ಮಂಗಳೂರು, ಆ.6: ಮಂಗಳೂರು ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಇಬ್ಬರು ಮಹಿಳೆಯರನ್ನು ದಕ್ಷಿಣ ಠಾಣಾ ಪೊಲೀಸರು ಅಗಸ್ಟ್ 6ರಂದು ಬಂಧಿಸಿ ಆರೋಪಿಗಳ ವಶದಿಂದ ಸುಮಾರು 80 ಗ್ರಾಂ ತೂಕದ ಮೌಲ್ಯದ 2, 64, 000/- ಮೌಲ್ಯದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಹಾಗೂ 1,45,000 ರೂ ನಗದು ಹಣ ವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಮಂಗಳೂರಿನ ಕಮಿಷನರ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಮೂಲದವರಾದ ಅಯ್ಯಪ್ಪನ್ ಎಂಬವರ ಪತ್ನಿ ಸಿಲ್ವಿ (24) ಹಾಗೂ ಮುತ್ತು ಎಂಬವರ ಪುತ್ರಿ ಅರೈ (22) ಬಂಧಿತ ಆರೋಪಿಗಳು. ದಿನಾಂಕ:06-08-2016 ರಂದು ಆರೋಪಿಗಳು ತಾವು ಸುಲಿಗೆ ಮಾಡಿದ ಚಿನ್ನಾಭರಗಳನ್ನು ಮಾರಾಟ ಮಾಡಲು ಬಂದಿರುವ ಬಗ್ಗೆ ಖಚಿತಿ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಬೆಳ್ಳಿಯಪ್ಪ ಕೆ.ಯು ರವರು ಬೆಳಿಗ್ಗೆ 9-30 ಗಂಟೆಗೆ ಆರೋಪಿಗಳನ್ನು ಮಂಗಳೂರು ನಗರದ ರೂಪವಾಣಿ ಟಾಕೀಸ್ ಬಳಿಯಿಂದ ಬಂಧಿಸಿರುತ್ತಾರೆ ಎಂದು ತಿಳಿಸಿದರು.
ಆರೋಪಿಗಳಿಬ್ಬರು ತಮಿಳ್ನಾಡು ಮೂಲದವರಾಗಿದ್ದು, ಊರೂರು ಸುತ್ತಾತ್ತಾ, ಒಬ್ಬಂಟಿಗರಾಗಿ ನಡೆದುಕೊಂಡು ಹೋಗುವ ಮಹಿಳೆಯರ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರ ಚಿನ್ನಾಭರಣಗಳನ್ನು ಮತ್ತು ಪರ್ಸ್ ನಲ್ಲಿದ್ದ ನಗದು ಹಣವನ್ನು ಸುಲಿಗೆ ಮಾಡುವ ಪ್ರವೃತ್ತಿಯವರಾಗಿರುತ್ತಾರೆ. ಇವರು ಬಸ್ಸಿನಲ್ಲಿ ಪ್ರಯಾಣಿಸುವ ಸಮಯ ಮಹಿಳಾ ಪ್ರಯಾಣಿಕರ ಬಳಿ ನಿಂತುಕೊಂಡು, ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು, ಪ್ರಯಾಣಿಕರ ಅರಿವಿಗೆ ಬಾರದೇ ತುಂಬಾ ಚಾಕಚಕ್ಯತೆಯಿಂದ ಕುತ್ತಿಗೆಯಲ್ಲಿದ್ದ ಚಿನ್ನಾಭರಣಗಳನ್ನು ಹಾಗೂ ಪರ್ಸ್ ನಲ್ಲಿದ್ದ ನಗದು ಹಣವನ್ನು ಸುಲಿಗೆ ಮಾಡುವುದಲ್ಲಿ ನಿಸ್ಸೀಮರಾಗಿರುತ್ತಾರೆ ಎಂದವರು ವಿವರಿಸಿದರು.
ಆರೋಪಿಗಳು ಭಾಗಿಯಾದ ಪ್ರಕರಣಗಳು :
1) ದಿನಾಂಕ:29-07-2016 ರಂದು ಶ್ರೀಮತಿ ಲೀಲಾವತಿ ಎಂಬವರು ಮಂಗಳಾದೇವಿಯಿಂದ ರೂಟ್ ನಂಬ್ರ 6 ಡಿ ಅಂಬಿಕಾ ಬಸ್ಸಿನಲ್ಲಿ ಕಂಕನಾಡಿಗೆ ಪ್ರಯಾಣಿಸುತ್ತಿದ್ದ ಸಮಯ ಅವರ ವ್ಯಾನಿಟಿ ಬ್ಯಾಗ್ ನಲ್ಲಿದ್ದ 1,58, 760/- ರೂ ನಗದು ಹಣವನ್ನು ಕಳವು ಮಾಡಿರುತ್ತಾರೆ.
2) ದಿನಾಂಕ:01-08-2016 ರಂದು ಸೂಟರ್ ಪೇಟೆ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಗುಣವಂತಿ ಎಂಬವರ ಸುಮಾರು 40 ಗ್ರಾಂ ತೂಕದ ಹವಳದ ಚಿನ್ನಾಭರಣವನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ.
3) ದಿನಾಂಕ:05-08-2016 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಶ್ರೀಮತಿ ಪರಮೇಶ್ವರಿ ಎಂಬವರು ಮಂಗಳೂರು ಕಂಕನಾಡಿ ಬಸ್ಸು ಸ್ಟಾಪ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಸಮಯ ಕುತ್ತಿಗೆಯಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನಾಭರಣವನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ.
4) ದಿನಾಂಕ:5-08-2016 ಶ್ರೀಮತಿ ಮಾಲತಿ ಎಂಬವರು ಮಂಗಳಾದೇವಿಯಿಂದ ಬಸ್ಸಿಗೆ ಹತ್ತುತ್ತಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಯಿಂದ 24 ಗ್ರಾಂ ತೂಕದ ಚಿನ್ನದ ಸರ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಶಾಂತರಾಜು ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಮುಹಮ್ಮದ್ ಶರೀಫ್ ಕೆ., ಅನಂತ ಮುರ್ಡೇಶ್ವರ, ಸಿಬ್ಬಂದಿಯಾದ ವಿಶ್ವನಾಥ, ಗಂಗಾಧರ, ಧನಂಜಯ ಗೌಡ, ಶೇಖರ್ ಗಟ್ಟಿ, ಸತ್ಯನಾರಾಯಣ, ನೂತನ್ ಕುಮಾರ್, ಚಂದ್ರಶೇಖರ, ವಿಶ್ವನಾಥ ಬುಡೋಳಿ, ಮಹಿಳಾ ಸಿಬ್ಬಂದಿ ಝರೀನಾ ತಾಜ್ ಪಾಲ್ಗೊಂಡಿದ್ದರು ಎಂದು ಡಿಸಿಪಿ ತಿಳಿಸಿದರು.
Comments are closed.