*ಯೋಗೀಶ್ ಕುಂಭಾಸಿ
ಕುಂದಾಪುರ: ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಜೊತೆಗೆ ಸದಾ ಕ್ರಿಯಾಶೀಲತೆಯಲ್ಲಿರುವ ವಕ್ವಾಡಿಯ ಗುರುಕುಲ ಸಂಸ್ಥೆಯಲ್ಲಿ ಈ ಆಷಾಡದ ಭಾನುವಾರದಂದು ಸಂಭ್ರಮದ ವಾತಾವರಣವಿತ್ತು. ಭಾನುವಾರದ ಆ ರಜಾ ಸಮಯ ಮನೆಯಲ್ಲಿ ತಮಗೆ ಬೇಕಾದ ಅಡುಗೆ ತಯಾರಿಸುತ್ತಿದ್ದ ಆ ಮಂದಿ ಶಾಲೆಯಲ್ಲಿ ನೆರೆದಿದ್ದಲ್ಲದೇ ಅಲ್ಲಿ ಪಕ್ಕಾ ಸಸ್ಯಾಹಾರಿ ಔಷದೀಯ ಖಾದ್ಯಗಳ ರುಚಿ ಸವಿದು ಖುಷಿಪಟ್ಟರು. ಗುರುಕುಲ ಶಾಲೆಯಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮದ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.
ಕರಾವಳಿಯಲ್ಲಿ ಮಳೆಗಾಲದ ಈ ಆಷಾಡ ಸಂದರ್ಭದಲ್ಲಿ ಊಟೋಪಚಾರಕ್ಕೆ ಅದರದ್ದೇ ಆದ ಮಹತ್ವವನ್ನು ನೀಡಲಾಗುತ್ತೆ. ಅಂತೆಯೇ ಸದಾ ಹೊಸತನವನ್ನು ಪರಿಚಯಿಸುತ್ತಿರುವ ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಇದರ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಸೇರಿದಂತೆ ಆಹಾರ, ಕ್ರೀಡೆ, ಸಂಸ್ಕೃತಿ-ಸಾಂಸ್ಕೃತಿಕ, ಆರೋಗ್ಯ-ಯೋಗ ಮೊದಲಾದ ಪಕ್ಕಾ ದೇಸಿ ಶೈಲಿಯ ಆಹಾರ ಕ್ರಮದ ಬಗ್ಗೆ ಕಾಳಜಿಯುಳ್ಳ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಆಧುನಿಕ ಶೈಲಿಯ ಆಹಾರ ಕ್ರಮದಿಂದ ಆರೋಗ್ಯದಲ್ಲಿ ಏರುಪೇರು ಸಾಮಾನ್ಯ ಸಂಗತಿಯಾಗಿದ್ದು ಜನರಲ್ಲಿ ಆಹಾರ ಕ್ರಮದ ಬಗ್ಗೆ ಅರಿವು ಮೂಡಿಸಿ ಅವರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಳೆದ ನಾಲ್ಕು ವರ್ಷಗಳಿಂದ ಗುರುಕುಲ ಸಮೂಹ ಸಂಸ್ಥೆಯಲ್ಲಿ ನಡೆಸಿಕೊಂಡು ಬರುತ್ತಿರುವ ಈ ಸಸ್ಯಾಮೃತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಜಿರೆ ಮೆಡಿಕಲ್ ಕಾಲೇಜಿನ ಪ್ರೊಪೆಸರ್ ಡಾ. ಶಿವಪ್ರಸಾದ ಶೆಟ್ಟಿ ಮಾತನಾಡಿ, ಮಳೆಗಾಲದ ಈ ಸಂದರ್ಭದಲ್ಲಿ ನಮ್ಮ ಆಸುಪಾಸಿನಲ್ಲಿಯೇ ಸಿಗುವ ಸಸ್ಯಗಳು ಹಾಗೂ ಅದರಿಂದ ತಯಾರಿಸಿದ ಆಹಾರಗಳು ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು ಬಹುತೇಕ ಖಾಯಿಲೆಗಳಿಗೆ ರಾಮಬಾಣವಾಗಿದೆ. ಮನುಷ್ಯನ ಆಹಾರ ಕ್ರಮದಲ್ಲಿ ಆತನಿಗೆ ಅರಿವು ಮುಖ್ಯವಾಗಿ ಬೇಕಿದೆ. ಆಹಾರ ಸಮತೋಲನ ಕಾಯ್ದುಕೊಳ್ಳುವ ಮೂಲಕ ಹಾಗೂ ಹಿತ-ಮಿತ ಆರಾಹ ಸೇವನೆ ಕ್ರಮದಿಂದ ಆರೋಗ್ಯ ಭಾಗ್ಯವನ್ನು ಪಡೆಯಬಹುದು. ತಾವು ತಿನ್ನುವ ಆಹಾರದ ಬಗ್ಗೆ ಜ್ಞಾನ ಬೆಳೆಸಿಕೊಂಡು ವಾರಕ್ಕೊಮ್ಮೆಯಾದರೂ ಮಿತವಾದ ಉಪವಾಸ ಹಣ್ಣು-ಹಂಪಲು ಹಾಗೂ ಔಷದೀಯ ಸಸ್ಯಗಳ ಆಹಾರ ಸೇವನಾ ಕ್ರಮ ರೂಡಿಸಿಕೊಳ್ಳಬೇಕು. ಆಹಾರ ಕ್ರಮದ ಜೊತೆಗೆ ಜೀವನ ಕಲೆಯಾದ ಯೋಗವನ್ನು ಮೈಗೂಡಿಸಿಕೊಳ್ಳುವುದರಿಂದ ಮನಸ್ಸು ಹಾಗೂ ಬುದ್ಧಿ-ಭಾವನೆಯನ್ನು ಸ್ಥೀಮಿತದಲ್ಲಿ ಇಟ್ಟುಕೊಂಡು ಇಚ್ಚಾಕಾರ್ಯವನ್ನು ಸಿದ್ಧಿಸಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ವಹಿಸಿ ಮಾತನಾಡಿ, ಸ್ಥಳಿಯವಾದ ನಮ್ಮ ಪರಿಸರದಲ್ಲಿನ ಸಸ್ಯ ಪ್ರಭೇದಗಳನ್ನು ಪರಿಚಯಿಸಿ ಅವುಗಳಲ್ಲಿ ಉಪಯುಕ್ತವಾದವುಗಳನ್ನು ಆಹಾರವಾಗಿ ತಯಾರಿಸಿ ಯಾವುದು ಒಳಿತು ಕೆಡುಕು ಆಹಾರ ಎಂಬುದನ್ನು ತೋರಿಸಿಕೊಡುವುದೇ ಈ ಕಾರ್ಯಕ್ರಮದ ಉದ್ಡೇಶ. ಬೇಕರಿ ತಿಂಡಿಗಳಿಗೆ ಮಾರುಹೋಗುತ್ತಿರುವ ಯುವಪೀಳಿಗೆಗೆ ಮಾರ್ಗದರ್ಶನ ಮಾಡುವ ಪ್ರಯತ್ನದ ಜೊತೆಗೆ ಮಾನಸಿಕ ದೃಢತೆಯನ್ನು ಕಾಪಾಡಿಕೊಂಡು, ಸಾಮೂಹಿಕ ಆರೋಗ್ಯ ಅಭಿವ್ರದ್ಧಿಗಾಗಿ ಹಮ್ಮಿಕೊಂಡ ಕಾರ್ಯಕ್ರಮ ಇದಾಗಿದೆ ಎಂದರು.
