ಕರಾವಳಿ

ಮಹಿಳೆಯರನ್ನು ಕಾಡುವ ಗರ್ಭಗುಳ್ಳೆ ನಿವಾರಣೆಗೆ ಯೋಗವೇ ಯೋಗ್ಯ.

Pinterest LinkedIn Tumblr

Benefits of Yoga1

-ಅಕ್ಷರ
ಗರ್ಭಾಶಯದಲ್ಲಿ ಆಗುವ ನೀರಿನ ಗುಳ್ಳೆಗಳು ಮಹಿಳೆಯರ ಪಾಲಿಗೆ ದೊಡ್ಡ ತಲೆನೋವು. ಪಿಸಿಒಎಸ್ (ಪೋಲಿಸಿಸ್ಟಿಕ್ ಒವರಿ ಸಿಂಡ್ರೋಮ್) ಎಂಬ ಈ ಆತಂಕಕ್ಕೆ ಇನಿಲ್ಲದ ಸಂಕಟಕ್ಕೆ ತಳ್ಳುತ್ತದೆ. ಕೆಲವರಲ್ಲಿ ಅಂಡಾಶಯ ಚಿಕ್ಕದಾಗಿದ್ದು, ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರ ಪರಿಣಾಮ ಸಂತಾನೋತ್ಪತ್ತಿ ಮೇಲಾಗುತ್ತದೆ. ಜತೆಗೆ ಮಾನಸಿಕ ಅಸ್ಥಿರತೆ ಮತ್ತು ಹಾರ್ಮೋನುಗಳ ಅಸಮತೋಲನ ಆಗುತ್ತದೆ. ಕೂದಲುದುರುವುದು, ಮೊಡವೆ, ಬಂಜೆತನ, ಅನಿಯಮಿತ ಮುಟ್ಟು, ದೇಹದ ತೂಕ ಹೆಚ್ಚಾಗುವುದು ಸಹ ಇದರ ಲಕ್ಷಣಗಳು. ಡಯಾಬಿಟೀಸ್ 2, ಹೃದಯಾಘಾತವೂ ಸಂಭವಿಸಬಹುದು. ಪಿಸಿಒಎಸ್ಗೆ ಕೆಲವು ಪ್ರಮುಖ ಕಾರಣಗಳೆಂದರೆ ಒತ್ತಡ, ಆಯಾಸ, ಉದ್ವೇಗ, ದೋಷಯುಕ್ತ ಆಧುನಿಕ ಜೀವನ ಶೈಲಿ, ಆತಂಕ ಮತ್ತು ಖಿನ್ನತೆ. ಈ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸಾ ಮಾರ್ಗವೇ ಯೋಗ.

ಯೋಗವೇ ಏಕೆ ಯೋಗ್ಯ?
ಪಿಸಿಒಎಸ್ಪೀಡಿತರು ಯೋಗ ಮಾಡುವುದರಿಂದ ಹಾರ್ಮೋನುಗಳ ಸಮತೋಲನ ಕಾಯ್ದುಕೊಳ್ಳಬಹುದು. ಗಂಡು ಹಾರ್ಮೋನ್ನ (ಆಯಂಡ್ರೊಜನ್) ಪ್ರಮಾಣವನ್ನು ಕಡಿಮೆ ಮಾಡಿ ಅಂಡಾಣು ಉತ್ಪತ್ತಿಗೆ ಸಹಾಯಕವಾಗುತ್ತದೆ. ಅಲ್ಲದೆ ವಿಶೇಷವಾಗಿ ಯೋಗವು ಒತ್ತಡ ನಿರ್ವಹಣಾ ಮಾರ್ಗ. ಯೋಗಾಸನಗಳು, ಪ್ರಾಣಾಯಾಮ, ಧ್ಯಾನ ಇವು ಒತ್ತಡ ನಿವಾರಣೆಯಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತವೆ. ದೇಹದಲ್ಲಿನ ನಿರ್ನಾಳ ಗ್ರಂಥಿಗಳನ್ನು ಹತೋಟಿಯಲ್ಲಿಡುವುದಲ್ಲದೆ ಹಾರ್ಮೋನುಗಳ ಸಮತೋಲನ ಕಾಪಾಡುತ್ತದೆ. ಅದಲ್ಲದೆ ಅಂಡಾಶಯ ಮತ್ತು ಮೂತ್ರಕೋಶದ ಆರೋಗ್ಯಕ್ಕೂ ಯೋಗ ಅನುಕೂಲ ಮಾರ್ಗ.

ಪಿಸಿಒಎಸ್ಗಾಗಿಯೇ ರಚಿಸಿದ ಭಂಗಿಗಳು ಶ್ರೋಣಿ (ಪೆಲ್ವಿಕ್) ಭಾಗವನ್ನು ತೆರೆಯುವುದಲ್ಲದೆ ವಿಶ್ರಾಂತಿಯನ್ನು ನೀಡುತ್ತದೆ. ಹೊಟ್ಟೆಯ ಮೇಲೆ ಅತಿಯಾಗಿ ಒತ್ತಡ ಹೇರುವ ಯೋಗಾಸನದ ಭಂಗಿಗಳನ್ನು ಮಾಡದಿರುವುದು ಒಳ್ಳೆಯದು. ನಿತ್ಯ ಯೋಗ ಮಾಡುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ಹೃದಯ ಬಡಿತದ ಸ್ಥಿಮಿತತೆ ಹಾಗೂ ತೂಕವನ್ನೂ ಇಳಿಸಿಕೊಳ್ಳಬಹುದು. ಯೋಗವು ಹಾರ್ಮೋನುಗಳ ಸಮತೋಲನ ಮತ್ತು ಹೆಚ್ಚಿನ ವಿಶ್ರಾಂತಿಯನ್ನು ನೀಡುವುದರ ಜತೆಗೆ ಮೂತ್ರ ಜನಕಾಂಗ ಹಾಗೂ ಕಾರ್ಟಿಸೋಲ್ ಮೇಲಿನ ಒತ್ತಡದ ಪ್ರಮಾಣವನ್ನೂ ತಗ್ಗಿಸುತ್ತದೆ.

