ದಮಾಮ್ : ಭಾರತದ 70ನೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯು ಅನಿವಾಸಿ ಭಾರತೀಯರಿಗಾಗಿ ದಮಾಮ್ ಹೋಟೆಲ್ ಪ್ಯಾರಗನ್ ಸಭಾಂಗಣದಲ್ಲಿ ಇತ್ತೀಚೆಗೆ ಸಂಭ್ರಮದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ದಿಕ್ಸೂಚಿ ಭಾಷಣಗೈದ ಇಂಡಿಯನ್ ಸೋಶಿಯಲ್ ಫೋರಂ ಖೋಬರ್ ಬ್ರಾಂಚ್ ಕಾರ್ಯಕಾರಿ ಸಮಿತಿ ಸದಸ್ಯ ನಜೀರ್ ತುಂಬೆ ಮಾತನಾಡಿ, ನಮ್ಮ ದೇಶದಸ್ವಾತಂತ್ರ್ಯಕ್ಕಾಗಿ ಎಲ್ಲ ಧರ್ಮದ ಜನರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಸಾಹಿತಿಗಳು, ದಲಿತರು, ಅಲ್ಪಸಂಖ್ಯಾತರು ಹೋರಾಟ ನಡೆಸಿ ಪ್ರಾಣತ್ಯಾಗ ಮಾಡಿದ್ದರು. ಸ್ವತಂತ್ರ ಭಾರತದಲ್ಲೂ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು, ಸಾಹಿತಿಗಳು, ವಿದ್ಯಾರ್ಥಿಗಳು ಆಹಾರದ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯ, ಮಾತನಾಡುವ ಸ್ವಾತಂತ್ರ್ಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಸ್ವಾತಂತ್ರ್ಯದ ಅಣಕವಾಗಿದೆ. ಇದರಿಂದಾಗಿಯೇ, 47ರ ಸ್ವಾತಂತ್ರ್ಯ ಯಾರಿಗೆ ಬಂತು? ಎಲ್ಲಿಗೆ ಬಂತು? ಎಂಬ ಪ್ರಶ್ನೆ ಈಗಲೂ ಜನಸಾಮಾನ್ಯರನ್ನು ಕಾಡುತ್ತಿದೆ. ಸಾಮಾಜಿಕ ನ್ಯಾಯವನ್ನು ಖಾತರಿಗೊಳಿಸದ ಹೊರತಾಗಿ ಭಾರತದ ಸ್ವಾತಂತ್ರ್ಯವೂ ಪರಿಪೂರ್ಣವೆನಿಸದು ಎಂದು ತಿಳಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷ ಎ.ಎಂ. ಆರಿಫ್ ಜೋಕಟ್ಟೆ ಮಾತನಾಡಿ, ದೇಶ ಪ್ರೇಮವೆಂದರೆ ಕೇವಲ ಸರಕಾರವನ್ನು ಪ್ರೀತಿಸುವುದು ಎಂದರ್ಥವಲ್ಲ. ಜನವಿರೋಧಿ ನೀತಿಗಳ ವಿರುದ್ಧ ದನಿಯೆತ್ತಿ, ಸಾಮಾಜಿಕ ನ್ಯಾಯದ ಹೋರಾಟ ರಂಗದಲ್ಲಿ ಇರುವುದು ನಿಜವಾದ ದೇಶಪ್ರೇಮ. ದೇಶದ ಭವಿಷ್ಯದ ಬಗ್ಗೆ ಚಿಂತಿಸುತ್ತಾ, ಅದರ ಎಲ್ಲ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸುನ್ನೀ ಸೆಂಟರ್ ಕೇಂದ್ರ ಸಮಿತಿ ಸದಸ್ಯ ಹಾತಿಮ್ ಕಂಚಿ, ಮಂಗಳೂರು ಅಸೋಶಿಯೇಶನ್ ಸೌದಿಅರೇಬಿಯ -ಮಾಸ ಇದರಮುಖ್ಯ ಸಲಹೆಗಾರ ರವಿ ಕರ್ಕೇರ, ದಮಾಮ್ ಮೆಡಿಕಲ್ ಕಾಂಪ್ಲೆಕ್ಸ್ ನ ಬಾಯಿ, ಮುಖ ಹಾಗೂ ದವಡೆ ಶಸ್ತ್ರಕ್ರಿಯೆ ವಿಭಾಗ ವೈದ್ಯ ಡಾ. ಅಭಿಜಿತ್ ವರ್ಗೀಸ್, ಇಂಡಿಯಾ ಫ್ರೆಟರ್ನಿಟಿ ಫೋರಮ್ ಈಶ್ಟರ್ನ್ ಪ್ರಾವಿನ್ಸ್ ಕಾರ್ಯದರ್ಶಿ ಮುಹಮ್ಮದ್ ಇರ್ಶಾದ್ ಉಪಸ್ಥಿತರಿದ್ದು, ಸ್ವಾತಂತ್ರ್ಯ.ದ ಹಿತವಚನಗಳನ್ನು ನುಡಿದರು.
