*ಯೋಗೀಶ್ ಕುಂಭಾಸಿ
ಉಡುಪಿ: ದುಬೈಯ ಉದ್ಯಮಿ ಭಾಸ್ಕರ್ ಶೆಟ್ಟಿ ಕಿಡ್ನ್ಯಾಪ್ ಪ್ರಕರಣಕ್ಕೆ ಶನಿವಾರ ಒಂದು ತಿರುವು ಸಿಕ್ಕಿದ್ದು ಅವರನ್ನು ಕೊಲೆ ಮಾಡಿರುವ ಬಗ್ಗೆ ಅವರ ಪತ್ನಿ ರಾಜೇಶ್ವರೀ ಹಾಗೂ ಪುತ್ರ ನವನೀತ್ ಶೆಟ್ಟಿಯನ್ನು ವಶಕ್ಕೆ ಪಡೆಯಲಾಗಿತ್ತು. ಖ್ಯಾತ ಉದ್ಯಮಿ ಭಾಸ್ಕರ್ ಶೆಟ್ಟಿ ಉಡುಪಿಯಲ್ಲಿ ಪತ್ನಿ, ಪುತ್ರನಿಂದಲೇ ಕೊಲೆಯಾಗಿದ್ದಾರೆ ಎಂಬ ಊಹಾಪೋಹಕ್ಕೆ ಸದ್ಯ ತೆರೆಬಿದ್ದಿದ್ದು ಪತ್ನಿ ಹಾಗೂ ಪುತ್ರ ಮತ್ತು ಭಾಸ್ಕರ್ ಸ್ನೇಹಿತನಾಗಿದ್ದ ಇತ್ತ ಭಾಸ್ಕರ್ ಪತ್ನಿಯ ಜೊತೆ ಸಲುಗೆಯಲ್ಲಿದ್ದ ಜ್ಯೋತಿಷಿಯೇ ಕೊಲೆಗಾರರೆಂಬ ಮಾಹಿತಿ ಪೊಲೀಸ್ ತನಿಖೆಯ ವೇಳೆ ಭಾನುವಾರ ಬಹಿರಂಗಗೊಂಡಿದೆ.
ಘಟನೆ ವಿವರ: ಭಾನುವಾರದಂದು ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 193/2016 ಕಲಂ: ಮನುಷ್ಯ ಕಾಣೆ ಪ್ರಕರಣದಲ್ಲಿ ಭಾಸ್ಕರ ಶೆಟ್ಟಿ ಅವರ ಮಗ ನವನೀತ್ ಬಿ. ಶೆಟ್ಟಿ ಮತ್ತು ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಬಿ. ಶೆಟ್ಟಿಯನ್ನು ಪೊಲೀಸ್ ತನಿಖೆಯಲ್ಲಿ ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
(ಪತ್ನಿ-ಪುತ್ರನೊಂದಿಗೆ ಭಾಸ್ಕರ್ ಶೆಟ್ಟಿ)
ಯಾತಕ್ಕಾಗಿ ಕೊಲೆ..?
ಭಾಸ್ಕರ ಶೆಟ್ಟಿಯು ಸೌದಿ ಅರೆಬಿಯಾದಲ್ಲಿ ಹಲವಾರು ಸೂಪರ್ ಮಾರ್ಕೆಟ್ ವ್ಯವಹಾರ ಮಾಡಿಕೊಂಡಿದ್ದು, ವರ್ಷಕ್ಕೊಮ್ಮೆ ಊರಿಗೆ ಬಂದು ಹೋಗುವ ಪರಿಪಾಠ ಹೊಂದಿದ್ದರು. ಉಡುಪಿಯಲ್ಲೂ ಕೂಡ ಭಾಸ್ಕರ್ ಅವರಿಗೆ ಕೋಟ್ಯಂತರ ಬೆಲೆ ಬಾಳುವ ಆಸ್ತಿ-ಪಾಸ್ತಿ ಇತ್ತು. ಕಳೆದ ಒಂದು ವರ್ಷದಿಂದ ರಾಜೇಶ್ವರಿ ಶೆಟ್ಟಿಗೂ ನಂದಳಿಕೆಯ ನಿರಂಜನ್ ಭಟ್ಟ ಎಂಬ ಸೋ ಕಾಲ್ಡ್ ಜ್ಯೋತಿಷಿಗೂ ಅನ್ಯೋನ್ಯತೆ ಬೆಳೆದಿತ್ತು. ಇಬ್ಬರೂ ತುಂಬಾನೆ ಸಲುಗೆಯಿಂದ ಇದ್ದಿದ್ದು ಈ ವಿಷಯವು ಭಾಸ್ಕರ ಶೆಟ್ಟಿರವರಿಗೆ ಗೊತ್ತಾಗಿತ್ತು. ಈ ವಿಚಾರವಾಗಿಯೇ ರಾಜೇಶ್ವರಿ ಶೆಟ್ಟಿಯ ಮೇಲೆ ಭಾಸ್ಕರ್ ಶೆಟ್ಟಿ ಸಿಟ್ಟಾಗಿದ್ದು, ರಾಜೇಶ್ವರಿ ಶೆಟ್ಟಿ ಮತ್ತು ನಿರಂಜನ ಭಟ್ಟರ ನಡುವಿನ ಸಂಬಂಧದಿಂದ ಬೇಸರಡಿದ್ದರು.
