ಬಿಹಾರ: ವೈದ್ಯ ಅಂದರೆ ಭೂಮಿಯ ಮೇಲಿರುವ ದೇವರು ಎಂದು ನಂಬುವ ಕಾಲವಿತ್ತು. ಆದರೆ ಇಂದು ಕೆಲವು ಆಸ್ಪತ್ರೆಗಳು ಇದಕ್ಕೆ ಮಸಿ ಬಳಿಯುತ್ತಿವೆ. ಜೀವ ಉಳಿಸಬೇಕಾದ ಆಸ್ಪತ್ರೆಗಳಿಂದು ಕೆಲ ಹಣದಾಹಿಗಳ ಕಾರಣಕ್ಕೆ ಸುಲಿಗೆಯ ತಾಣವಾಗಿರುವುದು ಶೋಚನೀಯ ಸಂಗತಿ.
ಬಿಹಾರದ ರಾಜಧಾನಿ ಪಾಟ್ನಾದಲ್ಲೂ ಕೂಡ ಇಂತಹುದೇ ಒಂದು ಘಟನೆ ಬೆಳಕಿಗೆ ಬಂದಿದೆ. ನಗರದ ಪ್ರಖ್ಯಾತ ಆಸ್ಪತ್ರೆಯಾದ ಬಹರಹಾಲ್ ದಲ್ಲಿ ಸತ್ತು ಹೋದ ಮಹಿಳೆಯನ್ನು ಎರಡು ದಿನಗಳ ಕಾಲ ಐಸಿಯು ನಲ್ಲಿಟ್ಟು ಚಿಕಿತ್ಸೆ ಕೊಡುವ ನಾಟಕವಾಡಿದ್ದಾರೆ. ಈ ಕಾರಣಕ್ಕಾಗಿ ಈಗ ಬಹರಹಾಲ್ ಆಸ್ಪತ್ರೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಶಿವಹರದ ನಿವಾಸಿ ಮಹಿಳೆಯೊಬ್ಬರನ್ನು ಆಗಸ್ಟ್ ತಿಂಗಳ ಆರಂಭದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಮೊದಲು ಪರಿಚಯಸ್ಥರನ್ನು ಐಸಿಯು ಒಳಗೆ ಬಿಡುತ್ತಿದ್ದ ಆಸ್ಪತ್ರೆ ಸಿಬ್ಬಂದಿ, ಆಗಸ್ಟ್ 14 ರ ನಂತರ ಯಾರನ್ನೂ ಒಳಗಡೆ ಬಿಡುತ್ತಿರಲಿಲ್ಲ.
ರೋಗಿಯ ಸ್ಥಿತಿ ತುಂಬ ಹದಗೆಟ್ಟಿದೆ. ಇಂಥಾ ಸಮಯದಲ್ಲಿ ಯಾರೂ ಒಳಗಡೆ ಹೋಗಬಾರದೆಂದು ತಾಕೀತು ಮಾಡಿದರು. ಆದರೆ ಒಳಗಡೆ ರೋಗಿಯ ಸ್ಥಿತಿ ಬೇರೆಯೇ ಇತ್ತು.
ಮಂಗಳವಾರ ರೋಗಿಯ ಅಣ್ಣನ ಮಗಳು ಹಟತೊಟ್ಟು ಐಸಿಯು ಗೆ ರೋಗಿಯನ್ನು ಕಾಣಲು ಹೋದಳು. ರೋಗಿಯ ಪರಿಸ್ಥಿತಿಯನ್ನು ನೋಡಿದ ಅವಳಿಗೆ ನಿಂತ ನೆಲವೇ ಕುಸಿದಂತಾಗಿತ್ತು. ಏಕೆಂದರೆ ಅವಳ ಅತ್ತೆಯ ಮೃತ್ಯುವಾಗಿತ್ತು. ಪಲ್ಸ್, ಬ್ಲಡ್ , ಹಾರ್ಟ್ ಬೀಟ್ ಎಲ್ಲವೂ ಶೂನ್ಯವಾಗಿತ್ತು.
ಅತ್ತೆಯ ಸ್ಥಿತಿ ನೋಡಿ ಜೋರಾಗಿ ಕೂಗಿಕೊಂಡ ಯುವತಿಯ ಧ್ವನಿ ಕೇಳಿದ ಆಸ್ಪತ್ರೆಯ ಸಿಬ್ಬಂದಿ, ತಕ್ಷಣ ಬಂದು ಚಿಕಿತ್ಸೆಯ ನಾಟಕವಾಡಿದರು. ಯುವತಿ ಅದ್ಹೇಗೋ ಮಾನಿಟರ್ ನ ಎಲ್ಲ ದೃಶ್ಯಗಳನ್ನು ವಿಡಿಯೋ ಮಾಡಿದ್ದಳು. ಯುವತಿ ವಿಡಿಯೋ ಮಾಡಿದ್ದು ಆಸ್ಪತ್ರೆಯ ಸಿಬ್ಬಂದಿಗೆ ತಿಳಿದ ಕೂಡಲೇ ಅವರು ಮೊಬೈಲ್ ನಾಶಮಾಡಲು ನೋಡಿದ್ದಲ್ಲದೇ ಅವಳ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ. ಆದರೆ ಅದಾಗಲೇ ಆ ಯುವತಿ ವಾಟ್ಸಾಪ್ ಮೂಲಕ ಬಹರಹಾಲ್ ಆಸ್ಪತ್ರೆಯ ಅವ್ಯವಹಾರವನ್ನು ಬಯಲಿಗೆಳೆದಿದ್ದಳು.
ಇಷ್ಟೆಲ್ಲ ಘಟನೆ ನಡೆದ ನಂತರವೂ ಆಸ್ಪತ್ರೆ ತನ್ನ ತಪ್ಪನ್ನು ಒಪ್ಪಿಕೊಂಡಿಲ್ಲ. ರೋಗಿಯ ಸಂಬಂಧಿಕರಿಗೆ ತಪ್ಪು ಮಾಹಿತಿ ದೊರಕಿದೆ ಎಂದು ಆಸ್ಪತ್ರೆ ಮಂಡಳಿ ಹೇಳಿದೆ.
Comments are closed.