*ಯೋಗೀಶ್ ಕುಂಭಾಸಿ
ಕುಂದಾಪುರ: ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಬಡಾಕೆರೆ, ಕೋಣ್ಕಿ, ನಾಡಾ, ಗುಡ್ಡೆಹೋಟೆಲ್ ಸೇರುವ ಮುಖ್ಯರಸ್ತೆಯ ದುರಸ್ತಿಯ ಕುರಿತು ಗ್ರಾಮಸ್ಥರಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ರಸ್ತೆಯ ಅವ್ಯವಸ್ಥೆ-ಗೋಳು ಕೇಳೋರಿಲ್ಲ..!
ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಬಡಾಕೆರೆ, ಕೋಣ್ಕಿ, ಗುಡ್ಡೆಹೋಟೆಲ್ ಪ್ರದೇಶದಲ್ಲಿ ಸುಮಾರು 600 ಕುಟುಂಬಗಳು ವಾಸವಾಗಿದ್ದು, ಇಲ್ಲಿನ ನಿವಾಸಿಗಳು ಮೂಲಭೂತ ಸೌಕರ್ಯಗಳಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಈ ಗ್ರಾಮಗಳ ಮೂಲಕ ಹಾದುಹೋಗುವ ಮುಖ್ಯರಸ್ತೆ ಕಳೆದ 8 ವರ್ಷಗಳಿಂದ ನಿರ್ಮಾಣಗೊಂಡಿದ್ದು, ಈಗ ಅಲ್ಲಿ ಕಚ್ಚಾರಸ್ತೆ ಕಣ್ಮರೆಯಾಗಿದೆ. ಈ ಭಾಗದಲ್ಲಿ ಸುಮಾರು 300 ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಶಾಲಾ- ಕಾಲೇಜುಗಳಿಗೆ ಹೋಗುವರಾಗಿದ್ದು, ರಸ್ತೆಯ ದುರಾವಸ್ಥೆಯಿಂದ ಶಾಲಾ- ಕಾಲೇಜು ಹೋಗುವ ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಹೋಗಲು ಹರಸಾಹಸ ಪಡಬೇಕಾಗಿದೆ.
ವಾಹನ ಬರಲು ಕಷ್ಟ…
ನಾದುರಸ್ಥಿಗೊಂಡ ಈ ರಸ್ತೆಯ ಮೂಲಕ ವಾಹನಗಳ ಸಂಚಾರ ಸಹ ಕಷ್ಟಕರವಾಗಿದ್ದು, ಯಾವ ವಾಹನಗಳು ಈ ಮಾರ್ಗದ ಮೂಲಕ ಸಂಚರಿಸುವುದಿಲ್ಲ. ಏನಾದರೂ ಅನಾರೋಗ್ಯ ಉಂಟಾದಲ್ಲಿ ಬಾಡಿಗೆ ವಾಹನ ಕರೆದರೂ ಯಾವ ವಾಹನವೂ ಈ ಮಾರ್ಗಕ್ಕೆ ಬರಲು ಒಪ್ಪುವುದಿಲ್ಲ. ಪರ್ಯಾಯ ಮಾರ್ಗ ಇದ್ದರೂ ಸಹ ಆ ಭಾಗವು ಅರಣ್ಯ ಮತ್ತು ನಿರ್ಜನ ಪ್ರದೇಶವಾದ ಕಾರಣ ವಿದ್ಯಾರ್ಥಿನಿಯರು ಗ್ರಾಮಸ್ಥರು ತಿರುಗಾಡಲು ಕಷ್ಟಕರವಾಗಿದೆ.
ಅವ್ಯವಸ್ಥಿತವಾದ ಈ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಆಗ್ರಹಿಸಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರು ವಿಶೇಷ ತಹಶೀಲ್ದಾರ್ ಆದ ಕಿರಣ್ ಗೌರಯ್ಯ, ನಾಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಜೆನ್ ಒಲಿವೇರಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ನಾಡಾ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಮುಖಂಡ ಸತೀಶ್ ಎಮ್. ನಾಯ್ಕ್ ಪ್ರತಿಭಟನಾ ನೇತೃತ್ವ ವಹಿಸಿ ಮಾತನಾಡಿದರು. ವಿವಿಧ ಗ್ರಾಮಗಳ ಮುಖಂಡರಾದ ಸುದರ್ಶನ್ ಶೆಟ್ಟಿ, ರಾಘವೇಂದ್ರ ಮೆಂಡನ್, ಉದಯ ಪೂಜಾರಿ ಜಡ್ಡಾಡಿ, ರವಿರಾಜ್ ಗುಡ್ಡೆಹೋಟೇಲ್, ಅವಿನಾಶ್ ಭಂಡಾರಿ, ಜಯಪ್ರಕಾಶ್ ಬಡಾಕೆರೆ(ಜೆ.ಪಿ.), ಚಂದ್ರ, ಸಂದೀಪ ಪೂಜಾರಿ, ಚಂದ್ರಶೇಖರ್, ರವಿ ಬೆಳ್ಳಾಡಿ, ಸುರೇಶ್ ಪೂಜಾರಿ, ರವಿ ಪೂಜಾರಿ ಗುಡ್ಡೆಹೋಟೇಲ್,ಗಿರೀಶ್ ಬಡಾಕೆರೆ, ರಮೇಶ್ ಗುಡ್ಡೆ ಹೋಟೇಲ್, ಉದಯ್ ಜಡ್ಡು, ಅದ್ದು ಬಡಾಕೆರೆ, ವಿರೇಂದ್ರ ಪೂಜಾರಿ, ಉಮೇಶ್ ಗೋಳಿಹಕ್ಲು, ಮಹೇಶ್ ಪುತ್ರನ್, ಲೋಕೇಶ್ ಜಡ್ಡು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಉಪಸ್ಥಿತರಿದ್ದು ಬಂದೋಬಸ್ತ್ ಏರ್ಪಡಿಸಿದ್ದರು.
Comments are closed.