(ಪತ್ನಿ ರಾಜೇಶ್ವರಿ ಜೊತೆ ಭಾಸ್ಕರ್ ಶೆಟ್ಟಿ)
ವೈಮನಸ್ಸು…ಆಸ್ತಿ ಕಲಹ..ಕೊಲೆ..
ನಿರಂಜನ್ ಭಟ್ ಜೊತೆ ಪತ್ನಿಗಿದ್ದ ಸಂಪರ್ಕ ತಿಳಿದ ಮೇಲೆ ಇವರಿಬ್ಬರ ನಡುವೆ ವೈಮನಸ್ಸಾಗಿತ್ತು. ಬಳಿಕ ಭಾಸ್ಕರ ಶೆಟ್ಟಿ ಅವರು ರಾಜೇಶ್ವರಿ ಶೆಟ್ಟಿಗೆ ಡೈವೋರ್ಸ್ ನೀಡುವಂತೆ ಒತ್ತಾಯಿಸುತ್ತಿದ್ದರು ಮತ್ತು ತಮ್ಮ ಆಸ್ತಿಯಲ್ಲಿ ರಾಜೇಶ್ವರಿ ಶೆಟ್ಟಿಗೆ ಯಾವುದೇ ಪಾಲನ್ನು ನೀಡುವುದಿಲ್ಲವೆಂದು ತಾಕೀತು ಮಾಡಿದ್ದರು. ತನ್ನ ಎಲ್ಲಾ ಆಸ್ತಿಯನ್ನು ತನ್ನ ತಾಯಿಯ ಮನೆಯ ಕಡೆಯವರಿಗೆ ವಿಲ್ ಮೂಲಕ ನೀಡುವುದಾಗಿ ಭಾಸ್ಕರ ಶೆಟ್ಟಿ ನಿರ್ಧರಿಸಿದ್ದರು. ಈ ಬಗ್ಗೆ ಪತ್ನಿಗೆ ವಿಚಾರ ತಿಳಿಯುತ್ತಲೇ ತನ್ನ ಪತಿ ಭಾಸ್ಕರ ಶೆಟ್ಟಿಯನ್ನು ಕೊಲೆ ಮಾಡಿದರೆ ಗಂಡನ ಎಲ್ಲಾ ಆಸ್ತಿಯು ತನಗೆ ಮತ್ತು ತನ್ನ ಮಗನಿಗೆ ಸಿಗುತ್ತದೆ ಎಂದು ಸ್ಕೆಚ್ ಮಾಡಿದ್ದರು. ಕೊಲೆಗಡುಕಿ ರಾಜೇಶ್ವರಿ ಶೆಟ್ಟಿ ಜೊತೆಗೆ ಆಕೆ ಪುತ್ರ ನವನೀತ್ ಶೆಟ್ಟಿ ಮತ್ತು ನಿರಂಜನ ಭಟ್ ಸೇರಿಕೊಂಡು ಭಾಸ್ಕರ ಶೆಟ್ಟಿಯನ್ನು ಕೊಲೆ ಮಾಡುವ ಸ್ಕೆಚ್ ರೂಪಿಸಿದಂತೆ ಸಾಕ್ಷ್ಯ ನಾಶಪಡಿಸಿ ಕೊಲೆಮಾಡಿ, ಭಾಸ್ಕರ ಶೆಟ್ಟಿರವರ ಮೃತದೇಹವನ್ನು ನಾಶಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
(ಭಾಸ್ಕರ್ ಶೆಟ್ಟಿ ಪುತ್ರ ನವನೀತ್ ಶೆಟ್ಟಿ)
ತಾಯಿ-ಮಗ ಅರೆಸ್ಟ್: ನಿರಂಜನ್ ಪತ್ತೆಗೆ ಶೋಧ…
