ಬೆಂಗಳೂರು: 70 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನಗಳನ್ನು ಮಾಡಿದ್ದ ಹೋರಾಟಗಾರರನ್ನು ಸ್ಮರಿಸಿದ್ದಾರೆ.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದಿರುವ ಸಿದ್ಧರಾಮಾಯ್ಯ, ಸಂಗೊಳ್ಳಿ ರಾಯಣ್ಣ, ಆಲೂರು ವೆಂಕಟ ರಾವ್, ಹರ್ಡಿಕರ್ ಮಂಜಪ್ಪ ಅವರಂತಹ ಹಿರಿಯರ ತ್ಯಾಗ ಬಲಿದಾನಗಳನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಹೇಳಿದ್ದಾರೆ. ದೇಶ ಭಕ್ತಿ ಎಂದರೆ ಕೇವಲ ಭಾರತ ಮಾತೆಗೆ ಜೈಕಾರ ಹಾಕುವುದಲ್ಲ, ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವುದೇ ದೇಶ ಭಕ್ತಿ. ಬಡವರು, ಮಹಿಳೆಯರು, ದುರ್ಬಲರಾದವರಿಗೆ ಗೌರವ ಸೂಚಿಸುವುದೇ ದೇಶಭಕ್ತಿ, ದೇಶದ ಸಂವಿಧಾನ ಕಾನೂನನ್ನು ಗೌರವಿಸುವುದೇ ದೇಶಭಕ್ತಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಾವು ನೋವುಗಳು ಎಲ್ಲೇ ನಡೆದದು ನಮ್ಮ ಮನಸ್ಸು ಮರುಗಬೇಕು. ಶಿಕ್ಷಣ ನಮ್ಮ ವೈಚಾರಿಕ ಆಲೋಚನೆಗಳನ್ನು ಬೆಳೆಸಲು ಶಿಕ್ಷಣ ನೆರವಾಗುತ್ತದೆ. ದ್ವೇಷ ಅಸೂಯೆಗಳಿಂದ ಒಂದು ದೇಶವನ್ನು ಕೆಡವಬಹುದೇ ಹೊರತು ಕಟ್ಟಲು ಸಾಧ್ಯವಿಲ್ಲ. ದೇಶ ಕಟ್ಟುವುದಕ್ಕೆ ಪರಸ್ಪರ ಪ್ರೀತಿ, ಸೌಹಾರ್ದತೆ ಅಗತ್ಯ, ಆದರೆ ಇತ್ತೀಚಿನ ದಿನಗಳಲ್ಲಿ ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಈ ಘಟನೆಗಳು ಆತಂಕಕಾರಿಯಾಗಿದ್ದು, ಇಂತಹ ಪ್ರಕರಣಗಳ ವಿರುದ್ಧ ಹೋರಾಟ ಮಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ತಮ್ಮ ಸರ್ಕಾರ ಬಡವರ, ದಲಿತದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಪ್ರಣಾಳಿಕೆಯಲ್ಲಿನ ಬಹುತೇಕ ಅಂಶಗಳನ್ನು ಕಳೆದ ಮೂರು ವರ್ಷಗಳಲ್ಲಿ ಈಡೇರಿಸಿದ್ದೇವೆ, 5 ವರ್ಷಗಳ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಬರಗಾಲ ಉಂಟಾದ ಹಿನ್ನೆಲೆಯಲ್ಲಿ ಪಾವತಿಯ ಅವಧಿಯನ್ನು ವಿಸ್ತರಿಸಿದ್ದೇವೆ, ಸಹಕಾರಿ ಸಂಘಗಳ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದ್ದೇವೆ, ರೈತ ಪರ ಸರ್ಕಾರ ಎನ್ನುವುದು ಕೇವಲ ನಮ್ಮ ಘೋಷಣೆಯಲ್ಲ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನೊಂದ ರೈತರ ಜೊತೆಗೆ ಸರ್ಕಾರ ದೃಢವಾಗಿ ನಿಂತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
Comments are closed.