ಮಂಗಳೂರು : ಕುತ್ತಾರು ನಿತ್ಯಾನಂದ ನಗರದ ಮನೆಯೊಂದರ ಬಳಿಯ ಮರದಲ್ಲಿ ಕಂಡು ಬಂದಿದ್ದ ಕಪ್ಪು ಬಣ್ಣದ ಧ್ವಜ ವಿಚಾರ ಕೊಣಾಜೆ ಪೊಲೀಸರನ್ನು ನಿದ್ದೆಗೆಡಿಸಿದ ಘಟನೆ ಗುರುವಾರ ಸಂಭವಿಸಿದ್ದು, ಇದೀಗ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕಪ್ಪು ಬಣ್ಣದ ಆಟದ ಸಮವಸ್ತ್ರ ಹಾಗೂ ಕಪ್ಪು ಬಣ್ಣದ ಬಾವುಟವನ್ನು ಐಸಿಸ್ ಸಮವಸ್ತ್ರ ಎಂದು ಹರಡಲಾದ ವದಂತಿಗೆ ಕೊನೆಗೂ ಪೊಲೀಸರು ತೆರೆ ಎಳೆದಿದ್ದಾರೆ.
ಸ್ಥಳೀಯ ಎಂಜಿನಿಯರಿಂಗ್ ಕಾಲೇಜಿನ ಕೇರಳ ಮೂಲದ ವಿದ್ಯಾರ್ಥಿಗಳು ಕುತ್ತಾರು ನಿತ್ಯಾನಂದ ನಗರದಲ್ಲಿ ಬಾಡಿಗೆ ಮನೆ ಕೊಂಡಿದ್ದು, ಈ ಮನೆಯಲ್ಲಿದ್ದ ವಿದ್ಯಾರ್ಥಿಗಳ ಕೈಯಲ್ಲಿ ಕಪ್ಪು ಬಣ್ಣದ ಧ್ವಜವನ್ನು ಸ್ಥಳೀಯರು ಕಂಡಿದ್ದರು. ವಾರದ ಹಿಂದೆ ಮನೆಯ ಪಕ್ಕದ ಮರದಲ್ಲಿ ಧ್ವಜವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮರದಲ್ಲಿದ್ದ ಧ್ವಜ ಮಳೆಗೆ ಮುದುಡಿಕೊಂಡಿದ್ದರಿಂದ ಯಾವ ಧ್ವಜ ಎಂದು ತಿಳಿದು ಬಂದಿರಲಿಲ್ಲ. ಆದರೆ ಬುಧವಾರ ಇದೇ ಮನೆಯಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದ್ದು, ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದ ವಿಚಾರದಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರಿಂದ ವಿದ್ಯಾರ್ಥಿಗಳು ಸ್ಥಳದಿಂದ ಕಾಲ್ಕಿತ್ತಿದ್ದು, ಆದರೆ ಕಪ್ಪು ಧ್ವಜದ ವಿಚಾರ ಗುರುವಾರ ಬಹಿರಂಗವಾಗುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸರು ಆಗಮಿಸಿ ವಿದ್ಯಾರ್ಥಿಗಳನ್ನು ವಿಚಾರಣೆಗೆ ತೆಗೆದುಕೊಂಡು ಕಪ್ಪು ಧ್ವಜ ಮತ್ತು ಅವರಲ್ಲಿದ್ದ ಟೀ ಶರ್ಟ್‌ಗಳನ್ನು ವಶಕ್ಕೆ ತೆಗೆದುಕೊಂಡರು.
ಗುರುವಾರ ಈ ವಿಚಾರವು ಐಸಿಸ್ ಧ್ವಜವನ್ನು ಹಾರಿಸಲಾಗಿದೆ ಎಂಬ ರೀತಿಯಲ್ಲಿ ವದಂತಿಯಾಗಿ ಹರಡಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಡಿಸಿಪಿ ಶಾಂತಕುಮಾರ್, ಎಸಿಪಿ ಶೃತಿ ಭೇಟಿ ನೀಡಿ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದರು. ಈ ಸಂದರ್ಭ ಟೀಶರ್ಟ್ ಹಾಗೂ ಧ್ವಜ ನಮ್ಮ ಆಟದ ತಂಡದ ಧ್ವಜ, ಅದನ್ನು ಮರಕ್ಕೆ ಜೋತುಹಾಕಿದ್ದೆವು. ಅದನ್ನು ದ್ವಿಚಕ್ರ ವಾಹನದಲ್ಲಿ ಬರುವ ಸಂದರ್ಭ ರೂಮಿನತ್ತ ತಂದಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ಘಟನೆ ವಿವರ :
ಕೊಣಾಜೆ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳು ನಿತ್ಯಾನಂದನಗರ ಸಮೀಪ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದರು. ಅಲ್ಲಿ ರೂಮಿಗೆ ಹಲವು ಸಂಖ್ಯೆಗಳಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದು, ಈ ವೇಳೆ ತಮ್ಮ ತಂಡದ ಕಪ್ಪು ಬಣ್ಣದ ಧ್ವಜಗಳನ್ನು ತರುತ್ತಿದ್ದರು. ಎಲ್ಲಾ ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದರು. ಗುರುವಾರ ಹಲವು ಸಂಖ್ಯೆಗಳಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದು, ಈ ಸಂದರ್ಭ ಸಂಶಯದ ಮೇರೆಗೆ ಸ್ಥಳೀಯರು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಕೊಣಾಜೆ ಪೊಲೀಸರನ್ನು ಕಂಡು ವಿದ್ಯಾರ್ಥಿಗಳು ಹೆದರಿ ದ್ವಿಚಕ್ರ ವಾಹನಗಳಲ್ಲಿ ಓಡಿ ಪರಾರಿಯಾಗಿದ್ದರು. ಈ ಸಂದರ್ಭ ಮಾಹಿತಿ ಸಂಗ್ರಹಿಸಿ ಪೊಲೀಸರು ಸ್ಥಳದಿಂದ ತೆರಳಿದ್ದರು.
