ಕರಾವಳಿ

ಪ್ರವೀಣ್ ಪೂಜಾರಿ ಕೊಲೆ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿಲ್ಲ; ಸಚಿವ ಖಾದರ್

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಬ್ರಹ್ಮಾವರ ಕೆಂಜೂರಿನ ಪ್ರವೀಣ್ ಪೂಜಾರಿ ಕೊಲೆ ಅಮಾನವೀಯ ಘಟನೆಯಾಗಿದ್ದು ಕಾರಣವಿಲ್ಲದೇ ಕೊಲ್ಲುವ ಅನಾಗರೀಕತೆ ಸೃಷ್ಟಿಯಾಗಿದೆಯೆಂಬುದರ ಬಗ್ಗೆ ಉಭಯ ಜಿಲ್ಲೆಗಳ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಮತ್ತು ಜನರು ವಸ್ತುಸ್ಥಿತಿಗಳ ಬಗ್ಗೆ ಪರಾಮರ್ಷೆ ನಡೆಸಿ ಯಾವುದಕ್ಕೂ ಗಡಿಬಿಡಿಯ ನಿರ್ಧಾರ ಒಳಿತಲ್ಲವೆನ್ನುವುದನ್ನು ತಿಳಿದು ಮುನ್ನಡೆಯಬೇಕಾದ ಅನಿವಾರ್ಯತೆ ಇದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಕುಂದಾಪುರದ ಕೋಟೇಶ್ವರದಲ್ಲಿ ಸೋಮವಾರ ರಾತ್ರಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

 khader_2475388g

ಯುವಕನೋರ್ವನ ಅಮಾನವೀಯ ಕೊಲೆ ನಿಜಕ್ಕೂ ನಡುಕ ಹುಟ್ಟಿಸುವಂತದ್ದಾಗಿದ್ದು ಅಂತಹ ವಿಕೃತ ಮನಸ್ಥಿತಿಯ ಬಗ್ಗೆ ಆಲೋಚಿಸಬೇಕಿದೆ. ಸಮಾಜದ ಯುವಕರು ದೇಶಕ್ಕೆ ದೊಡ್ಡ ಶಕ್ತಿಯಾಗಿ ರೂಪುಗೊಳ್ಳಬೇಕೆಂಬ ಆಸೆ ಹೊತ್ತ ಹಿರಿಯರ ಕಲ್ಪನೆಗಳು ಇಂತಹ ವಿಕೃತ ಮನಸ್ಸಿನವರಿಂದ ಹಾಳಾಗುತ್ತಿರುವ ಬಗ್ಗೆ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪ್ರವೀಣ್ ಪೂಜಾರಿ ಪ್ರಕರಣದಂತೆ ಉಭಯ ಜಿಲ್ಲೆಗಳಲ್ಲಿ ಅನೇಕ ಘಟನೆಗಳು ನಡೆದಿದ್ದು ಹಲವು ಅಮಾಯಕರು ಬಲಿಯಾಗಿದ್ದಾರೆ. ಯಾವುದೇ ಕಾರಣವಿಲ್ಲದೇ ಕೊಲ್ಲುವ ಇಂತಹ ಅಮಾನವೀಯ ಘಟನೆಗಳು ನಡೆಯದಂತೆ ಹಿರಿಯ-ಕಿರಿಯರೆಲ್ಲರೂ ಒಗ್ಗೂಡಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಪರಿಹಾರದ ಬಗ್ಗೆ ಕ್ರಮ..
ಸರಕಾರದಿಂದ ಮೃತನ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರಕಾರದಿಂದ ಪರಿಹಾರ ನೀಡುವ ಬಗ್ಗೆ ನೀತಿನಿಯಮಗಳಿದ್ದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೂಡಿಕೊಂಡು ಮುಖ್ಯಮಂತ್ರಿಗಳಿಗೆ ಮನವಿ ನೀಡುತ್ತೇವೆ ಎಂದರು.

