜಿಫ್ಟ್ನ ಪಿರಾಮಿಡ್ ಮುಂತಾದವುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆಲವು ದಿನಗಳಲ್ಲಿ ಇವುಗಳು ಪೂರ್ಣಗೊಳ್ಳಲಿದ್ದು ವಿಶ್ವದ ಏಳು ಅದ್ಭುತಗಳನ್ನು ಮಂಗಳೂರಿನಲ್ಲಿಯೇ ಕಣ್ತುಂಬಿಕೊಳ್ಳಬಹುದಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಅವರು, ತಾಜ್ ಮಹಲ್, ಕುತುಬ್ ಮಿನಾರ್ ಗಳೂ ತಲೆ ಎತ್ತಲಿವೆ ಪಿಲಿಕುಳದಲ್ಲಿ ಮುಂದಿನ ಹಂತದಲ್ಲಿ ದೇಶದ ಅತ್ಯದ್ಬುತ ರಚನೆಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ನ ಮಾದರಿ ನಿರ್ಮಾಣವಾಗಲಿದೆ. ಇದರೊಂದಿಗೆ ಕುತುಬ್ ಮಿನಾರ್, ಎಲ್ಲೋರಾ, ಹಂಪಿಯ ಆಕರ್ಷಕ ರಥ, ಮಥುರೆ ದೇವಸ್ಥಾನದ ಮಾದರಿಗಳು ಇಲ್ಲಿ ಶೀಘ್ರದಲ್ಲೇ ತಲೆ ಎತ್ತಲಿವೆ.
ಪಿಲಿಕುಳಕ್ಕೆ ಬರುವ ವಿದ್ಯಾರ್ಥಿಗಳು, ಶಿಕ್ಷಕರಿಗೆ ಅನುಕೂಲವಾಗುವಂತೆ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸಲು ಈ ಕೇಂದ್ರ ಬಳಕೆಯಾಗಲಿದೆ. ದೇಶದಲ್ಲಿ ಪ್ರಮುಖವಾಗಿ ಗುರುತಿಸಲಾಗಿರುವ 14 ಬೃಹತ್ ಮೃಗಾಲಯಗಳಲ್ಲಿ ಪಿಲಿಕುಳ ನಿಸರ್ಗಧಾಮದ ಮೃಗಾಲಯ ಕೂಡಾ ಸೇರಿದೆ. ಮಾತ್ರವಲ್ಲದೆ ಮೃಗಾಲಯಕ್ಕೆ ಜಿರಾಫೆ, ಝೀಬ್ರಾ ಹಾಗೂ ಚಿಂಪಾಂಜಿಯಂತಹ ಆಕರ್ಷಕ ಪ್ರಾಣಿಗಳನ್ನು ಮಧ್ಯ ಆಫ್ರಿಕಾದಿಂದ ಖರೀದಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.
ಈ ಮೂಲಕ ಮೃಗಾಲಯದ ಆಕರ್ಷಣೆ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ಮೃಗಾಲಯದಿಂದ 1.5 ಕೋಟಿ ರೂ. ಶುಲ್ಕ ಸಂಗ್ರಹವಾಗುತ್ತಿದ್ದು, ಇದರಲ್ಲಿ ಸುಮಾರು 1 ಕೋಟಿ ರೂ.ಗಳಿಗೂ ಅಧಿಕ ಹಣ ಪ್ರಾಣಿ ಪಕ್ಷಿಗಳು ಹಾಗೂ ಈ ಮೃಗಾಲಯವನ್ನು ನಿರ್ವಹಿಸುವ ಸಿಬ್ಬಂದಿಗಳಿಗಾಗಿ ವ್ಯಯವಾಗುತ್ತಿದೆ. ಮುಂದೆ ಇನ್ನಷ್ಟು ಪ್ರಾಣಿಗಳನ್ನು ತರಿಸುವಾಗ ಅವುಗಳಿಗೆ ಬೇಕಾದ ವ್ಯವಸ್ಥೆ ಹಾಗೂ ನಿರ್ವಹಣೆಗೆ ಇನ್ನಷ್ಟು ಹಣಕಾಸಿನ ಅಗತ್ಯವಿದ್ದು, ಈ ಬಗ್ಗೆ ಸರಕಾರವನ್ನು ಕೋರಲಾಗಿದೆ ಹೇಳಿದರು.
ಎ.ಬಿ. ಇಬ್ರಾಹಿಂ ಅವರ ಕನಸಿನ ಯೋಜನೆ :ವಿಶ್ವ ಮತ್ತು ದೇಶದ ವಿಶೇಷ ಪ್ರವಾಸಿ ತಾಣಗಳ ಮಾದರಿಯನ್ನು ಪಿಲಿಕುಳದಲ್ಲಿ ನಿರ್ಮಿಸಲಾಗುತ್ತಿದೆ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಆಲೋಚನೆಯಂತೆ ಈ ಮಾದರಿಗಳು ನಿರ್ಮಾಣವಾಗುತ್ತಿವೆ.
ವಿದ್ಯಾರ್ಥಿಗಳಿಗೆ ಅಧ್ಯಯನ ನಡೆಸಲು ಸಹಕಾರಿ:ನಿಸರ್ಗಧಾಮದಲ್ಲಿ ಸುಮಾರು 30ಲಕ್ಷ ರೂ. ವೆಚ್ಚದಲ್ಲಿ ಇಂಟರ್ ಪ್ರೇಟೆಷನ್ ಸೆಂಟರ್ ನಿರ್ಮಾಣವಾಗಿದೆ. ಈ ಸೆಂಟರ್ ಉದ್ಯಾನವನದಲ್ಲಿ ಶಿಕ್ಷಕರು – ವಿದ್ಯಾರ್ಥಿಗಳಿಗೆ ಅಧ್ಯಯನ ನಡೆಸಲು ಮತ್ತು ಕಾರ್ಯಾಗಾರ ನಡೆಸಲು ಸಹಕಾರಿಯಾಗಲಿದೆ.
ಪ್ರವಾಸಿ ತಾಣಗಳು : ಪಿಲಿಕುಳ ನಿಸರ್ಗಧಾಮದಲ್ಲಿ ಉದ್ಯಾನವನ, ವಿಜ್ಞಾನ ಸೆಂಟರ್, ಪಾರಂಪರಿಕ ಗ್ರಾಮ, ಗುತ್ತಿನ ಮನೆ ಸೇರಿದಂತೆ ದಿನವಿಡೀ ವೀಕ್ಷಣೆ ಮಾಡಬಹುದಾದಷ್ಟು ಪ್ರವಾಸಿ ತಾಣಗಳಿವೆ. ತಾಜ್ ಮಹಲ್, ಚೀನಾ ಮಹಾಗೋಡೆ, ಈಜಿಫ್ಟ್ನ ಪಿರಾಮಿಡ್ ಮುಂತಾದ ವಿಶ್ವದ ಏಳು ಅದ್ಭುತಗಳನ್ನು ನೋಡಲು ಮಂಗಳೂರಿಗೆ ಭೇಟಿ ನೀಡಬಹುದು. ಏಳು ಅದ್ಭುತಗಳನ್ನು ಮಂಗಳೂರಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
Comments are closed.