ಉಡುಪಿ: ಮಲ್ಪೆ- ಪಡುಕರೆ ಸಂಪರ್ಕ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. ಅವರು ಮಲ್ಪೆ-ಪಡುಕೆರೆ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದರು.
16.91 ಕೋಟಿ ರೂ ವೆಚ್ಚದಲ್ಲಿ 5.5 ಮೀ ಅಗಲದ ಈ ಸೇತುವೆ ಕಾಮಗಾರಿ ಪ್ರಗತಿಯಿಂದ ಸಾಗುತ್ತಿದ್ದು, ಇನ್ನು 1 ತಿಂಗಳ ಕೆಲಸ ಮಾತ್ರ ಬಾಕಿ ಇದೆ, ಅಲ್ಲದೇ ಸಂಪರ್ಕ ರಸ್ತೆ ನಿರ್ಮಾಣಕ್ಕೆ 1 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ, ಒಟ್ಟು ಅನುದಾನದಲ್ಲಿ 8 ಕೋಟಿ ನಗರೋತ್ಥಾನ ಯೋಜನೆಯಡಿ, 5.5 ಕೋಟಿ ಉಡುಪಿ ನಗರಸಭೆಯ ಅಮೃತ ಮಹೋತ್ಸವ ನಿಧಿಯಿಂದ, 2 ಕೋಟಿ ನಗರಸಭೆಯ ಸ್ವಂತ ನಿಧಿ , 50 ಲಕ್ಷ ರೂ ವಿಶೇಷ ಅನುದಾನ, 90ಲಕ್ಷ ಅಮೃತ ಮಹೋತ್ಸವದ ಬಡ್ಡಿಯಿಂದ ವೆಚ್ಚ ಮಾಡಲಾಗಿದೆ.
ಅಲ್ಲದೇ ಈ ಭಾಗದಲ್ಲಿ ನಬಾಡ್ ವತಿಯಿಂದ 10 ಕೋಟಿ ರೂ ವೆಚ್ಚದಲ್ಲಿ ಜೆಟ್ಟಿ ನಿರ್ಮಾಣಕ್ಕೆ ಮಂಜೂರು ಸಿಕ್ಕಿದೆ , ಒಟ್ಟು ಈ ಪ್ರದೇಶದ ಅಭಿವೃದ್ದಿಗೆ 28 ಕೋಟಿ ರೂ ಗಳನ್ನು ವೆಚ್ಚ ಮಾಡಿದೆ ಎಂದು ಸಚಿವರು ತಿಳಿಸಿದರು.
ಮಲ್ಪೆ 3ನೇ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, ಸ್ಲಿಪ್ ವೇ ನಲ್ಲಿ ಒಂದು ಬಾರಿ 13 ಬೋಟ್ ಗಳನ್ನು ನಿಲ್ಲಿಸಲು ಸಾಧ್ಯವಿದ್ದು, ಈ ಸಂಖ್ಯೆಯನ್ನು ಹೆಚ್ಚು ಮಾಡುವಂತೆ ಹಾಗೂ 3 ನೇ ಹಂತದ ಕಾಮಗಾರಿಯಲ್ಲಿ ಇನ್ನೂ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮೀನುಗಾರರ ಸಂಘ ಮತ್ತು ಅಧಿಕಾರಿಗಳು ಸಭೆ ನಡೆಸಿ ವರದಿ ನೀಡುವಂತೆ ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ನಗರಸಭಾ ಸದಸ್ಯರಾದ ನಾರಾಯಣ ಕುಂದರ್, ರಮೇಶ್ ಕಾಂಚನ್ , ಚಂದ್ರಕಾಂತ್, ಗಣೇಶ್ ನೆರ್ಗಿ, ಬಂದರು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿ ನಾಗರಾಜ್ ,ಮೀನುಗಾರಿಕಾ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
Comments are closed.