ಮಂಗಳೂರು,ಆ.4: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯೊಂದರಲ್ಲಿ ಅಂತಾರಾಜ್ಯ ಗಾಂಜಾ ವ್ಯವಹಾರ ಜಾಲವೊಂದನ್ನು ಪತ್ತೆಹಚ್ಚಿ 51 ಕೆಜಿ ಗಾಂಜಾ ಜೊತೆಗೆ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರ ಶೇಖರ್ ತಿಳಿಸಿದ್ದಾರೆ.
ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಧಿತ ಆರೋಪಿಯನ್ನು ಕಾಸರಗೋಡಿನ ಉಪ್ಪಳ ನಿವಾಸಿ ಮೊಯ್ದಿನ್ ನವಾಝ್ (29) ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಯಿಂದ ಇನ್ನೋವಾ ಕಾರು ಹಾಗೂ ರೂ.10,50,000 ಮೌಲ್ಯದ 51 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಆರೋಪಿ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಈ ಬೃಹತ್ ಪ್ರಮಾಣದ ಗಾಂಜಾವನ್ನು ಗೋಣಿಚೀಲಗಳಲ್ಲಿ ತುಂಬಿ ಇಂದು ಬೆಳಗ್ಗೆ ಖಾಸಗಿ ಇನ್ನೋವಾ ಕಾರಿನಲ್ಲಿ ಮಂಗಳೂರು ಹಾಗೂ ಕಾಸರಗೋಡು ಜಿಲ್ಲೆಗೆ ಸಾಗಿಸಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಆರೋಪಿಯ ಕಾರನ್ನು ಬೆನ್ನು ಹತ್ತಿದ ಪೊಲೀಸರು ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಕ್ರಾಸ್ ಬಳಿ, ಇಂದು ಬೆಳಗ್ಗೆ ಕಾರು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಯುಕ್ತರು ವಿವರಿಸಿದರು.
ಆರೋಪಿ ಕಾಸರಗೋಡಿನ ಉಪ್ಪಳ ನಿವಾಸಿಯಾಗಿದ್ದು, ದುಬೈನಲ್ಲಿ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದು, ನಷ್ಟದ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ಬಂದಿರುವ ಆತ ಕಳೆದ ಒಂದು ವರ್ಷದಿಂದ ಇಲ್ಲೇ ಇರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ಹೇಳಿದರು.
ಕಳೆದ ಆರು ತಿಂಗಳಲ್ಲಿ ಪೊಲೀಸ್ ಇಲಾಖೆಯಿಂದ ವಶಪಡಿಸಿಕೊಳ್ಳಲಾದ ಬೃಹತ್ ಪ್ರಮಾಣದ ಗಾಂಜಾ ಇದಾಗಿದೆ. ಇಂದು ನಡೆದ ಕಾರ್ಯಾಚರಣೆಯ ವೇಳೆ ಇನ್ನೋವಾ ಕಾರಿನಲ್ಲಿ ಓರ್ವ ವ್ಯಕ್ತಿ ಮಾತ್ರ ಇದ್ದು, ಈ ಜಾಲದಲ್ಲಿ ಬೇರೆಯವರು ಇದ್ದಾರೆಯೇ, ಈ ಹಿಂದೆಯೂ ಈತ ಈ ಕೃತ್ಯದಲ್ಲಿ ತೊಡಗಿಕೊಂಡಿದ್ದನೇ ಎಂಬ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ. ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಸುನಿಲ್ ವೈ. ನಾಯಕ್ ನೇತೃತ್ವದಲ್ಲಿ ಎಸ್ಸೈ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದರು.
ರಾಜಸ್ತಾನ ಅಪಹರಣ ಪ್ರಕರಣ: ಓರ್ವ ಸೆರೆ
ರಾಜಸ್ತಾನದಲ್ಲ್ಲಿ ಮಂಗಳೂರಿನ ಕಿರ್ಲೋಸ್ಕರ್ ಡೀಲರ್ಶಿಪ್ ಉದ್ಯೋಗಿ ರಿಚರ್ಡ್ ಅಪಹರಣಕಾರರ ತಂಡದ ಶಂಕಿತ ನಾಲ್ವರ ಪೈಕಿ ಓರ್ವನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದ್ದು, ಶೀಘ್ರದಲ್ಲೇ ಎಲ್ಲಾ ಆರೋಪಿಗಳ ಬಂಧನವಾಗಲಿದೆ ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದರು.
Comments are closed.