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ರಾಜೇಶ್ವರಿ ಶೆಟ್ಟಿ, ನವನೀತ್.ಬಿ.ಶೆಟ್ಟಿ, ಮತ್ತು ನಿರಂಜನ್ ಭಟ್ ರವರ ವಿರುದ್ದ ಕೊಲೆ ಹಾಗೂ ಸಾಕ್ಷ್ಯ ನಾಶ ಪ್ರಕರಣ ದಾಖಲಾಗಿದೆ. ರಾಜೇಶ್ವರಿ ಶೆಟ್ಟಿ ಹಾಗೂ ನವನೀತ್ ಶೆಟ್ಟಿಯನ್ನು ಭಾನುವಾರ ಬಂಧಿಸಲಾಗಿದೆ. ಪ್ರಕರಣದ ಇನ್ನೋರ್ವ ಆರೋಪಿ ನಿರಂಜನ್ ಭಟ್ ನಂದಳಿಕೆ ತಲೆಮರೆಸಿಕೊಂಡಿದ್ದಾನೆ. ಈತನ ಬಂಧನಕ್ಕೆ ಒಂದು ಪೊಲೀಸ್ ತಂಡವನ್ನು ರಚಿಸಿದ್ದು ತನಿಖೆ ಮುಂದುವರಿಸಲಾಗಿದೆ.
ಪೊಲೀಸರ ಕಾರ್ಯಾಚರಣೆ ತಂಡ…
ಈ ಪ್ರಕರಣದ ತನಿಖೆಯನ್ನು ಉಡುಪಿಯ ಪ್ರಭಾರ ಎಸ್ಪಿ ವಿಷ್ಣುವರ್ಧನ್ ಅವರ ನಿರ್ದೇಶನದಲ್ಲಿ, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ನಡೆಸಲಾಗಿತ್ತು. ಕಾರ್ಯಾಚರಣೆಯಲ್ಲಿ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಎಸ್.ವಿ ಗಿರೀಶ್, ಮಣಿಪಾಲ ಪೊಲೀಸ್ ಉಪನಿರೀಕ್ಷಕ ಗೋಪಾಲಕೃಷ್ಣ, ಕಾರ್ಕಳ ಗ್ರಾಮಾಂತರ ಠಾಣಾ ಪಿ.ಎಸ್.ಐ. ಎಂ. ರಫೀಕ್, ಮಣಿಪಾಲ ಠಾಣಾ ಎಎಸ್‌ಐ ಹರೀಶ್, ಮಹಿಳಾ ಎ.ಎಸ್.ಐ ಫೇಮಿನಾ, ಸಿಬ್ಬಂದಿಯವರಾದ ಶೈಲೇಶ್, ವೆಂಕಟೇಶ್, ಅನಿಲ್, ಅಶೋಕ ದೇವಾಡಿಗ, ಕೃಷ್ಣ ಹಾಗೂ ಕಾರ್ಕಳ ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ಉದಯ, ಪ್ರವೀಣ್ ಶೆಟ್ಟಿಗಾರ್, ಪ್ರಶಾಂತ್, ರವಿ ಭಾಗವಹಿಸಿದ್ದರು.
ಇದನ್ನೂ ಓದಿರಿ:
ಹೋಮಕುಂಡಕ್ಕೆ ಹಾಕಿ ಸುಟ್ಟರೇ ಉದ್ಯಮಿ ಉಡುಪಿಯ ಭಾಸ್ಕರ್ ಶೆಟ್ಟಿಯನ್ನು? ಮಡದಿ, ಮಗ, ಗೆಳೆಯ ಕಟುಕರಾದರು..!
ನಾಪತ್ತೆಯಾಗಿದ್ದ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ! ಶವವನ್ನು ಸುಟ್ಟುಹಾಕಿರುವ ಶಂಕೆ; ಪೋಲೀಸರ ವಶದಲ್ಲಿ ಪತ್ನಿ-ಮಗ …?
Comments are closed.