ಮಂಗಳೂರು, ಜು. 28: ಅಬಕಾರಿ ಇಲಾಖೆಯ ಪೊಲೀಸರು ಬುಧವಾರ ನಗರದ ಹಾಗೂ ನಗರದ ಹೊರವಲಯದ ಕೆಲವು ಕಾಲೇಜು, ಕಾಲೇಜು ಕ್ಯಾಂಟೀನ್ ಹಾಗೂ ಆಹಾರ ಮಳಿಗೆ ಮತ್ತು ಪಾನ್ ಶಾಪ್ ಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ವ್ಯಾಪಾಕವಾಗಿ ಹರಡಿರುವ ವಿವಿಧ ಮಾದಕ ವಸ್ತುಗಳ ಹಾಗೂ ಗಾಂಜಾ ಪೂರೈಕೆ ಮತ್ತು ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ದಾಳಿ ಸಂಘಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬಕಾರಿ ಇಲಾಖೆಯ ಉಪ ಆಯುಕ್ತ ಎಲ್.ಮಂಜುನಾಥ್ ಅವರ ನಿರ್ದೇಶನದ ಮೇರೆಗೆ ಡಿವಿಷನ್ 1 ಹಾಗೂ ಡಿವಿಷನ್ 2 ಇದರ ಉಪ ಅಧೀಕ್ಷಕ ಅಮರ್ನಾಥ್ ಭಂಡಾರಿ ಹಾಗೂ ಶಿವಪ್ರಸಾದ್ ಅವರ ನೇತೃತ್ವದಲ್ಲಿ ಈ ದಾಳಿಗಳು ನಡೆದಿವೆ.
ನಗರದ ಕೆಲವು ಕಾಲೇಜುಗಳ ಬಳಿ ಇರುವ ಅಂಗಡಿಗಳು ಮತ್ತು ವಿದ್ಯಾರ್ಥಿಗಳ ಪರಿಶೀಲನೆ ಜೊತೆಗೆ ಮಿಲಾಗ್ರಿಸ್, ಕೆಎಸ್ಸಾರ್ಟಿಸಿ ನಿಲ್ದಾಣ, ಕಂಕನಾಡಿ ರೈಲ್ವೆ ನಿಲ್ದಾಣ, ಪಡೀಲ್, ವಳಚ್ಚಿಲ್ ಮುಂತಾದೆಡೆ ಗೂಡಂಗಡಿಗಳಲ್ಲಿ ತಪಾಸಣೆ ನಡೆಸಿದರು.
ಇಲಾಖಾ ವಾಹನಗಳನ್ನು ಕಂಡ ಯುವಕರು ದಿಕ್ಕಾಪಾಲಾಗಿ ಓಡಿದ ಘಟನೆಯೂ ನಡೆಯಿತು. ಓಡಿದ ಯುವಕರಲ್ಲಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದರು. ಈ ತಪಾಸಣಾ ಕಾರ್ಯಾಚರಣೆಯಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಚೇತನ್ ಕುಮಾರ್, ವಿಜಯ ಕುಮಾರ್, ಶೋಭಾ, ಸತೀಶ್ ಕುಮಾರ್ ಕುದ್ರೋಳಿ, 12 ಮಂದಿ ಸಬ್ ಇನ್ಸ್‌ಪೆಕ್ಟರ್ ಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Comments are closed.