ಪೊಲೀಸರ ಭಯವಿಲ್ಲ…
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕರವಾಳಿಯ ಉಭಯ ಜಿಲ್ಲೆಗಳಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು ಪೊಲೀಸರ ವೈಫಲ್ಯ ಎನ್ನಲಾಗುವುದಿಲ್ಲ. ಜಿಲ್ಲೆಗಳಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಕಿಡಿಗೇಡಿಗಳಿಗೆ ಪೊಲೀಸರ ಬಗ್ಗೆ ಭಯವಿಲ್ಲದಿರುವುದೇ ಇಂತಹ ಸಮಾಜದ ಶಾಂತಿ ಕದಡುವ ಕುಕೃತ್ಯಗಳಿಗೆ ಕಾರಣವಾಗಿದೆ. ಪೊಲೀಸರ ಭಯವಿದ್ದರೇ ಇಂತಹ ಘಟನೆಗಳು ನಡೆಯುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳುವವರಿಗೆ ಪೊಲೀಸ್ ಇಲಾಖೆಯ ಭಯ ಹುಟ್ಟಬೇಕಿದೆ. ಕಾನೂನು ಕೈಗೆತ್ತಿಕೊಳ್ಳುವವರಿಗೆ ವಿವಿಧ ವ್ಯವಸ್ಥೆಯಲ್ಲಿ ಕಿಡಿಗೇಡಿಗಳನ್ನು ಜೈಲಿನಿಂದ ಹೊರತಂದು ಇನ್ನೊಂದು ಕೃತ್ಯಕ್ಕೆ ಷಡ್ಯಂತ್ರ ರೂಪಿಸಿ ಪ್ರೋತ್ಸಾಹಿಸುವ ಕೆಲವು ಮಂದಿ ಎಲ್ಲೆಡೆ ಇದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಅಲ್ಲದೇ ಹೊರಗಡೆ ಸಿಗದ ನೆಟ್‌ವರ್ಕ್ ಜೈಲಲ್ಲಿ ಸರಿಯಾಗಿ ಸಿಗುತ್ತದೆನ್ನುವ ಭಾವನೆ ಕಿಡಿಗೇಡಿಗಳಲ್ಲಿರುವುದೇ ಅವರ ಈ ಅಮಾನವೀಯ ನಡವಳಿಕೆಗೆ ಕಾರಣ ಎಂದರು.

ಕೊಲೆ ವಿಚಾರದಲ್ಲಿ ರಾಜಕೀಯ ಮಾಡಲ್ಲ..
ಪ್ರವೀಣ ಪೂಜಾರಿ ಕೊಲೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿರುವ ಬಗ್ಗೆ ಟೀಕೆಗಳಿರುವ ಹಿನ್ನೆಲೆ ಪ್ರತಿಕ್ರಿಯಿಸಿದ ಖಾದರ್, ಪ್ರವೀಣ್ ಪೂಜಾರಿ ಹತ್ಯೆ ವಿಚಾರವನ್ನು ಯಾರೂ ರಾಜಕೀಯವಾಗಿ ಬಳಸಿಕೊಂಡಿಲ್ಲ, ಬಳಸಿಕೊಳ್ಳಲೂಬಾರದು. ಸಮಾಜ ಸುವ್ಯಸ್ಥೆಗೆ ಹೊರಟ ಮೇಲೆ ಇಂತಹ ಕೊಲೆ ವಿಚಾರದಲ್ಲಿ ರಾಜಕೀಯ ಮಾಡಿದರೇ ನಿಜಕ್ಕೂ ಅದು ಯಾರಿಗೂ ಒಳಿತಲ್ಲ, ಅದರಿಂದ ಏನೂ ಪ್ರಯೋಜನವೂ ಆಗುವುದಿಲ್ಲ. ಈ ಬಗ್ಗೆ ರಾಜಕೀಯ ರಹಿತವಾಗಿ ಜನಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು.

ಪಡಿತರ ಚೀಟಿ ಗೊಂದಲಕ್ಕೆ ತೆರೆ…
ಪಡಿತರ ಚೀಟಿ ಗೊಂದಲಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಿ ಬದಲಾವಣೆ ತರಲು ಉದ್ದೇಶಿಸಲಗಿದೆ. ಅಲೆದಾಡದ ರೀತಿಯಲ್ಲಿ ಸ್ಪಷ್ಟವಾಗಿ ಪ್ರತಿಯೊಬ್ಬರಿಗೂ ಪಡಿತರ ಚೀಟಿ ಸಿಗಬೇಕೆಂಬ ಮಹತ್ತರ ಉದ್ದೇಶವನ್ನು ಇಟ್ಟುಕೊಂಡು ಇಲಾಖೆಯೂ ಪಡಿತರ ಚೀಟಿದಾರರನ್ನು ಗುರುತಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ‘ಸೆಲ್ಫ್ ಡಿಕ್ಲರೇಶನ್’ ಈಂಬ ನೂತನ ಸಾಪ್ಟವೇರ್‌ನ್ನು ತಯಾರು ಮಾಡುತ್ತಿದ್ದು ಅದರಿಂದ ಎಪಿ‌ಎಲ್ ಕಾರ್ಡ್ ಇರುವರಿಗೆ ಉಪಯೋಗವಾಗಲಿದೆ. ಬಡವರಿಗಾಗಿಯೇ ಇರುವ ಬಿಪಿ‌ಎಲ್ ಕಾರ್ಡ್ ಬಗ್ಗೆ ಅತೀವ ಕಾಳಜಿ ಹೊಂದಿದ್ದು ಆಧ್ಯತೆ ಇರುವವರಿಗೆ ಅದನು ನೀಡಿ ಪಡಿತರ ಪದಾರ್ಥಗಳು ಸುಲಭವಾಗಿ ಪಡಿತರದಾರರಿಗೆ ಸಿಗಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಲಾಗಿದೆ. ಬೈಕ್, ವಿದ್ಯುತ್ ಬಿಲ್ಲ್ ಅನ್ವಯದಲ್ಲಿ ಪಡಿತರ ಚೀಟಿ ನೀಡುವುದನ್ನು ಬಿಟ್ಟು ಹಲವು ಭಿನ್ನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಅನ್ನ ಭಾಗ್ಯ ಕನ್ನ ಭಾಗ್ಯ ಆಗಬಾರದು…
ರಾಜ್ಯದಲ್ಲಿ 10 ಲಕ್ಷ ಪಡಿತರ ಚೀಟಿ ಬಾಕಿಯಿದ್ದು ಉಭಯ ಜಿಲ್ಲೆಗಳಲ್ಲಿ ಹಲವು ಬಾಕಿಯಿದ್ದು ಶೀಘ್ರವೇ ಅವುಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಪಡಿತರ ಚೀಟಿ ವಿನ್ಯಾಸವನ್ನು ಬದಲಾವಣೆ ಮಾಡುತ್ತಿದ್ದು ಒಂದು ಆಧಾರ್ ಕಾರ್ಡ್ ಮಾದರಿಯಲ್ಲಿ ಇನ್ನೊಂದು ಸ್ಮಾರ್ಟ್ ಕಾರ್ಡ್ ರೀತಿಯಲ್ಲಿದ್ದು ಅದು ಜನರಿಗೆ ಉಪಯೋಗಕ್ಕೆ ಅನುಕೂಲವಾಗಲಿದೆ. ಮುಂದಿನ ತಿಂಗಳಿನಲ್ಲಿ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ಕೂಪನ್ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಮುಖ ಯೋಜನೆಗಳಾದ ಅನ್ನಭಾಗ್ಯ ಯೋಜನೆ ಕನ್ನಭಾಗ್ಯ ಆಗುತ್ತಿದೆಯೆಂಬ ಆರೋಪಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೂಪನ್ ವ್ಯವಸ್ಥೆ ಮಾಡಲಾಗುತ್ತಿದೆ. ಅಂಗಡಿಯವರು ಸರಿಯಾದ ಪೂರೈಕೆ ಮಾಡುತ್ತಿಲ್ಲ ಎನ್ನುವ ಬಗ್ಗೆಯೂ ಆರೋಪವಿರುವ ಕಾರಣ ಇದನ್ನು ಆಹಾರ ಭದ್ರತಾ ಚೀಟಿ ಎನ್ನುವ ಹೆಸರಿನಲ್ಲಿ ಸಂಯೋಜನೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿನ ನಗರಸಭಾ ವ್ಯಾಪ್ತಿಯಲ್ಲಿ ಮುಂದಿನ ತಿಂಗಳಿನಲ್ಲಿ ಈ ಕೂಪನ್ ವ್ಯವಸ್ಥೆ ಜಾರಿಯಾಗಲಿದೆ. ಇಲಾಖೆಯಲ್ಲಿನ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಲು ಸಾರ್ವಜನಿಕರ ಸಂಪೂರ್ಣ ಸಹಕಾರ ಅಗತ್ಯವಿದೆ ಎಂದು ಅವರು ಇದೇ ಸಂದರ್ಭ ಹೇಳಿದರು.

Comments are closed.