ಅಂತರಾಷ್ಟ್ರೀಯ

ಕಾಲೇಜುಗಳಲ್ಲಿನ ರಾಗಿಂಗ್ ಪಿಡುಗು ತಡೆಗೆ ಕ್ರಮ ಕೈಗೊಳ್ಳಿ : ಲೋಕಸಭೆಯಲ್ಲಿ ಶೋಭಾ ಕರಂದ್ಲಾಜೆ ಆಗ್ರಹ

Pinterest LinkedIn Tumblr

ಹೊಸದಿಲ್ಲಿ/ಉಡುಪಿ: ಕಾಲೇಜುಗಳಲ್ಲಿನ ರಾಗಿಂಗ್ ಹಾವಳಿಯು ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಮಾರಕವಾಗಿದ್ದು ಅನೇಕ ವಿದ್ಯಾರ್ಥಿಗಳ ಭವಿಷ್ಯ ಇದರಿಂದಾಗಿ ಕಮರಿ ಹೋಗುತ್ತಿದೆ. ಆದುದರಿಂದ ದೇಶದಾದ್ಯಂತ ಕಾಲೇಜುಗಳಲ್ಲಿ ರಾಗಿಂಗ್ ಹಾವಳಿಯನ್ನು ತಡೆಗಟ್ಟಲು ಕೇಂದ್ರ ಸರಕಾರ ಏಕರೂಪದ, ಕಠಿಣತಮ ಕ್ರಮಗೊಳ್ಳಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಗಿಂಗ್ ಪಿಡುಗು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಅಸಂಖ್ಯಾತ ವರದಿಗಳು ಬರುತ್ತಿವೆ. ಇದನ್ನು ಕಟ್ಟುನಿಟ್ಟಾಗಿ ನಿರ್ಮೂಲನ ಮಾಡಬೇಕಾಗಿದೆ. ಇದಕ್ಕಾಗಿ ರಾಜ್ಯವಾರು ನಡೆದಿರುವ ರಾಗಿಂಗ್ ಪ್ರಕರಣಗಳ ಕಾಲೇಜುವಾರು ವಿಶ್ಲೇಷಣೆ ನಡೆಸಿ ತಡೆಗಟ್ಟುವಿಕೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಶೋಭಾ ಕರಂದ್ಲಾಜೆ ಪ್ರತಿಪಾದಿಸಿದರು .

shobha_Karandlaje

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆಯ ಸಹಾಯಕ ಸಚಿವ ಡಾ. ಮಹೇಂದ್ರನಾಥ್ ಪಾಂಡೆ, ಸಂಸದೆ ಶೋಭಾ ಕರಂದ್ಲಾಜೆಯವರ ಪ್ರಶ್ನೆಗೆ ಉತ್ತರಿಸುತ್ತಾ , ಪ್ರತಿಯೊಂದು ಕಾಲೇಜು/ವಿದ್ಯಾಸಂಸ್ಥೆಗಳಲ್ಲಿ ರಾಗಿಂಗ್ ಕುರಿತಾದ ದೂರುಗಳನ್ನು ಸ್ವೀಕರಿಸಲು ಸೂಚಿಸಲಾಗಿದೆ. ರಾಗಿಂಗ್ ಪಿಡುಗಿನ ವಿರುದ್ದ ಕಠಿಣ ಕ್ರಮಗಳು ಜ್ಯಾರಿಯಲ್ಲಿರುವುದರಿಂದ ಇತ್ತೀಚಿನ ದಿನಗಳಲ್ಲಿ ರಾಗಿಂಗ್ ಪ್ರಕರಣಗಳು ಕಡಿಮೆಯಾಗಿವೆ. ಇದಿಷ್ಟೇ ಅಲ್ಲದೆ ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ರಾಗಿಂಗ್ ತಡೆಗಟ್ಟುವಿಕೆಗಾಗಿ ಇರುವ ಕ್ರಮಗಳ ಬಗ್ಗೆ ಶಿಕ್ಷಣ ಸಂಸ್ಥೆಗಳವರು, ಪೋಷಕರು ಹಾಗೂ ವಿದ್ಯಾರ್ಥಿ ಗಳಿಗೆ ತಿಳುವಳಿಕೆ ನೀಡುವ ಅಭಿಯಾನವನ್ನು ಕೈಗೊಂಡಿದೆ.

ರಾಗಿಂಗ್ ಪಿಡುಗನ್ನೇ ಸಂಪೂರ್ಣ ನಿರ್ಮೂಲನ ಮಾಡಲು ಬೇಕಾಗಿರುವ ಕ್ರಮಗಳನ್ನು ಕೈಗೊಳ್ಳಲು ಯುಜಿಸಿಯು ವಿದ್ಯಾಸಂಸ್ಥೆಗಳ ಆಡಳಿತಕ್ಕೆ ಹೆಚ್ಚಿನ ಅಧಿಕಾರ ನೀಡಿದೆ .ರಾಗಿಂಗ್ ದೂರು ನೀಡಲು ಟೋಲ್ ಫ್ರೀ ನಂಬ್ರ , ರಾಗಿಂಗ್ ತಡೆಗಟ್ಟುವ ಸಮಿತಿಗಳ ರಚನೆ ಮೊದಲಾದ ಕ್ರಮಗಳನ್ನು ಅದು ಕೈಗೊಂಡಿದೆ . ಸಿ.ಬಿ.ಎಸ್.ಇ ಕೂಡಾ ತನ್ನ ಅಧೀನ ವಿದ್ಯಾಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ರಾಗಿಂಗ್ ತಡೆಗಟ್ಟುವಿಕೆಯನ್ನು ಪ್ರಮುಖ ಅಂಶವನ್ನಾಗಿ ಪರಿಗಣಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ರಾಗಿಂಗ್ ಮುಂದಿನ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ನಿರ್ಮೂಲನವಾಗಲಿದೆ ಎಂದು ತಿಳಿಸಿದರು.

Comments are closed.