Photo Design : Sathish Kapikad
ಮುಂಬೈ, ಜು.28 : ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಅಪ್, ಫೇಸ್ ಬುಕ್ ಹಾಗೂ ಟ್ವಿಟ್ಟರ್ ಆಗಮನದಿಂದ ಒಬ್ಬ ಪತ್ರಕರ್ತನಿಗಿರಬೇಕಾದ ಜವಾಬ್ದಾರಿ ಇಲ್ಲದ ಅದೇಷ್ಟೋ ಮಂದಿ ಇಂದು ಪತ್ರಕರ್ತನಾಗಿ ಬಿಟ್ಟಿದ್ದಾರೆ, ನಾವಿರುವ ಕಳವಳಕಾರಿ ಸನ್ನಿವೇಶದಲ್ಲಿ ಸಮೂಹ ಮಾಧ್ಯಮ ತನ್ನ ಜವಾಬ್ದಾರಿಯನ್ನು ಮರೆತಿದೆ,”ಎಂದು ಖ್ಯಾತ ಕ್ರಿಕೆಟ್ ಕಮೆಂಟೇಟರ್ ಹಾಗೂ ಪತ್ರಕರ್ತ ಹರ್ಷ ಬೋಗ್ಲೆ ತಮ್ಮ ಫೇಸ್ ಬುಕ್ ಪುಟದಲ್ಲಿ ಮಾಡಿರುವ ವೈರಲ್ ಆಗಿರುವ ಪೋಸ್ಟ್ ಒಂದರಲ್ಲಿ ಹೇಳಿಕೊಂಡಿದ್ದಾರೆ.
ಹಿಂದಿನ ಕಾಲದ ಜವಾಬ್ದಾರಿಯುತ ಪತ್ರಿಕೋದ್ಯಮದ ಬಗ್ಗೆ ಬರೆದಿರುವ ಅವರು ಆ ಕಾಲದಲ್ಲಿ ಸ್ಪರ್ಧೆ ನೀಡುವುದೆಂದರೆ ಸುದ್ದಿಯೊಂದನ್ನು ಆದಷ್ಟು ಬೇಗನೇ ಪ್ರಕಟಿಸುವುದಾಗಿತ್ತೇ ಹೊರತು ಈಗಿನ ಕಾಲದಂತೆ ಸೆನ್ಸೇಶನ್ ಹುಟ್ಟಿಸುವ ವರದಿಗಳನ್ನು ನೀಡುವುದಲ್ಲವಾಗಿತ್ತು, ಎಂದು ಅವರು ನೆನಪಿಸಿಕೊಂಡಿದ್ದಾರೆ.
“ಹಿಂದೆ ಪತ್ರಕರ್ತರ ಮೇಲೆ ಜನರಿಗೆ ವಿಶ್ವಾಸವಿತ್ತು ಹಾಗೂ ಅವರು ಆ ವಿಶ್ವಾಸವನ್ನು ಕಾಪಾಡುತ್ತಿದ್ದರು. ಆದರೆ ಈಗ ಸಾಮಾಜಿಕ ಜಾಲತಾಣಗಳ ಆಗಮನದಿಂದ ಸುದ್ದಿಯೊಂದರ ಸತ್ಯಾಸತ್ಯತೆ ಹಾಗೂ ಅದು ಪ್ರಚೋದನಕಾರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುದ್ದಿ ನೀಡುವವ ನಿರ್ಧರಿಸುವ ಬದಲು ಆ ಹಕ್ಕು ಈಗ ಸುದ್ದಿ ಪಡೆಯುವವ ಹೊಂದಿದ್ದಾನೆ,”ಎಂದು ಬೋಗ್ಲೆ ಬರೆದಿದ್ದಾರೆ.
ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ಸುದ್ದಿ ಒದಗಿಸುವವನೇ ಸುದ್ದಿಯಾಗಿ ಬಿಡುತ್ತಾನೆ. ನಾವು ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ,”ಎಂದು ಅವರು ವಿವರಿಸಿದ್ದಾರೆ.
ಟೈಮ್ಸ್ ನೌ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯವರನ್ನು ಝಾಡಿಸಿ ಪತ್ರಕರ್ತೆ ಬರ್ಖಾ ದತ್ತ್ ಮಾಡಿರುವ ಫೇಸ್ ಬುಕ್ ಪೋಸ್ಟ್ ಹಿನ್ನೆಲೆಯಲ್ಲಿ ಬೋಗ್ಲೆಯವರ ಈ ವೈರಲ್ ಪೋಸ್ಟ್ ಬಂದಿರಬಹುದೇನೋ ಎಂಬ ಅನಿಸಿಕೆ ಹಲವರಿಗಿದೆ.
ವರದಿ ಕೃಪೆ : ವಾಭಾ.
Comments are closed.