ಧ್ವಜ ಗೌರವ ಸೂಚಕದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪ್ರತಿಭಾನ್ವಿತೆ ಪುಟಾಣಿ ಹಾಡುಗಾರ್ತಿ ಕುಮಾರಿ ಗ್ರೀಷ್ಮಾ ಹಾಡಿದ ಹೇ ಮೇರೆ ವತನ್ ಹಾಡು ನೆರೆದವರನ್ನು ಮಂತ್ರಮುಗ್ಧಗೊಳಿಸಿತು.
ಸ್ವಾತಂತ್ರೋತ್ಸವದ ಅಂಗವಾಗಿ ದಮ್ಮಾಮ್, ಖೊಬಾರ್ , ಜುಬೈಲ್ ಹಾಗೂ ಆಲ್‌ಹಸ್ಸಾ ಘಟಕಗಳಲ್ಲಿ ವಿವಿಧ ಕ್ರೀಡಾ ಕೂಟಗಳನ್ನು ಏರ್ಪಡಿಸಲಾಗಿತ್ತು. ದಮಾಮ್ ನ ಅಸ್ಕಾನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುಟುಕು ಮಾದರಿ ಕ್ರಿಕೆಟ್ ಟೂರ್ನಿಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನವನ್ನು ಶಾನ್ ಬೆಳ್ವಾಯಿ ತಂಡ ಪಡೆದುಕೊಂಡಿದ್ದು, ಮಾಶ್ ಪ್ರೊ ಸಿಪ್ಪಿಂಗ್, ಲಾಜಿಸ್ಟಿಕ್ಸ್ ನ ಮುಷ್ತಾಕ್ ಟ್ರೋಫಿಯನ್ನು ವಿತರಿಸಿದರು. ದ್ವಿತೀಯ ಸ್ಥಾನಿ ವೆಸ್ಟರ್ನ್ ಕಾರ್ಕಳ ತಂಡಕ್ಕೆ ಮಂಗಳೂರು ಅಸೋಶಿಯೇಶನ್ ಸೌದಿಅರೇಬಿಯ –ಮಾಸ ಇದರ ಅಧ್ಯಕ್ಷ ನರೇಂದ್ರ ಶೆಟ್ಟಿ ನೀಡಿದರು. ಅದೇ ರೀತಿ ಮ್ಯಾನ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಗೆ ಬೆಳ್ವಾಯಿ ತಂಡದ ತೌಶೀದ್ ಆಯ್ಕೆಯಾಗಿದ್ದು, ಡಾ. ಅಭಿಜಿತ್ ವರ್ಗೀಸ್ ಪ್ರಶಸ್ತಿ ವಿತರಿಸಿದರು. ಇದೇ ಸಂದರ್ಭದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರ ಗುರುತಿನ ಚೀಟಿಯನ್ನು ಕೇಂದ್ರ ಸಮಿತಿಯ ಅಧ್ಯಕ್ಷ ವಾಸಿಂ ರಬ್ಬಾನಿ ಅವರು ಬಿಡುಗಡೆಗೊಳಿಸಿದರು.
ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಇಮ್ರಾನ್ ಕಾಟಿಪಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೋಶಿಯಲ್ ಫೋರಂ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಇಡ್ಯಾ ಸ್ವಾಗತಿಸಿ, ಅಬ್ದುಲ್ ರಹ್ಮಾನ್ ಮೂಡಬಿದ್ರೆ ಧನ್ಯವಾದ ಸಲ್ಲಿಸಿದರು. ಖೋಬರ್ ಬ್ರಾಂಚ್ ಸದಸ್ಯ ಮುಹಮ್ಮದ್ ನಿಸಾಫ್ ಕಾರ್ಯಕ್ರಮ ನಿರೂಪಿಸಿದರು.
ಸಾರ್ವಜನಿಕರಿಗೆ ಸ್ವಾತಂತ್ರ್ಯದ ಪ್ರಯುಕ್ತ ಸಿಹಿತಿಂಡಿ ಹಾಗೂ ಔತಣ ಕೂಟವನ್ನು ಏರ್ಪಡಿಸಿ ಅನಿವಾಸಿಗರ ನಡುವೆ ಸ್ವಾತಂತ್ರ್ಯೋತ್ಸವದ ಹೊನಲು ಹರಿಸುವಲ್ಲಿ ಸೋಶಿಯಲ್ ಫೋರಂ ಕಾರ್ಯಕ್ರಮವು ಯಶಸ್ವಿಯಾಯಿತು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅನಿವಾಸಿ ಭಾರತೀಯರಿಗಾಗಿ ಜುಬೈಲ್, ಅಲ್ ಹಸ, ಖೋಬರ್ ಮುಂತಾದ ಕಡೆಗಳಲ್ಲಿ ವಿವಿಧ ಸಾರ್ವಜನಿಕ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು.
Comments are closed.