ಕರಾವಳಿ

ಪ್ರೀತಿ, ಪ್ರೇಮ,ಅಪಹರಣ,ನಾಪತ್ತೆ ಪ್ರಕರಣ : ‘ಬಿ’ ರಿಪೋರ್ಟ್‌ ಸಲ್ಲಿಸಿದ ಪೊಲೀಸರಿಗೆ ಬಿಸಿ ಮುಟ್ಟಿಸಿದ ನ್ಯಾಯಾಲಯ

Pinterest LinkedIn Tumblr

puttur_kirtika_kidnup

ಪುತ್ತೂರು, ಡಿಸೆಂಬರ್.10 : ಕಳೆದ ಎರಡು ವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದಿದ್ದ ಛಾಯಾಗ್ರಾಹಕರೊಬ್ಬರ ಪತ್ನಿಯ ನಾಪತ್ತೆ ಪ್ರಕರಣ ದೂರಿಗೆ ಸಂಬಂಧಿಸಿ ಆರೋಪ ದಾಖಲಿಸಿಕೊಂಡಿರುವ ಪುತ್ತೂರು ನಗರ ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದು, ಈ ಕುರಿತು ಪತಿ ಸಲ್ಲಿಸಲಾಗಿದ್ದ ಆಕ್ಷೇಪಣೆಯ ಕುರಿತು ವಿಚಾರಣೆ ನಡೆಸಿದ ಪುತ್ತೂರು ಎಸಿಜೆಎಂ ನ್ಯಾಯಾಲಯ ಪೊಲೀಸರು ಸಲ್ಲಿಸಿರುವ ‘ಬಿ’ ರಿಪೋರ್ಟ್‌ನ್ನು ತಿರಸ್ಕರಿಸಿ, ಆಕೆಯನ್ನು ಅಪಹರಿಸಿರುವ ಆರೋಪಿಗಳಿಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶ ನೀಡಿದೆ.

ಪುತ್ತೂರು ನಗರದ ಸಾಮೆತ್ತಡ್ಕದ ಗಿರೀಶ್ ಕಂಪೌಂಡ್ ನಿವಾಸಿ, ಪುತ್ತೂರಿನ ಸ್ಟುಡಿಯೋ ಮಾಲಕರಾಗಿದ್ದ ಛಾಯಾಚಿತ್ರಗ್ರಾಹಕ ಗಿರಿಧರ್ ಭಟ್ ಅವರ ಪತ್ನಿ ಕೀರ್ತಿಕಾ ಅವರು 11-09-2014ರಂದು ನಾಪತ್ತೆಯಾಗಿದ್ದರು. ಆಕೆಯನ್ನು ಅಪಹರಿಸಿದ್ದ ಆರೋಪ ಹೊಂದಿದ್ದ ಬೆಂಗಳೂರು ಮೂಲದ ಡೆನ್ಸಸ್ ಡೆವಿಸ್ ಮತ್ತು ಆತನಿಗೆ ಸಹಕರಿಸಿದ ಬೆಂಗಳೂರಿನ ಸಂತೋಷ್ ಕುಮಾರ್ ವಿರುದ್ದ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ.

ತನ್ನ ಪತ್ನಿ ಕೀರ್ತಿಕಾ ಸೆ.೧೧ರಂದು ಕಲ್ಲಾರೆಯಲ್ಲಿರುವ ತನ್ನ ತವರು ಮನೆಯಿಂದ ನಾಪತ್ತೆಯಾಗಿದ್ದು, ಆಕೆಯನ್ನು ಬೈಕುಗಳಲ್ಲಿ ಬಂದ ಇಬ್ಬರು ಅಪಹರಿಸಿಕೊಂಡು ಹೋಗಿದ್ದಾರೆಂದು ಗಿರಿಧರ ಭಟ್ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಗಿರಿಧರ್ ಭಟ್ ಅವರು ನೀಡಿದ ದೂರಿನ ಆಧಾರದಲ್ಲಿ ಪುತ್ತೂರು ನಗರ ಪೊಲೀಸರು ಕಲಂ 363 ಹಾಗೂ ಭಾರತೀಯ ದಂಡ ಸಂವಿತೆ ಕಲಂ 34ರಡಿಯಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಕೀರ್ತಿಕಾ ಅವರನ್ನು ಕರೆದುಕೊಂಡು ಹೋಗಿದ್ದ ಬೆಂಗಳೂರು ಮೂಲದ ಡೆನ್ಸ್‌ಸ್ ಡೆವಿಸ್ ಮತ್ತು ಆತನಿಗೆ ಸಹಕರಿಸಿದ ಆರೋಪದ ಮೇಲೆ ಬೆಂಗಳೂರಿನ ಉದಯನಗರ ಬಳಿಯ ಟಿನ್ನಫ್ಯಾಕ್ಟರಿ ಸಮೀಪದ ಮುರುಗನ್ ನಿಲಯದ ಚಂದ್ರಮೂರ್ತಿ ಅವರ ಪುತ್ರ ಸಂತೋಷ್ ಕುಮಾರ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಆ ಸಂದರ್ಭದಲ್ಲಿ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿತ್ತು. ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೂರ್ಟ್ ಸಲ್ಲಿಸಿದ್ದರು. ಪೊಲೀಸರ ಬಿ ರಿಪೋರ್ಟ್‌ಗೆ ಆಕ್ಷೇಪ ವ್ಯಕ್ತ ಪಡಿಸಿ ಗಿರಿಧರ್ ಭಟ್ ಅವರು ನ್ಯಾಯಾಲಯಕ್ಕೆ ಮತ್ತೆ ಮನವಿ ಮಾಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಪುತ್ತೂರಿನ ಎಸಿಜೆಎಂ ನ್ಯಾಯಾಲಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಿರುವ ಬಿ.ರಿಪೋರ್ಟ್‌ನ್ನು ತಿರಸ್ಕರಿಸಿ, ಆರೋಪಿಗಳಾದ ಡೆನ್ಸನ್ ಡೇವಿಡ್ ಮತ್ತು ಸಂತೋಷ್ ಕುಮಾರ್ ವಿರುದ್ದ ಕಲಂ 363, 34ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.

