ಬೆಂಗಳೂರು, ಆ.2: ನಗರದ ಕೆಂಪೇಗೌಡ ರಸ್ತೆಯ ಅಡಿಗಾಸ್ ಹೋಟೆಲ್ ಬಳಿ ಇಂದು ಬೆಳಗ್ಗೆ ಭೂಕುಸಿತ ಉಂಟಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಮೆಟ್ರೋ ಸುರಂಗದ ಸಮೀಪವೇ ಈ ಕುಸಿತ ಉಂಟಾಗಿದ್ದು, ಮೆಟ್ರೋ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
6ಅಡಿ ಭೂ ಕುಸಿತವಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸ್ಥಳಕ್ಕೆ ಬಿಬಿಎಂಪಿ ಹಾಗೂ ಮೆಟ್ರೋ ನಿಗಮದ ಅಧಿಕಾರಿಗಳು ಭೇಟಿ ನೀಡಿ, ಬ್ಯಾರಿಕೇಡ್ ಅಳವಡಿಸಿ, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಏಕಾಏಕಿ ಭೂ ಕುಸಿತ ಉಂಟಾಗಿದೆ. ಇದನ್ನು ಕಂಡ ವಾಹನ ಸವಾರರು, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಆಗಮಿಸಿ, ವಾಹನ ಸಂಚಾರವನ್ನು ತಡೆದು, ಅನಾಹುತ ತಡೆದಿದ್ದಾರೆ.ಭೂಕುಸಿತಕ್ಕೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮೆಟ್ರೋ ನಿಗಮದ ಮೂಲಗಳು ತಿಳಿಸಿವೆ.
ಭೂಕುಸಿತದಿಂದ ಮೆಟ್ರೋ ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ. ಆದರೂ ಸುರಂಗ ಮಾರ್ಗದ ಸಮೀಪವೇ ಇದು ನಡೆದಿರುವುದರಿಂದ ಪರಿಶೀಲನೆ ನಡೆಸಿ, ಇಂತಹ ಘಟನೆ ಮರುಕಳಿಸದಂತೆ ಕ್ರಮಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.