ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಸೆಪ್ಟಂಬರ್.30 : ನವರಾತ್ರಿ ಪ್ರಯುಕ್ತ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಮಂಗಳೂರು ದಸರಾ ಮಹೋತ್ಸವ ಕಾರ್ಯಕ್ರಮಗಳು ಆಕ್ಟೋಬರ್ 1ರಿಂದ ಆರಂಭಗೊಳ್ಳಲ್ಲಿದ್ದು, ನಾಳೆ ಬೆಳಿಗ್ಗೆ 11.15 ಕ್ಕೆ ಶಾರದಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯ ಬಳಿಕ ಮಂಗಳೂರೂ ನಗರ ಪೊಲೀಸ್ ಕಮಿಷನರ್ ಶ್ರೀ ಎಮ್. ಚಂದ್ರಶೇಕರ್ ರವರಿಂದ ದೀಪ ಬೆಳಗುವ ಮೂಲಕ ನವರಾತ್ರಿ ಉತ್ಸವವು ಚಾಲನೆ ಗೊಳ್ಳಲಿದೆ ಎಂದು ಕ್ಷೇತ್ರದ ನವೀಕರಣದ ರುವಾರಿ ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮಾಹಿತಿ ನೀಡಿದ್ದಾರೆ.
ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 01-10-2016 ರಿಂದ 11-10-2016ರವರೆಗೆ ಪ್ರತೀ ದಿನ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ವಿಶೇಷ ಮಹಾ ಪೂಜೆಗಳು ನಡೆಯಲಿರುವುದು. ದಿನಾಂಕ 09-10-2016ರಂದು ಬೆಳಿಗ್ಗೆ ಚಂಡಿಕಾ ಹೋಮ ಹಾಗೂ ಹಗಲೋತ್ಸವವು ಜರಗಲಿರುವುದು. 11-10-2016ರಂದು ಮಧ್ಯಾಹ್ನ 1.00 ಗಂಟೆ ಮಹಾಪೂಜೆಯ ನಂತರ ಮಹಾ ಅನ್ನಸಂತರ್ಪಣೆ ನಡೆಯಲಿರುವುದು. ದಿನಾಂಕ 01-10-2016 ರಿಂದ 10-10-2016ರ ವರೆಗೆ ಕ್ಷೇತ್ರದ ಆವರಣದ ಸಂತೋಷಿ ಕಲಾ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಿನಾಂಕ 01-10-2016 ರಂದು ಸಂಜೆ 7.30 ಕ್ಕೆ ಕರ್ನಾಟಕ ಬ್ಯಾಂಕ್, ಮಂಗಳೂರಿನ ಮುಖ್ಯ ಮಹಾ ಪ್ರಬಂಧಕರಾದ ಶ್ರೀ ಎಮ್.ಎಸ್. ಮಹಾಬಲೇಶ್ವರ್‌ಭಟ್ ರವರು ಉದ್ಘಾಟಿಸಲಿದ್ದಾರೆ.
ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ 01-10-2016 ರಿಂದ 12-10-2016ರ ವರೆಗೆ ನಡೆಯುವ ಮಂಗಳೂರು ದಸರಾ- 2016ರ ನವರಾತ್ರಿ ಉತ್ಸವದ ಮೆರವಣಿಗೆಯು ದಿನಾಂಕ 11-10-2016 ರಂದು ಸಂಜೆ 4.00 ಗಂಟೆಗೆ ಶ್ರೀ ಕ್ಷೇತ್ರದ ಆವರಣದಿಂದ ಹೊರಡಲಿದೆ.
ಮೆರವಣಿಗೆಯಲ್ಲಿ ಶಾರದ ಮಾತೆ, ಮಹಾಗಣಪತಿ, ನವದುರ್ಗೆಯರ ಮೂರ್ತಿ ಸಹಿತ ರಾಜ್ಯದ ವಿವಿದೆಡೆಗಳಿಂದ ಬರುವ ಸುಮಾರು 75 ಕ್ಕಿಂತಲೂ ಹೆಚ್ಚಿನ ಸ್ತಬ್ದ ಚಿತ್ರಗಳ ವೈಭವಪೂರ್ಣ ಟ್ಯಾಬ್ಲೋಗಳು ಭಾಗವಹಿಸಲಿವೆ. ಜಿಲ್ಲೆಯ ಹಾಗೂ ರಾಜ್ಯದ ಮತ್ತು ಹೊರ ರಾಜ್ಯಗಳಿಂದ ಆಗಮಿಸುವ ವಿವಿಧ ಜಾನಪದ, ಸಾಂಸ್ಕೃತಿಕ ಹಿನ್ನೆಲೆಯುಳ್ಳ ನೃತ್ಯ ತಂಡಗಳು ಈ ಮೆರವಣಿಗೆಗೆ ವಿಶೇಷ ಸೊಬಗನ್ನು ನೀಡಲಿವೆ .
