ಸೊಳ್ಳೆ ಕಚ್ಚಿದ ಬಳಿಕ ಚರ್ಮದಲ್ಲಿ ಕಾಣುವ ಕೆಂಪುಗುಳ್ಳೆಗಳಿಂದ ಅಸಾಧ್ಯ ಉರಿ ಕಾಡುತ್ತದೆ. ಈ ಸೊಳ್ಳೆಗಳನ್ನೇ ನಿರ್ನಾಮ ಮಾಡುವ ಕುರಿತು ಮನದಲ್ಲಿ ಛಲ ಹುಟ್ಟಿಸುತ್ತವೆ.ಆದರೆ ಸೊಳ್ಳೆಗಳು ಮಕ್ಕಳಿಗೆ ಕಚ್ಚಿದರೆ ಉರಿ ತಾಳಲಾರದೇ ಅಳುವ ಮಕ್ಕಳನ್ನು ನೋಡಿದಾಗ ಮಾತ್ರ ಕರುಳು ಚುರ್ರೆನ್ನದಿರುವುದಿಲ್ಲ. ಸೊಳ್ಳೆಗಳನ್ನು ಓಡಿಸಲೆಂದು ಹಿಂದೆ ಅನೇಕ ಹೊಗೆಬತ್ತಿಗಳು ಬಹಳವಾಗಿ ಪ್ರಚಲಿತವಿದ್ದವು.
ಸೊಳ್ಳೆಗಳನ್ನು ನಿಗ್ರಹಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಊರಿಗೇ ಊರೇ ಜೊತೆಯಾಗಬೇಕಾಗುತ್ತದೆ. ಸದ್ಯಕ್ಕೆ ಅಂತಹ ಯಾವುದೇ ಪ್ರಯತ್ನ ಇಲ್ಲದಿದ್ದರೆ ನಿಮ್ಮ ಮನೆಗೆ ಸೊಳ್ಳೆಗಳು ಪ್ರವೇಶಿಸದಂತೆ ಎಚ್ಚರಿಕೆ ವಹಿಸುವುದೇ ಅನಿವಾರ್ಯ ಮಾರ್ಗ. ಆದರೂ ಒಂದು ವೇಳೆ ಸೊಳ್ಳೆ ಕಚ್ಚಿಯೇ ಬಿಟ್ಟಿದ್ದರೆ ಇದರ ಉರಿ ಮತ್ತು ದದ್ದುಗಳನ್ನು ಶಮನಗೊಳಿಸಲು ಕೆಲವಾರು ವಿಧಾನಗಳಿವೆ.
ಈ ಅಸಾಧ್ಯ ಉರಿಯನ್ನು ತಕ್ಷಣವೇ ಕಡಿಮೆಗೊಳಿಸಲು ಏನೂ ಸಿಗದಿದ್ದರೆ ಬಾಳೆಹಣ್ಣೇ ಸಾಕು. ಬಾಳೆಹಣ್ಣಿನ ತಿರುಳು ಮಾತ್ರವಲ್ಲ, ಸಿಪ್ಪೆಯ ಒಳಭಾಗವೂ ಈ ಉರಿಯನ್ನು ಶಮನಗೊಳಿಸಲು ಸಶಕ್ತವಾಗಿವೆ. ಸಿಪ್ಪೆಯ ಮೇಲೆ ಚುಕ್ಕೆ ಬಿದ್ದ ಬಾಳೆಹಣ್ಣು ಅದ್ಭುತವಾಗಿ ಕಾರ್ಯ ನಿರ್ವಸಲಿದೆ.
ಸೊಳ್ಳೆ ಕಚ್ಚಿದ ಕಡೆ ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನ ತಿರುಳನ್ನು ಕೊಂಚವಾಗಿ ಸಂಗ್ರಹಿಸಿ ತೆಳುವಾಗಿ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದರಿಂದ ತಕ್ಷಣವೇ ಉರಿ ಕಡಿಮೆಯಾಗಿ ದದ್ದುಗಳು ನಿಧಾನವಾಗಿ ಇಳಿಯುತ್ತವೆ. ಇನ್ನೊಂದು ವಿಧಾನವೆಂದರೆ ಸೊಳ್ಳೆ ಕಚ್ಚಿದ ಜಾಗವನ್ನು ಮೊದಲು ಸ್ವಚ್ಛಗೊಳಿಸಿ ಬಳಿಕ ಬಾಳೆಸಿಪ್ಪೆಯ ಒಳಭಾಗ ಆವರಿಸುವಂತೆ ಈ ಭಾಗದ ಮೇಲಿರಿಸಿ ಸುಮಾರು ಐದರಿಂದ ಹತ್ತು ನಿಮಿಷದ ಬಳಿಕ ತೆಗೆಯಿರಿ. ಈ ನಡುವೆ ಬಾಳೆಸಿಪ್ಪೆಯನ್ನು ಕೊಂಚ ನಯವಾಗಿ ಸ್ವಲ್ಪ ಒತ್ತಡದೊಂದಿಗೆ ಉಜ್ಜುತ್ತಾ ಇರಬೇಕು. ಈ ವಿಧಾನದಿಂದ ಎಷ್ಟೇ ದೊಡ್ಡ ಕಡಿತವಾಗಿದ್ದರೂ ಶೀಘ್ರವೇ ಉರಿ ಕಡಿಮೆಯಾಗಿ ದದ್ದು ಇಳಿಯುತ್ತದೆ.
Comments are closed.