__ ಸತೀಶ್ ಕಾಪಿಕಾಡ್
ಮಂಗಳೂರು, ಅ.9: ಸುಪ್ರೀಮ್ ಕೋರ್ಟ್ ನಿರ್ದೇಶನದಂತೆ ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರದ ಉನ್ನತಾಧಿಕಾರಿ ತಾಂತ್ರಿಕ ಸಮಿತಿಯ ತಜ್ಞರಿಗೂ ಕಾವೇರಿಯಲ್ಲಿ ನೀರಿಲ್ಲದಿರುವುದು ಅರಿವಾಗಿದೆ. ರಾಜ್ಯದ ವಸ್ತುಸ್ಥಿತಿಯನ್ನು ಈಗಾಗಲೇ ಸಮಿತಿಯ ತಜ್ಞರು ತಿಳಿದುಕೊಂಡಿರುವುದರಿಂದ ಕಾವೇರಿ ಕುರಿತು ಅ.18ರಂದು ಪ್ರಕಟವಾಗಲಿರುವ ತೀರ್ಪು ರಾಜ್ಯದ ಪರವಾಗಿ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಕ್ಯೊಲ ಗ್ರಾಮದಲ್ಲಿ ನಿರ್ಮಿಸಲಾಗುವ ನೂತನ ಪಶು ವೈದ್ಯಕೀಯ ಮಹಾವಿದ್ಯಾಲಯದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಂದು ಮಂಗಳೂರಿಗೆ ಆಗಮಿಸಿದ ಸಂದರ್ಭ ಮಂಗಳೂರು ಅಂತಾರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ರಾಜ್ಯಕ್ಕೆ ಆಗಮಿಸಿರುವ ತಜ್ಞರ ತಂಡ ರಾಜ್ಯದ ವಸ್ತುಸ್ಥಿತಿ ಬಗ್ಗೆ ತಿಳಿದುಕೊಂಡಿದ್ದಾರೆ. ಕೇಂದ್ರದ ಅಧ್ಯಯನ ತಂಡವು ಈಗಾಗಲೇ ಕಾವೇರಿ ಕೊಳ್ಳದ ಪ್ರಸಕ್ತ ಸ್ಥಿತಿಗತಿಯನ್ನು ಅಧ್ಯಯನ ನಡೆಸಿದೆ. ಮುಂದೆ ತಮಿಳುನಾಡಿನ ನೀರಿನ ಅವಶ್ಯಕತೆಯನ್ನು ಅಧ್ಯಯನ ನಡೆಸಲಿದೆ.
ಬಳಿಕ ಕಾವೇರಿ ನೀರಿನ ವಾಸ್ತವ ಸ್ಥಿತಿ ಅಧ್ಯಯನ ಕುರಿತು ಕೇಂದ್ರದ ತಜ್ಞರ ತಂಡ ಅ.17ಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ. ಅ.18ರಂದು ತೀರ್ಪು ಹೊರಬೀಳಲ್ಲಿದ್ದು, ಈ ಬಾರಿ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ಕರ್ನಾಟಕಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಮಹಾದಾಯಿ ಯೋಜನೆ ಬಗ್ಗೆ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾದಾಯಿ ಯೋಜನೆ ವಿಚಾರ ಸಂಬಂಧಿಸಿದಂತೆ ಮೂರು ರಾಜ್ಯಗಳ ಮುಖ್ಯಮುಂತ್ರಿಗಳ ಸಭೆ ಕರೆಯಲಾಗಿದೆ. ಮಹಾದಾಯಿ ಯೋಜನೆಗೆ ಸಂಬಂಧಿಸಿ ಚರ್ಚಿಸಲು ಅ.21ರಂದು ಮಹಾರಾಷ್ಟ್ರ ಸರಕಾರದೊಂದಿಗೆ ಸಭೆ ನಡೆಸಲಾಗುವುದು.
ಈ ಕುರಿತಂತೆ ಮಹಾರಾಷ್ಟ್ರ ಸರಕಾರದೊಂದಿಗೆ ಚರ್ಚಿಸಲಾಗಿದ್ದು, ಅದರಂತೆ ಅ.21ರಂದು ಮುಂಬೈಯಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಅ.21ರಂದು ನಡೆಯುವ ಮುಂಬೈಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ರಾಮಚಂದ್ರಾಪುರ ಮಠವನ್ನು ಸರಕಾರ ವಶಕ್ಕೆ ಪಡೆದುಕೊಳ್ಳುವ ಕುರಿತ ಪ್ರಶ್ನೆಗೆ, ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರ ಮುಂದಾಗಿಲ್ಲ. ಆಡಳಿತಾಧಿಕಾರಿ ನೇಮಿಸುವ ಪ್ರಸ್ತಾವವೂ ಸರ್ಕಾರದ ಮುಂದಿಲ್ಲ. ಮಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಈಗಾಗಲೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಕೆಯಾಗಿದೆ. ಆ ಬಗ್ಗೆ ಸರ್ಕಾರದ ಕಡೆಯಿಂದ ಸ್ಪಷ್ಟನೆ ಕೇಳಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್‍ನ ಮುಖ್ಯ ಸಚೇತಕ ಐವನ್ ಡಿ’ಸೋಜ, ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವ, ಅಭಯ್ ಚಂದ್ರ ಜೈನ್, ಮಂಗಳೂರು ಮೇಯರ್ ಹರಿನಾಥ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕೃಪಾ ಆಳ್ವ, ದ.ಕ.ಜಿಲ್ಲಾಧಿಕಾರಿ ಡಾ. ಕೆ.ವಿ.ಜಗದೀಶ್, ಮಂಗಳೂರು ನಗರ ಪೊಲೀಸ್ ಅಯುಕ್ತ ಚಂದ್ರಶೇಖರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಕಾಂಗ್ರೆಸ್ ಯೂತ್ ಅಧ್ಯಕ್ಷ ಮಿಥುನ್ ರೈ ಸೇರಿದಂತೆ ಪಕ್ಷದ ಇತರ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.
ಹುಲಿವೇಷ ಕುಣಿತದ ಮೂಲಕ ಮುಖ್ಯಮಂತ್ರಿಗಳಿಗೆ ಸ್ವಾಗತ:
ನವರಾತ್ರಿ (ದಸರಾ) ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕರಾವಳಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕರಾವಳಿಯ ಪ್ರಸಿದ್ದ ಹುಲಿವೇಷ ಕುಣಿತ ಹಾಗೂ ಮಹಿಳೆಯರ ಚೆಂಡೆ ವಾದನನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.
Comments are closed.