ಮಂಗಳೂರು, ನವೆಂಬರ್.8: ಕರ್ನಾಟಕ ಸರ್ಕಾರ ಟಿಪ್ಪು ಜಯಂತಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಕರ್ನಾಟಕ ಸರ್ಕಾರ ಆಚರಣೆ ಮಾಡಲು ಹೊರಟಿರುವ ಟಿಪ್ಪು ಜಯಂತಿ ಆಚರಣೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಟಿಪ್ಪು ಭಯೋತ್ಪಾದಕ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ.
ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟದ ಸದಸ್ಯರಿಂದ. ರಾಜ್ಯದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಐಎಸ್ಐ ಪ್ರೇರಿತ ಶಕ್ತಿಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿವೆ. ಅದರ ವಿರುದ್ಧ ಏನೂ ಮಾಡದ ಸಿದ್ಧರಾಮಯ್ಯ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಒಬ್ಬ ಆಕ್ರಮಣಕಾರಿ, ಅತ್ಯಾಚಾರಿ, ಮತಾಂತರಿ ಎಂದ ಅವರು, ಇಸ್ಲಾಂ ಧರ್ಮದಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ. ಹಾಗೇನಾದರೂ ವ್ಯಕ್ತಿ ಪೂಜೆ ಮಾಡಿದರೆ ಅವರನ್ನು ಕಾಫಿರ್ ಅಥವಾ ಧರ್ಮದ್ರೋಹಿ ಅನ್ನುತ್ತಾರೆ. ಬರೀ ವೋಟ್ ಬ್ಯಾಂಕ್ ರಾಜಕಾರಾಣಕ್ಕಾಗಿ ಟಿಪ್ಪು ಜಯಂತಿ ಆಚರಿಸುವ ಮೂಲಕ ಇಸ್ಲಾಂ ಧರ್ಮಕ್ಕೂ ಸಿದ್ದರಾಮಯ್ಯ ಅನ್ಯಾಯ ಮಾಡುತ್ತಿದ್ದಾರೆ.
ಈ ಮೂಲಕ ಜನರ ಭಾವನೆಗಳನ್ನು ಧಿಕ್ಕರಿಸಿ ಟಿಪ್ಪು ಜಯಂತಿ ಆಚರಿಸಲು ಮುಂದಾದರೆ ಅದರಿಂದಾಗುವ ಅನಾಹುತಕ್ಕೆ ಮುಖ್ಯಮಂತ್ರಿಯವರೇ ಕಾರಣ. ಸಿದ್ದರಾಮಯ್ಯ ಇನ್ನಾದರೂ ಎಚ್ಚೆತ್ತುಕೊಂಡು ತನ್ನ ಭಯೋತ್ಪಾದಕ ಮನೋಭಾವನೆ ತಿದ್ದಬೇಕು ಎಂದು ಹೇಳಿದರು.
ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷ ವೇದವ್ಯಾಸ ಕಾಮತ್ ಮಾತನಾಡಿ, ಹಿಂದೂ ಹಾಗೂ ಕ್ರೈಸ್ತರನ್ನು ಕ್ರೂರವಾಗಿ ಹತ್ಯೆ ಮಾಡಿರುವ ಮತಾಂಧ ಟಿಪ್ಪುವಿನ ಜಯಂತಿ ಆಚರಣೆಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ. ಪುಣ್ಯ ಪುರುಷರ ಜಯಂತಿಗಳು ಆಚರಣೆಯಾಗುವ ಈ ನಾಡಿನಲ್ಲಿ ಒಬ್ಬ ಕ್ರೂರಿ ವ್ಯಕ್ತಿಯ ಜಯಂತಿ ಆಚರಣೆ ನಡೆಯುತ್ತಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಹೇಳಿದರು.
ಟಿಪ್ಪು ನಡೆಸಿದ ನೂರಾರು ಹೇಯ ಕೃತ್ಯಗಳ ಬಗ್ಗೆ ಇತಿಹಾಸವಿದೆ. ಟಿಪ್ಪು ಮಲಬಾರ್‌ನಲ್ಲಿ 70 ಸಾವಿರ ಕ್ರೈಸ್ತರ ಅಪಹರಣ ಮತ್ತು ೧ ಲಕ್ಷ ಹಿಂದೂಗಳನ್ನು ಮುಸ್ಲಿಂ ಆಗಿ ಮತಾಂತರ ಮಾಡಿದ್ದ. ತನ್ನ ಪ್ರದೇಶದ ಎಲ್ಲ ಹಿಂದು ದೇವಸ್ಥಾನಗಳನ್ನು ನಾಶ ಮಾಡುವಂತೆ ಆದೇಶಿಸಿದ್ದ. ವಿಟ್ಲದ ಬಳಿ 5 ಸಾವಿರಕ್ಕೂ ಅಧಿಕ ಕ್ರೈಸ್ತರ ಹೆಣ ಉರುಳಿಸಿ ರಕ್ತದ ಕೋಡಿ ಹರಿಸಿದ್ದ. ಇದರಿಂದ ಈ ಸ್ಥಳಕ್ಕೆ ನೆತ್ತರಕೆರೆ ಎಂಬ ಹೆಸರು ಬಂತು ಎಂದು ಅನೇಕ ದಾಖಲೆಗಳಲ್ಲಿ ಉಲ್ಲೇಖವಿದೆ. ಆದರೆ ಸಿದ್ಧರಾಮಯ್ಯ ಸರ್ಕಾರ ಇತಿಹಾಸವನ್ನೇ ಮರೆತು ಕೇವಲ ತುಷ್ಟೀಕರಣಕ್ಕಾಗಿ ಆತನ ಜಯಂತಿ ಆಚರಿಸುತ್ತಿರುವುದನ್ನು ಕರಾವಳಿಯ ಜನತೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಅನೇಕ ಹಿಂದೂ ದೇವಾಲಯಗಳನ್ನು ನೆಲಸಮ ಮಾಡಿರುವ ಟಿಪ್ಪು ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಮತ್ತು ರೊಸಾರಿಯೊ ಚರ್ಚ್ ಕೆಡವಿದ್ದಾನೆ. ಹಿಂದೂ ಮತ್ತು ಕ್ರೈಸ್ತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದಾನೆ.
ಕರಾವಳಿಯ ಸಹಬಾಳ್ವೆಯ ಬದುಕನ್ನೇ ಹಾಳು ಮಾಡಿದ ಟಿಪ್ಪುವಿನ ಆಡಳಿತ ಒಂದು ಕರಾಳ ಅಧ್ಯಾಯವಾಗಿದೆ. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದೀಗ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವ ಮೂಲಕ ಇಡೀ ರಾಜ್ಯದಲ್ಲಿ ಹಿಂಸಾಚಾರ ನಡೆಸಲು ಪ್ರಚೋದನೆ ನೀಡುತ್ತಿರುವುದು ಖಂಡನೀಯ ಎಂದು ವೇದವ್ಯಾಸ ಕಾಮತ್ ಹೇಳಿದರು.
ಪಕ್ಷದ ಪ್ರಮುಖರಾದ ಮೋನಪ್ಪ ಭಂಡಾರಿ, ಅನ್ವರ್ ಮಾಣಿಪಾಡಿ, ಉಮಾನಾಥ ಕೋಟ್ಯಾನ್ ಮಾತನಾಡಿದರು. ಸತ್ಯಜೀತ್ ಸುರತ್ಕಲ್, ಸುಮಿತ್ರ ಕರಿಯ ಹಾಗೂ ಮತ್ತಿತ್ತರ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.