ಮಂಗಳೂರು ದಸರಾ-2016 ಮತ್ತು ನವರಾತ್ರಿ ಉತ್ಸವ ದಿನಾಂಕ 11-10-2016 ರಂದು ನಡೆಯುವ ಶಾರದ ಮಾತೆಯ ಶೋಭಾಯಾತ್ರೆಯಲ್ಲಿ ಪಾಲುಗೊಳ್ಳಲಿರುವ ಎಲ್ಲಾ ಟ್ಯಾಬ್ಲೋಗಳ ಮೂಲಕ ಭಾಗವಹಿಸುವವರು ಹಾಗೂ ಇತರ ವೇಷದಾರಿಗಳು, ನೃತ್ಯ ತಂಡ, ವಾದ್ಯವೃಂದದವರು, ಜನಪದ ನೃತ್ಯ ತಂಡದವರು ಈ ತನಕ ಅನುಮತಿಯನ್ನು ಪಡೆದುಕೊಂಡಿಲ್ಲದ್ದಲ್ಲಿ ತಮ್ಮ ತಮ್ಮ ಹೆಸರುಗಳನ್ನು ಶ್ರೀ ಕ್ಷೇತ್ರದ ಆಡಳಿತ ಮಂಡಳಿಯವರಿಗೆ ದಿನಾಂಕ 04-10-2016ರ ಮೊದಲಾಗಿ ತಿಳಿಸಿ ಆಡಳಿತ ಮಂಡಳಿಯವರ ಅನುಮತಿಯನ್ನು ಪಡೆದುಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ಪೂಜಾರಿ ವಿವರಿಸಿದರು.
ಶ್ರೀ ಕ್ಷೇತ್ರದ ವತಿಯಿಂದ ಜರಗುವ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಗೋಕರ್ಣನಾಥ, ಮಾತಾ ಅನ್ನಪೂರ್ಣೇಶ್ವರಿ, ಶ್ರೀ ಶಾರದ ಮಾತೆ, ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕ್ಷೇತ್ರದ ಪರಿವಾರ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಹಾಗೂ ಕ್ಷೇತ್ರದ ಆಡಳಿತ ಮಂಡಳಿಯರೊಂದಿಗೆ ಸಹಕರಿಸಬೇಕೆಂದು ಅವರು ಈ ಸಂದರ್ಭದಲ್ಲಿ ವಿನಂತಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವ ಸಂತೋಷಿ ಕಲಾ ಮಂಟಪ
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್. (ಆಡ್ವಕೇಟ್), ಸಮಿತಿ ಸದಸ್ಯರಾದ ರವಿಶಂಕರ ಮಿಜಾರು, ಹರಿಕೃಷ್ಣ ಬಂಟ್ವಾಳ, ಡಾ| ಬಿ.ಜಿ. ಸುವರ್ಣ, ಡಾ| ಅನುಸೂಯ ಮುಂತಾದವರು ಉಪಸ್ಥಿತರಿದ್ದರು.
ಮಂಗಳೂರು ನಗರದ ಕಳೆದ ವರ್ಷದ ವಿದ್ಯುತ್ ದೀಪಾಲಂಕಾರದ ಚಿತ್ರಗಳು
ಈ ಬಾರಿ ‘ಅಕ್ರೆಲಿಕ್’ (ವಿದ್ಯುತ್ ದೀಪ) ವರ್ಣಾಲಂಕಾರ ಸೊಬಗು..
ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಚರಿಸಲ್ಪಡುವ ಮಂಗಳೂರು ದಸರಾದ ಅಂಗವಾಗಿ ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ದರ್ಬಾರ್ ಮಂಟಪಕ್ಕೆ ‘ಅಕ್ರೆಲಿಕ್’ ವರ್ಣಾಲಂಕಾರ ಈ ಬಾರಿಯ ವಿಶೇಷತೆಯಾಗಿದೆ.
ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕಳೆದ 26 ವರ್ಷಗಳಿಂದ ವೈಭವದ ದಸರಾ ಆಚರಣೆ ‘ಮಂಗಳೂರು ದಸರಾ’ ಎಂದೇ ಜಗತ್ಪ್ರಸಿದ್ಧಗೊಂಡಿದೆ. ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮಂಗಳೂರು ದಸರಾದ ಅಂಗವಾಗಿ ಈಗಾಗಲೇ ನಗರವು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದೆ. ಸಂಜೆಯಾಗುತ್ತಿದ್ದಂತೆಯೇ ವಿದ್ಯುತ್ ದೀಪಗಳು ಬೆಳಗಿ ಮಂಗಳೂರು ನಗರವೇ ಝಗಮಿಸಲಾರಂಭಿಸಿದೆ. ಇದೇ ವೇಳೆ ಕುದ್ರೋಳಿ ಕ್ಷೇತ್ರವೂ ಸುಣ್ಣ ಬಣ್ಣಗಳೊಂದಿಗೆ ಹೊಸ ಮೆರುಗನ್ನು ಪಡೆದಿದೆ.
Comments are closed.