ಉಳ್ಳಾಲ, ಆ.6: ಉಳ್ಳಾಲದ ಅಳಿವೆಬಾಗಿಲಿನಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಮಗುಚಿ ನೀರು ಪಾಲಾದ ಮೀನುಗಾರ ಹಾಗೂ ಆತನ ರಕ್ಷಣೆಗೆ ರಕ್ಷಣೆಗೆ ಧಾವಿಸಿದ ಯುವಕ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ನೀರುಪಾಲಾದ ಮೀನುಗಾರನನ್ನು ತಮಿಳುನಾಡು ಮೂಲದ ಡೆಲ್ಲಿ ಚಂದನ್ (40) ಎಂದು ಗುರುತಿಸಲಾಗಿದೆ. ಈತ ನೀರುಪಾಲಾಗುತ್ತಿದ್ದ ಸಂದರ್ಭ ನೀರಿನಲ್ಲಿ ಮುಳುಗುತ್ತಿದ್ದ ಮೀನುಗಾರರನ್ನು ರಕ್ಷಿಸಲು ಧಾವಿಸಿದ ಉಳ್ಳಾಲದ ಕೋಟೆಪುರದ ನಿವಾಸಿ ಫಯಾಝ್ ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ತಮಿಳುನಾಡು ಮೂಲದ ಮೆಹನಸ್ (46), ಕುಮಾರ್ (30) ಮತ್ತು ಡೆಲ್ಲಿ ಚಂದನ್ ಎಂಬವರು ನಾಡದೋಣಿಯಲ್ಲಿ ಉಳ್ಳಾಲ ಅಳಿವೆಬಾಗಿಲಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ಸಂದರ್ಭ ಪ್ರಕ್ಷುಬ್ಧಗೊಂಡ ಕಡಲಿನಿಂದಾಗಿ ದೋಣಿಯು ಆಯತಪ್ಪಿ ಮಗುಚಿಬಿದ್ದಿದ್ದು, ಕುಮಾರ್ ಮತ್ತು ಚಂದನ್ ನೀರುಪಾಲಾಗಿದ್ದಾರೆ. ಈ ಸಂದರ್ಭ ಮೀನುಗಾರರು ನೀರುಪಾಲಾಗುತ್ತಿರುವುದನ್ನು ಕಂಡು ಸ್ಥಳೀಯರಾದ ಫಯಾಝ್ ಮತ್ತು ರಮೀಝ್ ಎಂಬವರು ರಕ್ಷಿಸಲು ಮುಂದಾಗಿದ್ದು, ಮೆಹನಸ್ ರನ್ನು ರಕ್ಷಿಸಿದ್ದಾರೆ. ಕರಾವಳಿ ರಕ್ಷಣಾ ಪಡೆಯ ವೈಮಾನಿಕ ಕಾರ್ಯಾಚರಣೆಯ ಮೂಲಕ ಕುಮಾರ್ ರನ್ನು ರಕ್ಷಿಸಲಾಗಿದೆ.
