ಮಂಗಳೂರು: ಮಂಗಳೂರಿನ ರಥ ಬೀದಿಯಲ್ಲಿರುವ ಗೋಕರ್ಣ ಮಠದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಸುವರ್ಣ ಚತುರ್ಮಾಸದ ಪ್ರಯುಕ್ತ ಗುರುವಾರ ಸಂಜೆ ಸ್ವಾಮೀಜಿ ಅವರ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭುಗೆ ಜಿಎಸ್‌ಬಿ ಮಹಾರತ್ನ ಪುರಸ್ಕಾರ ಪ್ರದಾನ ಮಾಡಲಾಯಿತು.ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸಚಿವ ಸುರೇಶ್ ಪ್ರಭು, ಶ್ರೀಗಳು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀಗಳ ಆಶೀರ್ವಾದದಿಂದಲೇ ತಾನು ಇಂದು ಉನ್ನತ ಸ್ಥಾನಕ್ಕೇರಿದ್ದೇನೆ ಎಂದರು. ತನ್ನ ವೃತ್ತಿ ಜೀವನದ ಉದ್ದಕ್ಕೂ ಸ್ವಾಮೀಜಿ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಇನ್ನು ದೇಶದ ಅಭಿವೃದ್ಧಿಯ ಪಥದಲ್ಲೂ ಅವರ ಮಾರ್ಗದರ್ಶನ ಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳ ಬಳಿಕವೂ ದೇಶದಲ್ಲಿ ಬಡತನ, ಅಸಮಾನತೆ ತಾಂಡವವಾಡುತ್ತಿದ್ದು, ಇವುಗಳ ನಿರ್ಮೂಲನೆ ಆದಾಗಲೇ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಆರ್.ವಿ. ದೇಶಪಾಂಡೆ ಅವರಿಗೆ ಜಿಎಸ್‌ಬಿ ರತ್ನ ಪುರಸ್ಕಾರ, ಸೆಂಚುರಿ ಗ್ರೂಪ್‌ನ ಡಾ. ಪಿ. ದಯಾನಂದ ಪೈ ಅವರಿಗೆ ಜಿಎಸ್‌ಬಿ ಮಹಾರತ್ನ ಪುರಸ್ಕಾರ, ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ್ ನಾಯಕ್ ಅವರಿಗೆ ಸಮಾಜ ರತ್ನ ಪುರಸ್ಕಾರ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಸಮಾಜ ಮಹಾರತ್ನ ಪುರಸ್ಕಾರ, ಡೆಂಪೋ ಗ್ರೂಪ್‌ನ ಶ್ರೀನಿವಾಸ ಡೆಂಪೋ, ಸಲ್ಗಾಂವ್ಕರ್ ಗ್ರೂಪ್‌ನ ಶಿವಾನಂದ ಸಲ್ಗಾಂವ್ಕರ್ ಅವರಿಗೆ ಜಿಎಸ್‌ಬಿ ಉದ್ಯೋಗರತ್ನ ಪುರಸ್ಕಾರ ಪ್ರದಾನ ಮಾಡಲಾಯಿತು.
ಈ ಸಂದರ್ಭ ಅಂಚೆ ಇಲಾಖೆಯ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಉಷಾ ಚಂದ್ರಶೇಖರ, ವಿಶೇಷ ಅಂಚೆಚೀಟಿ ಹಾಗೂ ಅಂಚೆ ಕವರ್ ಬಿಡುಗಡೆ ಗೊಳಿಸಿದರು. ಉದ್ಯಮಿ ದಯಾನಂದ ಪೈ ಕುಟುಂಬದಿಂದ ಶ್ರೀಗಳಿಗೆ 50 ಪವನ್ ಚಿನ್ನವನ್ನು ನೀಡಲಾಯಿತು.
ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಕಾಮತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು .
Comments are closed.