ಮಂಗಳೂರು, ಡಿಸೆಂಬರ್.10: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನವ ಹಕ್ಕುಗಳ ಸರಕಾರೇತರ ಸಂಸ್ಥೆಗಳು, ಸಂತ ಆಯಗ್ನೆಸ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿಗಳ ಸಭಾಂಗಣದಲ್ಲಿ ಆಯೋಜಿಸಲಾದ ‘ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪಾಧಿಕಾರದ ಅಧ್ಯಕ್ಷ ಕೆ.ಎಸ್. ಬೀಳಗಿ ಉದ್ಘಾಟಿಸಿದರು.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿವಿಧ ಹಕ್ಕುಗಳ ಬೇಡಿಕೆಗಳನ್ನು ಮುಂದಿಟ್ಟರೆ ಸಾಲದು, ಕರ್ತವ್ಯ ಪಾಲನೆಯೂ ಮುಖ್ಯ. ಕರ್ತವ್ಯ ಪಾಲನೆಯ ಹೊರತು ಮಾನವ ಹಕ್ಕುಗಳನ್ನು ಸಂರಕ್ಷಿಸಲು ಅಸಾಧ್ಯ. ಹಕ್ಕು ಮತ್ತು ಕರ್ತವ್ಯ ಒಂದು ನಾಣ್ಯದ ಎರಡು ಮುಖಗಳಂತೆ. ಅದು ಒಂದನ್ನು ಬಿಟ್ಟು ಇನ್ನೊಂದಿಲ್ಲ.ಹಕ್ಕುಗಳನ್ನು ಕೇಳಿ ಪಡೆಯುವ ನಾವು ನಮ್ಮ ನಮ್ಮ ಕರ್ತವ್ಯದ ಬಗ್ಗೆ ಯೋಚಿಸುವುದಿಲ್ಲ. ಕೆಲವು ಸಂದರ್ಭ ಮಾನವ ಹಕ್ಕುಗಳು ಮನೆಯಿಂದಲೇ ಉಲ್ಲಂಘನೆಯಾಗುತ್ತದೆ. ಮಾನವ ಹಕ್ಕುಗಳ ಬಗ್ಗೆ ಜಾಗೃತಿಯು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು.ಮಾನವ ಹಕ್ಕು ಉಲ್ಲಂಘನೆಯಾಗುತ್ತಿದ್ದರೂ ಕೂಡ ಅದರ ಬಗ್ಗೆ ಧ್ವನಿ ಎತ್ತದೆ ಸುಮ್ಮನಿರುವುದು ಸರಿಯಲ್ಲ ಎಂದು ಹೇಳಿದರು.
ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ನಿರಂತರವಾಗಿ ಕೇಳಿ ಬರುತ್ತಿತ್ತು. ಆದರೆ ಮಾನವ ಹಕ್ಕುಗಳ ಆಯೋಗ ರಚನೆಯಾದ ಬಳಿಕ ದೌರ್ಜನ್ಯದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ತನಿಖೆಯು ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದ.