ಮಂಗಳೂರು, ನ.5: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದ ಅಧೀನದಲ್ಲಿ ಜೆಎನ್ ನರ್ಮ್ ಯೋಜನೆಯಡಿ ನಗರದ ಕುಂಟಿಕಾನದಲ್ಲಿ ನಿರ್ಮಿಸಲಾದ ಮಂಗಳೂರು ನಗರ ಜೆಎನ್ ನರ್ಮ್ ಬಸ್ ಘಟಕವನ್ನು ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಶುಕ್ರವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ 37 ನಗರಗಳಲ್ಲಿ ನರ್ಮ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈಗಾಗಲೆ ನರ್ಮ್ ಯೋಜನೆಯಡಿ 20 ಘಟಕಗಳನ್ನು ನಿರ್ಮಿಸಲಾಗಿದೆ. ಸಾರಿಗೆ ಇಲಾಖೆಯು ಲಾಭವನ್ನಷ್ಟೇ ನೆಚ್ಚಿಕೊಂಡಿಲ್ಲ. ನಾಲ್ಕು ಸಾರಿಗೆ ನಿಗಮಗಳ ಪೈಕಿ ಎರಡು ಲಾಭದಲ್ಲಿದೆ. ಈ ನಿಗಮಗಳಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸುಮಾರು 200ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿದೆ ಎಂದು ಹೇಳಿದರು.
ಸಾರಿಗೆ ಇಲಾಖೆಯು ಕಳೆದ ವರ್ಷ 8 ಸಾವಿರ ಹುದ್ದೆಗಳ ನೇಮಕಾತಿ ಮಾಡಿದ್ದರೆ, ಈ ಬಾರಿ 6 ಸಾವಿರ ಹುದ್ದೆಗಳ ನೇಮಕಾತಿಗೆ ಕ್ರಮ ಜರಗಿಸಲಾಗಿದೆ. ಮಂಗಳೂರು ವಿಭಾಗದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೂ ನಿರೀಕ್ಷಿಸಿದಷ್ಟು ಅರ್ಜಿ ಸಲ್ಲಿಕೆಯಾಗುತ್ತಿಲ್ಲ. ನೇಮಕಾತಿಯಾದ ತಕ್ಷಣ ವರ್ಗಾವಣೆಗಾಗಿ ಪ್ರಯತ್ನ ಮಾಡುವುದನ್ನು ತಪ್ಪಿಸುವ ಸಲುವಾಗಿ ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ ಪ್ರದೇಶವಾರು ಸಿಬ್ಬಂದಿ ನೇಮಕಾತಿಗೆ ಸೂಕ್ತ ಕ್ರಮ ಜರಗಿಸಲಾಗುವುದು. ಉತ್ತರ ಕರ್ನಾಟಕ ಭಾಗದ ಜನರು ನೇಮಕಾತಿ ಪಡೆದ ತಕ್ಷಣ ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲಾಗದೆ ವರ್ಗಾವಣೆ ಪಡೆಯುವುದು ಸಾಮಾನ್ಯವಾಗಿದೆ. ಇದರಿಂದ ಈ ವಿಭಾಗದ ಹುದ್ದೆಗಳು ಭರ್ತಿಯಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಪ್ರದೇಶವಾರು ಸಿಬ್ಬಂದಿ ನೇಮಕಾತಿ ಮಾಡಲಾಗುವುದು ಎಂದು ರಾಮಲಿಂಗ ರೆಡ್ಡಿ ಹೇಳಿದರು.
ಶಾಸಕ ಜೆ.ಆರ್.ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರದೊಳಗಿನ ಸಂಚಾರಿ ದಟ್ಟಣೆಯನ್ನು ಕಡಿಮೆ ಮಾಡಲು ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣವನ್ನು ಪಂಪ್ವೆಲ್ಗೆ ಸ್ಥಳಾಂತರಿಸಬೇಕು. ಈಗಾಗಲೆ ಅಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ. ‘ಪಂಪ್ವೆಲ್’ ಪ್ರದೇಶವನ್ನು ‘ಟ್ರಾನ್ಸ್ಪೋರ್ಟ್ ಹಬ್’ ನಿರ್ಮಿಸುವ ಕನಸಿಗೆ ಸಹಕರಿಸಬೇಕು ಎಂದು ಲೋಬೋ ಅವರು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕಿ ಶಕುಂತಳಾ ಶೆಟ್ಟಿ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಕಟಾರಿಯಾ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಕೆಎಸ್ಸಾರ್ಟಿಸಿ ನಿರ್ದೇಶಕರಾದ ಟಿ.ಕೆ.ಸುಧೀರ್, ರಮೇಶ್ ಶೆಟ್ಟಿ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಮತ್ತಿತರರು ಉಪಸ್ಥಿತರಿದ್ದರು.
Comments are closed.