ವಿದ್ಯಾರ್ಥಿಗಳು ಫುಟ್‌ಬಾಲ್ ಆಟಕ್ಕೆಂದು ತಂಡವನ್ನು ಕಟ್ಟಿ ಈ ತಂಡಕ್ಕೆ ಕಪ್ಪು ಬಣ್ಣದ ಧ್ವಜವನ್ನು ವಿನ್ಯಾಸ ಮಾಡಿದ್ದು, ಕಪ್ಪು ಟೀಶರ್ಟ್ ಬಳಸುತ್ತಿದ್ದರು ಎನ್ನಲಾಗಿದೆ. ಆದರೆ ಕಪ್ಪು ಬಣ್ಣದ ಧ್ವಜದಿಂದಾಗಿ ಕೊಣಾಜೆ ಪೊಲೀಸರು ಹಿರಿಯ ಅಧಿಕಾರಿಗಳಿಂದ ತರಾಟೆಗೆ ಒಳಗಾಗುವ ಮೂಲಕ ಅವರ ನೆಮ್ಮದಿಯನ್ನು ಕೆಡಿಸಿತ್ತು.
ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಾಸವಾಗಿದ್ದ ನಿತ್ಯಾನಂದ ನಗರದ ಮನೆಯ ಪಕ್ಕದ ಇನ್ನೊಂದು ಮನೆಯಲ್ಲಿ ಸ್ಥಳೀಯ ವೈದ್ಯಕೀಯ ಕಾಲೇಜಿನ ಕೇರಳ ಮೂಲದ ವಿದ್ಯಾರ್ಥಿ ವಾಸಿಸುತ್ತಿದ್ದಾರೆ, ಅವರಲ್ಲಿ ಓರ್ವ ವಿದ್ಯಾರ್ಥಿ ಬುಧವಾರ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ತನ್ನ ಜೂನಿಯರ್ ವಿದ್ಯಾರ್ಥಿನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.
ಈ ವಿಚಾರದಲ್ಲಿ ಪಕ್ಕದ ಮನೆಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ತನ್ನ ಸಹಪಾಠಿಗಳನ್ನು ಕರೆಸಿದ್ದು, ಈ ಸಂದರ್ಭದಲ್ಲಿ ಸ್ಥಳೀಯವಾಗಿ ಕಪ್ಪು ಧ್ವಜ ಹಿಡಿದ ತಂಡವೊಂದು ಮನೆಗೆ ನುಗ್ಗಿದೆ ಎಂದು ಸ್ಥಳಿಯವಾಗಿ ಸುದ್ಧಿಯಾಗಿತ್ತು. ಸ್ಥಳಕ್ಕೆ ಪೊಲೀಸರು ಬಂದಾಗ ವಿದ್ಯಾರ್ಥಿಗಳು ತಾವು ಬಂದಿದ್ದ ಬೈಕ್‌ಗಳಲ್ಲಿ ಪರಾರಿಯಾಗಿದ್ದರು. ಆದರೆ ಧ್ವಜ ವಿಚಾರ ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಗುರುವಾರ ಪೊಲೀಸರು ಮನೆಗೆ ಭೇಟಿ ನೀಡಿ ತನಿಖೆ ನಡೆಸುವಂತಾಯಿತು.
ಧ್ವಜ ಕಂಡು ಬಂದ ಪ್ರದೇಶಕ್ಕೆ ಮಂಗಳೂರು ಕಮಿಷನರೇಟ್‌ನ ವ್ಯಾಪ್ತಿಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ವಿವಾದಿತ ಧ್ವಜ ಮತ್ತು ಟೀಶರ್ಟ್ ವಶಕ್ಕೆ ತೆಗೆದುಕೊಂಡಿದ್ದಾರೆ. ಡಿಸಿಪಿ ಶಾಂತಕುಮಾರ್, ಎಸಿಪಿ ಶೃತಿ , ಕೊಣಾಜೆ ಇನ್ಸ್‌ಪೆಕ್ಟರ್ ಅಶೋಕ್ ಪಿ. ಭೇಟಿ ನೀಡಿ ತನಿಖೆ ನಡೆಸಿದರು.
ಇದೀಗ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕಪ್ಪು ಬಣ್ಣದ ಆಟದ ಸಮವಸ್ತ್ರ ಹಾಗೂ ಕಪ್ಪು ಬಣ್ಣದ ಬಾವುಟವನ್ನು ಐಸಿಸ್ ಸಮವಸ್ತ್ರ ಎಂದು ಹರಡಲಾದ ವದಂತಿಗೆ ಕೊನೆಗೂ ಪೊಲೀಸರು ತೆರೆ ಎಳೆದಿದ್ದಾರೆ.
Comments are closed.