ಊಟದ ಮೆನು…
ಗುರುಕುಲ ಸಂಸ್ಥೆಯಲ್ಲಿ ‘ಪಂಚವಟಿ’ ಸಭಾಂಣದಲ್ಲಿ ೧೨ ಗಂಟೆಗೆ ಕಾರ್ಯಕ್ರಮ ನಿಗದಿಯಾಗಿದ್ದು ಕಾರ್ಯಕ್ರಮಕ್ಕೆ ಆಗಮಿಸುವ ಆಹ್ವಾನಿತರಿಗೆ ಮೊದಲಿಗೆ ಮುರಿಯ ಹಣ್ಣಿನ ಕಷಾಯ ನೀಡಿ ಬರಮಾಡಿಕೊಳ್ಳಲಾಗಿತ್ತು. ಮಾಧ್ಯಹ್ನದ ಊಟದ ಮೆನುವಿನಲ್ಲಿ ಕಣಿಲೆ ಮತ್ತು ಧಾರೆಹುಳಿ ಉಪ್ಪಿನಕಾಯಿ, ಈರುಳ್ಳಿ ಸೊಪ್ಪಿನ ಕೋಸಂಬರಿ, ಸಾಂಬಾರ್ ಸೊಪ್ಪಿನ ಚಟ್ನಿ, ಕೆಸುವಿನ ಚಟ್ನಿ, ಚಗ್ತೆ ಸೊಪ್ಪಿನ ಚಟ್ನಿ, ಕಣಿಲೆ ಪಲ್ಯ, ಬಾಳೆದಿಂಡಿನ ಪಲ್ಯ, ಪತ್ರೊಡೆ ಪಲ್ಯ, ಗಜಗೆಂಡೆ ಸೊಪ್ಪಿನ ಪಲ್ಯ, ಪತ್ರೊಡೆ ಗಾಲಿ, ಬೂದು ನೇರಳೆ ಇಡ್ಲಿ, ಸಬ್ಬಸಿಗೆ ಸೊಪ್ಪಿನ ಶ್ಯಾವಿಗೆ, ಅನ್ನ, ಬಿಲ್ವಪತ್ರೆ ತಂಬುಳಿ, ಎಲೆ ಉರಗ ತಂಬುಳಿ, ಗೋವೆ ಕೆಸುವಿನ ಗೆಡ್ಡೆ ಸಾಸಿವೆ, ಬಾಳೆದಿಂಡಿನ ಸಾಸಿವೆ,ಪಾಂಡವ ಹರಿಗೆ ಸೊಪ್ಪಿನ ಸಾಸಿವೆ, ಕನ್ಯಕುಡಿ ಸಾಂಬಾರ್, ಹಲಸಿನ ಬೀಜದ ಸಾರು, ಗೆಣೆಸಲೆ, ಅರಸಿನ ಎಲೆ ಪಾಯಸ, ಹಲಸಿನ ಹಣ್ಣಿನ ಹಲ್ವ, ತೊಡೆದೇವು, ಫೈನಾಪಲ್ ಹೋಳಿಗೆ, ನುಗ್ಗೆ ಸೊಪ್ಪಿನ ಬೋಂಡಾ, ಹಲಸಿನ ಬೀಜದ ವಡೆ, ಮಜ್ಜಿಗೆ ಹುಲ್ಲಿನ ಮಜ್ಜಿಗೆ ಸೇರಿದಂತೆ ಸುಮಾರು ೨೯ ಬಗೆಯ ವಿವಿಧ ಔಷಧೀಯ ಖಾದ್ಯಗಳನ್ನು ಸವಿದ ಆಹ್ವನಿತ ಅತಿಥಿಗಳು ನಿಜಕ್ಕೂ ಖುಷಿಪಟ್ಟರು.
ಹಿಂದಿನ ನಾಲ್ಕು ವರ್ಷದಿಂದ ಈ ಕಾರ್ಯಕ್ರಮವನ್ನು ಆಷಾಡ ತಿಂಗಳಲ್ಲಿ ಹಮ್ಮಿಕೊಂಡು ಬರಲಾಗುತ್ತಿದ್ದು ಸಂಸ್ಥೆಯ ಸುತ್ತಮುತ್ತಲಿನ ಸ್ಥಳದಲ್ಲಿ ಪೋಷಿಸಿಕೊಂಡು ಬರುತ್ತಿರುವ ೪೦೦ಕ್ಕೂ ಅಧಿಕ ಸಸ್ಯ ಪ್ರಬೇಧಗಳನ್ನು ಹಾಗೂ ಕಾಡುಗಳಿಂದ ತಂದ ಸಸ್ಯಗಳನ್ನು ಮಾತ್ರವೇ ಉಪಯೋಗಿಸಿಕೊಂಡು ಈ ಆಹಾರವನ್ನು ನುರಿತ ಬಾಣಸಿಗರಿಂದ ತಯಾರಿಸಲಾಗಿತ್ತು. ಈ ಅಡುಗೆಯಲ್ಲಿ ಮಾರುಕಟ್ಟೆಯ ಯಾವುದೇ ಉತ್ಪನ್ನವನ್ನು ಬಳಸಿಲ್ಲ ಎನ್ನುವುದು ಮತ್ತೊಂದು ವಿಶೇಷ.
ಕಾರ್ಯಕ್ರಮದಲ್ಲಿ ಗುರುಕುಲ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ, ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ ಮೊದಲಾದವರಿದ್ದರು.
Comments are closed.