ಈ ಸಂದರ್ಭ ರಕ್ಷಿಸಲು ಕಡಲಿಗೆ ಜಿಗಿದಿದ್ದ ಫಯಾಝ್ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಉಳ್ಳಾಲ ಠಾಣಾ ಪೊಲೀಸರ ನೇತೃತ್ವದಲ್ಲಿ ನಾಪತ್ತೆಯಾದ ಮೀನುಗಾರ ಚಂದನ್ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಆಪದ್ಬಾಂಧವ ಫಝಲ್ ಉಳ್ಳಾಲ್ ಮೃತ್ಯು : ಶೋಕಸಾಗರದಲ್ಲಿ ಕೋಟೆಪುರ
ಉಳ್ಳಾಲ ಅಳಿವೆಬಾಗಿಲಿನಲ್ಲಿ ಮೀನುಗಾರಿಕಾ ದೋಣಿ ಮುಳುಗಿ, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೀನುಗಾರ ಪೈಕಿ ಓರ್ವನನ್ನು ರಕ್ಷಿಸಿ, ಮತ್ತೊಬ್ಬರ ರಕ್ಷಣೆಗೆ ಯತ್ನಿಸುತ್ತಿದ್ದ ವೇಳೆ ಕೋಟೆಪುರದ ಆಪದ್ಭಾಂಧವ ಎಂದೇ ಪ್ರಸಿದ್ಧರಾಗಿದ್ದ ಜೀವರಕ್ಷಕ ಪಡೆಯ ಫಝಲ್ (38) ಮೃತಪಟ್ಟಿದ್ದಾರೆ. ಪರೋಪಕಾರಗೈಯುತ್ತಲೇ ತನ್ನ ಪ್ರಾಣತೆತ್ತ ಫಝಲ್ ಅವರ ಮೃತ್ಯು ಕೋಟೆಪುರವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಇಂದು ಮಧ್ಯಾಹ್ನ ವೇಳೆ ಉಳ್ಳಾಲ ಕೋಟೆಪುರದ ಅಳಿವೆಬಾಗಿಲಿನ ಬಳಿ ಮೀನುಗಾರಿಕೆ ನಡೆಸುತ್ತಿದ್ದ ನಾಡದೋಣಿಯೊಂದು ಕಡಲ ಅಲೆಗೆ ಸಿಲುಕಿ ಮಗುಚಿತ್ತು. ದೋಣಿಯಲ್ಲಿದ್ದ ಮೂವರು ಮೀನುಗಾರರು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದರು. ಇದನ್ನು ಸಮುದ್ರತೀರದಲ್ಲೇ ಇದ್ದ ಫಝಲ್ ಗಮನಿಸಿದ್ದು, ಕೂಡಲೇ ಕಡಲಿಗೆ ಧುಮುಕಿ, ಮುಳುಗುತ್ತಿದ್ದ ಮೀನುಗಾರರ ಪೈಕಿ ಓರ್ವನನ್ನು ದಡಕ್ಕೆ ಎಳೆದು ತಂದಿದ್ದರು.
ಮತ್ತೊಬ್ಬನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ವೇಳೆ ಸಮುದ್ರದ ಅಲೆಯ ರಭಸಕ್ಕೆ ತಲೆ ಬಂಡೆಕಲ್ಲೊಂದಕ್ಕೆ ತಾಗಿ ಗಾಯಗೊಂಡು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉಳ್ಳಾಲ ವ್ಯಾಪ್ತಿಯಲ್ಲಿ ಯಾವುದೇ ಅವಘಡಗಳು ಸಂಭವಿಸಿದರೂ, ಫಝಲ್ ಅವರು ತಕ್ಷಣ ಕಾರ್ಯಪ್ರವೃತ್ತರಾಗುತ್ತಿದ್ದರು. ಸೋಮೇಶ್ವರ ಕಡಲತೀರದಲ್ಲಿ ನೀರುಪಾಲಾಗುತ್ತಿದ್ದ ಮೂವರು ಹೊರ ಜಿಲ್ಲೆಗಳ ಪ್ರವಾಸಿಗರನ್ನು ರಕ್ಷಿಸಿದ್ದರು. ಉಳ್ಳಾಲ ಕಡಲತೀರದಲ್ಲೂ ನೀರುಪಾಲಾಗುತ್ತಿದ್ದವರನ್ನು ರಕ್ಷಿಸಿದ್ದರು.
ಸಮಾಜಸೇವಕರಾಗಿ ಗುರುತಿಸಿಕೊಂಡು, ಆಪದ್ಭಾಂಧವರಾಗಿದ್ದ ಫಝಲ್ ಅವರು ಓರ್ವನನ್ನು ರಕ್ಷಿಸುತ್ತಲೇ ಪ್ರಾಣತೆತ್ತಿರುವುದು ಬೇಸರದ ಸಂಗತಿ ಎಂದು ಫಝಲ್ ಅವರ ನಿಕಟವರ್ತಿಗಳು ತಿಳಿಸಿದ್ದಾರೆ.ಮೃತ ಫಝಲ್ ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
Comments are closed.