ಮಂಗಳೂರು, ನ. 27: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ನೀಡಿದ ಜಾಮೀನು ಪ್ರಶ್ನಿಸಿ ವಿನಾಯಕ ಬಾಳಿಗರ ತಂದೆ ರಾಮಚಂದ್ರ ಬಾಳಿಗ ಅವರು ಸುಪ್ರೀಂಕೋರ್ಟ್ ಮೊರೆಹೋಗಿದ್ದು, ಅರ್ಜಿಯ ವಿಚಾರಣೆಯು ಸೋಮವಾರ ನಡೆಯಲಿದೆ.
ಈ ಬಗ್ಗೆ ಬಾಳಿಗಾ ಅವರ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೈಕೋರ್ಟ್ನ ನ್ಯಾಯವಾದಿ ರವೀಂದ್ರ ಕಾಮತ್ ಅವರು ಮಾಹಿತಿ ನೀಡಿದ್ದು, ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮೊದಲೇ ನರೇಶ್ ಶೆಣೈಯನ್ನು ಹೈಕೋರ್ಟ್ ಜಾಮೀನು ಮೇಲೆ ಬಿಡುಗಡೆಗೊಳಿಸಿದೆ. ಹೈಕೋರ್ಟ್ ನ ಈ ತೀರ್ಪನ್ನು ಪ್ರಶ್ನಿಸಿ ಬಾಳಿಗಾ ಕುಟುಂಬವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಹೇಳಿದರು.
ವಿನಾಯಕ್ ಬಾಳಿಗ ಅವರ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿರುವಾಗ ಪ್ರಮುಖ ಆರೋಪಿಗೆ ಜಾಮೀನು ನೀಡಿದ್ದರಿಂದ ತನಿಖೆಗೆ ತಡೆಯಾಗುತ್ತದೆ. ತಮ್ಮ ಕುಟುಂಬಕ್ಕೂ ಅಪಾಯ ಹಾಗೂ ಸಾಕ್ಷಿ ನಾಶಕ್ಕೂ ಸಹಕಾರಿಯಾಗಲಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಮಧ್ಯೆ ನರೇಶ್ ಶೆಣೈಗೆ ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಬೇಕೆಂದು ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲವು ವಜಾಗೊಳಿಸಿದೆ.ಈ ತೀರ್ಪಿನ ವಿರುದ್ಧವೂ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ ಎಂದರು.
ಆರೋಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಬಯಲಾಗಬಹುದು. ಈ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆಗೆ ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಇದರಲ್ಲಿ ಬಾಳಿಗಾ ಕುಟುಂಬಕ್ಕೆ ನ್ಯಾಯ ಸಿಗದಿದ್ದಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸುವಂತೆ ಕೋರಲಾಗುವುದು ಎಂದು ರವೀಂದ್ರ ಕಾಮತ್ ಹೇಳಿದರು.
ಬಾಳಿಗ ಕೊಲೆ ಪ್ರಕರಣದಲ್ಲಿ ಮಂಗಳೂರು ಪೊಲೀಸರು ನಡೆದುಕೊಂಡ ಬಗ್ಗೆಯೂ ಸಂಶಯ ವ್ಯಕ್ತವಾಗುತ್ತದೆ. ವಿನಾಯಕ ಬಾಳಿಗ ಬರೆದ ಪತ್ರವನ್ನು ಹಾಜರುಪಡಿಸುವಂತೆ ಮಠದ ಈಗಿನ ಮುಖ್ಯಸ್ಥ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಗೆ ಸಮನ್ಸ್ ಕಳುಹಿಸಿದಾಗ ಸ್ವಾಮೀಜಿ ಖುದ್ದು ಹಾಜರಾಗದೆ ಮಠದ ಗುಮಾಸ್ತರನ್ನು ಹಾಗೂ ತಮ್ಮ ಪ್ರತಿನಿಧಿಯಾಗಿ ಇಬ್ಬರು ವಕೀಲರನ್ನು ಕಳುಹಿಸಿದ್ದರು. ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಠಾಣೆಯಲ್ಲಿ ಪ್ರಶ್ನೋತ್ತರ ವಿಚಾರಣೆ ನಡೆಸುವುದರಿಂದ ಹೀಗೆ ವ್ಯಕ್ತಿಯ ಬದಲು ಇನ್ನೊಬ್ಬರು ಪ್ರತಿನಿಧಿಯಾಗಿ ಹೋಗುವಂತಿಲ್ಲವಾದರೂ ಪೊಲೀಸರು ಇದನ್ನು ಮಾನ್ಯ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ವಿಚಾರವಾದಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರೊ. ನರೇಂದ್ರ ದೂರಿದರು.
ದೆಹಲಿ ಹೈಕೋರ್ಟ್‌ನ ವಕೀಲೆ ಲೀನಾ, ಮನಪಾ ಸದಸ್ಯ ದಯಾನಂದ್, ದಲಿತ ಸಂಘರ್ಷ ಸಮಿತಿಯ ಎಂ.ದೇವದಾಸ್, ಬಾಳಿಗಾ ಅವರ ತಾಯಿ ಹಾಗೂ ಸಹೋದರಿಯರು ಈ ವೇಳೆ ಉಪಸ್ಥಿತರಿದ್ದರು.
Comments are closed.