ಉಡುಪಿ: ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿರುವ ಕುಡಿಯುವ ನೀರಿನ ಬಾಟೆಲ್‌ಗಳ ಮೇಲೆ ಐಎಸ್‌ಐ ಪ್ರಮಾಣಪತ್ರ ಇರುವುದನ್ನು ಪರಿಶೀಲಿಸಿ ಅಂತಹ ನೀರನ್ನು ಮಾತ್ರ ಸಾರ್ವಜನಿಕರು ಬಳಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರು ಮಾರಾಟ ಮಾಡುವ 10 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಈ ಘಟಕಗಳಿಗೆ ಐಎಸ್‌ಐ ಪ್ರಮಾಣಪತ್ರ ನೀಡಲಾಗಿದೆ, ಈ ಸಂಸ್ಥೆಗಳನ್ನು ಬಿಟ್ಟು ಇತರೆ ಸಂಸ್ಥೆಗಳ ಕುಡಿಯುವ ನೀರಿನ ಬಾಟೆಲ್‌ಗಳು ಕಂಡುಬಂದಲ್ಲಿ ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಪ್ರಮಾಣಪತ್ರ ಪಡೆದಿರುವ ಸಂಸ್ಥೆಗಳು, ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಅನುಮತಿ ಪಡೆದಿರುವ ಪ್ರಮಾಣದಲ್ಲಿ ಮಾತ್ರ ಮಾರಾಟ ಮಾಡುವಂತೆ ಹಾಗೂ ಐಎಸ್‌ಐ ಮುದ್ರೆ, ತಯಾರಿಕೆ ಹಾಗೂ ಅವಧಿ ಮುಗಿಯುವ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸುವಂತೆ ಹಾಗೂ ನಿಗಧಿತವಾಗಿ ಈ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸಾರ್ವಜನಿಕ ಧೂಮಪಾನ ಪ್ರಕರಣಗಳು ಕಡಿಮೆ ಇದ್ದು, ಜಿಲ್ಲೆಯನ್ನು ಉನ್ನತ ಅನುಷ್ಠಾನ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯಿಂದ ಈ ವರ್ಷ ಇದುವರೆವಿಗೂ ತಂಬಾಕು ಮಾರಾಟ ಕುರಿತು 1275 ಪ್ರಕರಣಗಳನ್ನು ದಾಖಲಿಸಿ, 146200 ರೂ ಗಳ ದಂಡ ವಸೂಲಿ ಮಾಡಲಾಗಿದೆ, ತಂಬಾಕು ದುಷ್ಪರಿಣಾಮಗಳ ಕುರಿತು ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಜಾಹೀರಾತು ಫಲಕ ಅಳವಡಿಸುವಂತೆ ಹಾಗೂ ತಂಬಾಕು ಮಾರಾಟ ಕಂಡುಬಂದಲ್ಲಿ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳೂ ಸಹ ದಂಡ ವಿಧಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ವೈದ್ಯಕೀಯ ಸಂಸ್ಥೆಗಳ ನವೀಕರಣ ಸಂದರ್ಭದಲ್ಲಿ ಎಲ್ಲಾ ರೀತಿಯ ನಿಯಮ ಪಾಲನೆಯ ಕುರಿತು ಪರೀಕ್ಷಿಸಿ, ನವೀಕರಣ ಮಾಡುವಂತೆ ಹಾಗೂ ಆಸ್ಪತ್ರೆಗಳ ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವೀಲೆವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯ ಎಂಡೋಪೀಡಿತರಲ್ಲಿ ಅರ್ಹರಿದ್ದವರಿಗೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ವಿತರಿಸುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕ ಯೋಗೇಶ್ವರ್ ಅವರಿಗೆ ಜಿಲ್ಲಾಧಿಕಾರಿ ತಿಳಿಸಿದರು. ಆಗಸ್ಟ್‌ನಿಂದ ಅಕ್ಟೋಬರ್ ಅವಧಿಯಲ್ಲಿ 21 ಡೆಂಗ್ಯೂ ಪರೀಕ್ಷೆ ನಡೆಸಿದ್ದು, 9 ಪ್ರಕರಣ ಪತ್ತೆಯಾಗಿದೆ, 42 ನ್ಯುಮೋನಿಯಾ ಪತ್ತೆಯಾಗಿ 1 ಸಾವು ಸಂಭವಿಸಿದೆ, ಜಿಲ್ಲೆಯಲ್ಲಿ ಈ ವರ್ಷ ಇದುವರೆವಿಗೂ ೫೫೦ ಡೆಂಗ್ಯೂ ವರದಿಯಾಗಿದ್ದು 1 ಸಾವು ಸಂಭವಿಸಿದೆ ಎಂದು ಡಿ.ಹೆಚ್.ಒ ಡಾ. ರೋಹಿಣಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್, ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
Comments are closed.