ಘಟನೆಯ ಹಿನ್ನಲೆ :

ಸಾಮೆತ್ತಡ್ಕದ ಗಿರೀಶ್ ಕಂಪೌಂಡ್ ನಿವಾಸಿಯಾದ ಛಾಯಾಚಿತ್ರಗ್ರಾಹಕ ಗಿರಿಧರ ಭಟ್ ಮತ್ತು ಬಿ.ಇ ಪದವೀಧರೆಯಾಗಿದ್ದ ಕೀರ್ತಿಕಾ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ವಿವಾಹವಾದ ಎರಡು ವರ್ಷಗಳ ಬಳಿಕ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೀರ್ತಿಕಾ ಅವರಿಗೆ ಉದ್ಯೋಗ ಲಭಿಸಿತ್ತು. ಈ ಹಿನ್ನಲೆಯಲ್ಲಿ ಗಿರಿಧರ್ ಭಟ್ ಅವರು ಆಕೆಯನ್ನು ಬೆಂಗಳೂರಿನಲ್ಲೇ ಬಿಟ್ಟು ಪುತ್ತೂರಿಗೆ ಮರಳಿದ್ದರು .

ಈ ನಡುವೆ ಆಕೆಗೆ ಅದೇ ಕಂಪೆನಿಯಲ್ಲಿ ದುಡಿಯುತ್ತಿರುವ ಡೆನ್ಸನ್ ಡೇವಿಡ್ ಎಂಬಾತನ ಜೊತೆಗೆ ಪ್ರೇಮಾಂಕುರವಾಗಿತ್ತು. ಈ ಮಾಹಿತಿ ಅರಿತ ಗಿರಿಧರ್ ಭಟ್ ಮತ್ತು ಕೀರ್ತಿಕಾ ಅವರ ಮನೆಯವರು ಬೆಂಗಳೂರಿನಿಂದ ಆಕೆಯನ್ನು ಪುತ್ತೂರಿಗೆ ಕರೆತಂದು ಆಕೆಯ ತವರು ಮನೆಯಲ್ಲೇ ಇರಿಸಿದ್ದರು. ಆದರೆ ಈ ನಡುವೆಯೂ ಡೆನ್ಸನ್ ಡೇವಿಡ್‌ನೊಂದಿಗೆ ಸಂಪರ್ಕ ಇರಿಸಿಕೊಂಡಿದ್ದ ಕೀರ್ತಿಕಾ ಅವರು ಪುತ್ತೂರಿನ ಸಾಮತ್ತಡ್ಕದ ಮನೆಯಿಂದ ಆತನೊಂದಿಗೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು.

ಈ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಡೆನ್ಸನ್ ಡೇವಿಡ್ ಪುತ್ತೂರು ನ್ಯಾಯಾಲಯದಿಂದ ಜಮೀನು ಪಡೆದು ಹೊರ ಹೋದ ಬಳಿಕ ನಾಪತ್ತೆಯಾಗಿದ್ದು, ವಾಸ್ತವ್ಯವನ್ನು ಬದಲಾಯಿಸಿಕೊಂಡಿದ್ದನೆಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಬಿ ರಿಪೋರ್ಟ್ ಸಲ್ಲಿಸುವ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಆದರೆ ನ್ಯಾಯಾಲಯದ ಆದೇಶದಿಂದಾಗಿ ಇದೀಗ ಮತ್ತೆ ಪ್ರಕರಣ ಜೀವಂತವಾಗಿದೆ.

ವರದಿ ಕೃಪೆ : ಸಂಜೆವಾಣಿ

Comments are closed.