ಮಂಗಳೂರು, ಆಗಸ್ಟ್.11: ಮಂಗಳೂರು ತಾಲೂಕಿನ ಗಂಜಿಮಠ ಸಮೀಪದ ಮುತ್ತೂರು ಗ್ರಾಮಸ್ಥರ ಬಹುದಿನಗಳ ಬೇಡಿಕೆಯೊಂದು ಈಡೇರಿದ್ದು, ಸ್ಥಳೀಯರು ಬಹಳ ಸಂಭ್ರಮದಲ್ಲಿದ್ದಾರೆ. ಇದಕ್ಕೆ ಕಾರಣ ಮಂಗಳೂರು ತಾಲೂಕಿನಲ್ಲಿ ಅಪರೂಪ ಎನ್ನಬಹುದಾದ ತೂಗುಸೇತುವೆಯ ಉದ್ಘಾಟನೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗಂಜಿಮಠ ಸಮೀಪದ ಮುತ್ತೂರು ಎಂಬಲ್ಲಿ ಫಲ್ಗುಣಿ ನದಿಗೆ ನಿರ್ಮಿಸಲಾಗಿರುವ ಈ ತೂಗುಸೇತುವೆಯ ಉದ್ಘಾಟನೆ ಗುರುವಾರ ನೆರವೇರಿತು. ಮಂಗಳೂರು ಉತ್ತರ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಲಿರುವ ಈ ಸೇತುವೆಯ ಒಂದು ತುದಿ ಮಂಗಳೂರು ತಾಲೂಕು ಕಡೆಗಿದೆ. ಇನ್ನೊಂದು ತುದಿ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿಗೆ ಕಡೆಗಿದ್ದು, ಅಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ.
ಎರಡು ತಾಲೂಕುಗಳನ್ನು ಬೆಸೆಯುವ ಕೊಂಡಿಯಾಗಿರುವ ಇದು ಮಂಗಳೂರಿನ ಪ್ರಥಮ ತೂಗುಸೇತುವೆಯಾಗಿದೆ. ಈ ಸೇತುವೆಯಿಂದಾಗಿ ಬಡಗಬೆಳ್ಳೂರು ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರಕ್ಕೆ ಬರಲು ಇನ್ನಷ್ಟು ಹತ್ತಿರವಾಗಲಿದೆ. ತೂಗು ಸೇತುವೆ ‘ಪ್ರವೀಣ’ ಎಂದೇ ಖ್ಯಾತರಾದ ಸುಳ್ಯದ ಗಿರೀಶ್ ಈ ತೂಗುಸೇತುವೆ ನಿರ್ಮಿಸಿದ್ದಾರೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಇಂದು ನೂತನ ಸೇತುವೆಯನ್ನು ಉದ್ಘಾಟಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ, ಶಾಸಕ ಬಿ.ಎ. ಮೊಯ್ದಿನ್ ಬಾವ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮುತ್ತೂರು ಮತ್ತು ಬಡಗಬೆಳ್ಳೂರು ಪಂಚಾಯತ್ ಅಧ್ಯಕ್ಷರಾದ ಜಯಂತಿ, ನಾಗಮ್ಮ ಮೊದಲಾದವರು ಉಪಸ್ಥಿತರಿದ್ದರು.
Comments are closed.