ಯಾವ ಆಸನಗಳನ್ನು ಮಾಡಬೇಕು?
-ಪತಂಗ (ಚಿಟ್ಟೆ) ಭಂಗಿ: ಕಾಲುಗಳನ್ನು ಚಿಟ್ಟೆ ಅಥವಾ ಪತಂಗದ ಮಾದರಿಯಲ್ಲಿ ಜೋಡಿಸಿಟ್ಟುಕೊಂಡು ಚಲನಮಾಡಬೇಕು. ಆದರೆ, ಚಲನ ನಿಧಾನಗತಿಯಲ್ಲಿರಲಿ. ಜತೆಗೆ ಇದೇ ಭಂಗಿಯಲ್ಲಿ ಹೆಚ್ಚು ಹೊತ್ತು ಇರಲು ಪ್ರಯತ್ನಿಸಿ.
-ಭಾರಧ್ವಜಾಸನ (ಭಾರಧ್ವಾಜರ ಭಂಗಿ): ನೀವು ಕುಳಿತಿರುವ ಭಂಗಿಯಲ್ಲೇ ಸೊಂಟವನ್ನು ಸ್ಥಿಮಿತದಲ್ಲಿಟ್ಟುಕೊಂಡು ಬೆನ್ನನ್ನು ನಿಧಾನವಾಗಿ ಸಾಧ್ಯವಾದಷ್ಟು ಹಿಂದಿರುಗಿಸಬೇಕು.
-ಚಕ್ಕಿ ಚಲನಾಸನ: ರುಬ್ಬುವ ಚಕ್ರವನ್ನು ತಿರುಗಿಸುವ ರೀತಿ ಈ ಆಸನವನ್ನು ಮಾಡಬೇಕು. ಇದರಿಂದ ಲಿವರ್, ಕಿಡ್ನಿ, ಯಕೃತ್, ಗರ್ಭಕೋಶ ಮತ್ತು ಸಂತಾನೋತ್ಪತ್ತಿ ಅಂಗಗಳಿಗೆ ಮಸಾಜ್ ಮಾಡಿದಂತಾಗುತ್ತದೆ.
-ನಾಡಿಶೋಧ ಪ್ರಾಣಾಯಾಮದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ಮೆದುಳಿನ ನರಗಳು ಹೊಸ ಚೈತನ್ಯವನ್ನು ಪಡೆದುಕೊಳ್ಳುತ್ತವೆ.
-ಕಪಾಲಬಾತಿಯು ಮತ್ತೊಂದು ಉಪಯುಕ್ತ ಉಸಿರಾಟದ ವಿಧಾನ.
-ಭ್ರಾಮರಿ ಪ್ರಾಣಾಯಾಮವು ಚಂಚಲ ಮನಃಸ್ಥಿತಿಯನ್ನು ಹತೋಟಿಯಲ್ಲಿಡಲು ಹಾಗೂ ಏಕಾಗ್ರತೆ ಸಾಧಿಸಲು ಸಹಕಾರಿ.
-ಸೂರ್ಯ ನಮಸ್ಕಾರದಿಂದ ದೇಹವು ಹೆಚ್ಚಿಗೆ ಬಾಗುತ್ತದೆ ಮತ್ತು ಹಾರ್ಮೋನುಗಳ ಅಸಮತೋಲನೆಯನ್ನು ನಿಯಂತ್ರಿಸುತ್ತದೆ.
-ಭುಜಂಗಾಸನವು (ಸರ್ಪ ಭಂಗಿ) ಅಂಡಾಶಯವು ಸರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ.
-ನೌಕಾಸನ (ದೋಣಿ ಭಂಗಿ)- ಕಿಬ್ಬೊಟ್ಟೆಯ ಭಾಗಕ್ಕೆ ಒತ್ತಡ ಹೇರುವ ಆಸನ, ಬಿಲ್ಲಿನಂತೆ ಬಾಗುವ ಧನುರಾಸನ, ಸೈನಿಕರ ಭಂಗಿ (ಸೂಪರ್ಮ್ಯಾನ್ ಭಂಗಿ), ಸುಪ್ತ ಬದ್ಧಕೋನಾಸನ (ಒರಗಿದ ಚಿಟ್ಟೆಯ ಭಂಗಿ), ಪದ್ಮಾಸನವು ಶ್ರೋಣಿ (ಪೆಲ್ವಿಕ್) ಆಸನಗಳು ಹಾರ್ಮೋನುಗಳ ಅಸಮತೋಲನೆಯನ್ನು ನಿಯಂತ್ರಿಸುತ್ತದೆ.
-ದೇಹಕ್ಕೆ ವಿಶ್ರಾಂತಿ ನೀಡುವ ಶವಾಸನ ಕೂಡ ಅತ್ಯಂತ ಒಳ್ಳೆಯ ಮಾರ್ಗ.
-ಆದರೆ, ಇವೆಲ್ಲವನ್ನು ಯೋಗತಜ್ಞರನ್ನು ಸಂಪರ್ಕಿಸಿಯೇ ಅನುಸರಿಸುವುದು ಉತ್ತಮ.

Comments are closed.