ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಹಿಂದೂ ಹಿತ ರಕ್ಷಣ ಸಮಿತಿಯಿಂದ ಬೃಹತ್ ಪ್ರತಿಭಟನೆ
ಮಂಗಳೂರು, ನವೆಂಬರ್. 21: ದ.ಕ.ಜಿಲ್ಲೆಯಾದ್ಯಂತ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಕೊಲೆ ಪ್ರಯತ್ನ, ಬೆದರಿಕೆ, ದೌರ್ಜನ್ಯವನ್ನು ಖಂಡಿಸಿ ಹಿಂದೂ ಹಿತ ರಕ್ಷಣ ಸಮಿತಿ ನೇತ್ರತ್ವದಲ್ಲಿ ಸೋಮವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಹಿಂದೂ ಹಿತರಕ್ಷಣ ವೇದಿಕೆಯ ಸಂಚಾಲಕ ಎಂ.ಬಿ. ಪುರಾಣಿಕ ಅವರು ಮಾತನಾಡಿ, ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ಹತ್ತಿಕುವ ಸಲುವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಸುಮಾರು 2 ವರ್ಷಗಳಿಂದ ನಿರಂತರವಾಗಿ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಾ ಇದೆ. ಮುಖ್ಯವಾಗಿ ಉಳ್ಳಾಲದಲ್ಲಿ ಸುಮಾರು 6 ಹಿಂದೂಗಳ ಮೇಲೆ ಚಾಕು ಇರಿತ ಹಾಗೂ 3 ಹಿಂದೂಗಳ ಹತ್ಯೆ ನಡೆದಿದೆ ಎಂದು ಆರೋಪಿಸಿದರು.
ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಈ ದೌರ್ಜನ್ಯವನ್ನು ಹತ್ತಿಕುವಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಿದ ಅವರು, ಜಿಲ್ಲೆಯಲ್ಲಿ ಅಹಿತಕರ ಘಟನೆಗಳ ಮೂಲಕ ಶಾಂತಿ ಕದಡುವವರ ವಿರುದ್ಧ ನಾವು ಪ್ರಬಲ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಂಸದ ನಳಿನ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಕೋಮುಗಲಭೆ ಸೃಷ್ಟಿಯಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ. ಕಳೆದ ಒಂದು ವರ್ಷದಲ್ಲಿ ಹಿಂದೂ ಸಂಘಟನೆ ನಾಯಕರ ಮೇಲೆ ಕೊಲೆ ಯತ್ನ ನಡೆದಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಯಾವುದೇ ರೀತಿಯಲ್ಲಿ ತೀವ್ರ ಗತಿಯಲ್ಲಿ ಕ್ರಮಕೈಗೊಳ್ಳುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಗಲಭೆಗೆ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್, ಜಿಲ್ಲಾ ಸಚಿವ ರಮಾನಾಥ ರೈ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ, ಕೊಲೆಯತ್ನ ವಿರುದ್ಧ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಈ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾವನೆ ಮಾಡುವುದಾಗಿ ಸಂಸದರು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಬಳಿಕ ಹಿಂದೂಗಳ ಮೇಲೆ ಹಲ್ಲೆ, ಕೊಲೆಯತ್ನ ನಡೆಯುತ್ತಿದೆ. ಹಿಂದೂಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಗೋಗಳ್ಳರಿಗೆ ಲಕ್ಷ ಲಕ್ಷ ಪರಿಹಾರ ವಿತರಿಸುವ ಮೂಲಕ ಗೋಗಳ್ಳರು ಹೆಚ್ಚುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಗೂಂಡಗಳನ್ನು ತಯಾರು ಮಾಡುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಗೋಪಾಲ್ ಜಿ. ಆರೋಪಿಸಿದರು.
ಸಮಿತಿಯ ಪ್ರಮುಖರಾದ ರಾಧಾಕೃಷ್ಣ, ಮಾಜಿ ಶಾಸಕ ಎನ್.ಯೋಗೀಶ್ ಭಟ್, ವಿಧಾನ ಪರಿಷತ್ ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ವಿಎಚ್.ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಸಂಚಾಲಕ ಜಿತೇಂದ್ರ ಕೊಟ್ಟಾರಿ, ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟಾ, ಬಜರಂಗದಳದ ಜಿಲ್ಲಾ ಸಂಚಾಲಕ ಪುನೀತ್, ಎಬಿವಿಪಿ ವಿಭಾಗೀಯ ಸಂಚಾಲಕ ಸುಕೇಶ್ ಬೇಕಲ್, ಸತ್ಯಜಿತ್ ಸುರತ್ಕಲ್, ಮನಪಾ ವಿಪಕ್ಷ ನಾಯಕಿ ರೂಪಾ ಡಿ.ಬಂಗೇರ, ಬಿಜೆಪಿಯ ಪ್ರಮುಖರಾದ ಸತೀಶ್ ಪ್ರಭು, ಸಂಜಯ್ ಪ್ರಭು, ಭಾಸ್ಕರ್ ಚಂದ್ರ ಶೆಟ್ಟಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Comments are closed.