ಕರಾವಳಿ

ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ : ಇಂದಿನಿಂದ ನ. 12ರ ವರೆಗೆ ದ.ಕ.ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

Pinterest LinkedIn Tumblr

tippu_meet_zp_1

ಮಂಗಳೂರು, ನ. 9: ನವೆಂಬರ್ 10ರಂದು ನಡೆಯಲಿರುವ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನವೆಂಬರ್ 9ರ ಬೆಳಗ್ಗೆ 6 ಗಂಟೆಯಿಂದ ನ. 12ರ ಸಂಜೆ 6 ಗಂಟೆಯವರೆಗೆ ದ.ಕ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಸಂದರ್ಭದಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪುಗೂಡಲು, ಮೆರವಣಿಗೆ, ಪ್ರತಿಭಟನೆ, ಸಾರ್ವಜನಿಕ ಸಭೆ ಸಮಾರಂಭ ನಡೆಸಲು ಅವಕಾಶವಿಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಜಗದೀಶ್ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು,ಸರಕಾರಿ ಆದೇಶದಂತೆ ನವೆಂಬರ್ 10ರಂದು ಬೆಳಗ್ಗೆ 10ಗಂಟೆಗೆ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಯಲಿದ್ದು, ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಶಿಷ್ಟಾಚಾರದಂತೆ ಎಲ್ಲ ಗಣ್ಯರನ್ನು ಆಹ್ವಾನಿಸಲಾಗುತ್ತಿದ್ದು, ಸಭಾ ಕಾರ್ಯಕ್ರಮದಲ್ಲಿ ಜಾತ್ಯತೀತ ವ್ಯಕ್ತಿಯಿಂದ ಟಿಪ್ಪು ಕುರಿತು ಉಪನ್ಯಾಸ ನಡೆಯಲಿದೆ.

tippu_meet_zp_2

ಧಾರ್ಮಿಕ ಭಾವನೆ ಕೆರಳಿಸುವ ಅಥವಾ ಪ್ರಚೋದನಕಾರಿ ಭಾಷಣ ಮಾಡಲು, ಸ್ಫೋಟಕ, ಶಸಾಸಗಳನ್ನು ಕೊಂಡೊಯ್ಯಲು, ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಅನುಮತಿ ಇಲ್ಲದೆ ಪೋಸ್ಟರ್, ಬ್ಯಾನರ್ ಅಳವಡಿಸಲು ಮತ್ತು ಭಿತ್ತಿಪತ್ರ, ಕರಪತ್ರಗಳ ಹಂಚಿಕೆಗೂ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

tippu_meet_zp_3

ಜಿಲ್ಲಾಮಟ್ಟದ ಟಿಪ್ಪು ಜಯಂತಿ ಬಿಟ್ಟರೆ ಬೇರೆಲ್ಲೂ ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಮಾಡಲು ಅವಕಾಶವಿಲ್ಲ. ಖಾಸಗಿ ಸ್ಥಳ ಅಥವಾ ಸಭಾಂಗಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಟಿಪ್ಪು ಜಯಂತಿ ನಡೆಸಿದರೆ ಅಭ್ಯಂತರ ಇಲ್ಲ ಎಂದು ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆ ಹೇಳಿದರು.

tippu_meet_zp_4

ಕಿಡಿಗೇಡಿಗಳು ಮತ್ತು ಸಮಾಜಘಾತಕ ಶಕ್ತಿಗಳನ್ನು ಬಗ್ಗುಬಡಿಯಲು ನಿಷೇಧಾಜ್ಞೆ ಹೇರಲಾಗಿದೆ. ಆದರೆ, ಸಾರ್ವಜನಿಕರಿಗೆ ಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಅವರ ದೈನಂದಿನ ಚಟುವಟಿಕೆಗೆ ಅಡ್ಡಿಯಾಗದು. ಯಾರೂ ಆತಂಕಪಡುವ ಅಗತ್ಯವಿಲ್ಲ. ಶಾಲೆ, ಕಾಲೇಜುಗಳು, ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯಾಚರಿಸಲಿವೆ.

ಸಾರ್ವಜನಿಕರಿಗೆ ಎಲ್ಲ ರೀತಿಯ ಭದ್ರತೆ ನೀಡಲು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಎಲ್ಲ ಕ್ರಮ ಕೈಗೊಂಡಿದ್ದು, ನಗರ ವ್ಯಾಪ್ತಿಯಲ್ಲಿ ಎರಡು ಸಾವಿರ ಮಂದಿ ಪೊಲೀಸರನ್ನು ನೇಮಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ಮಾಹಿತಿ ನೀಡಿದರು.

Comments are closed.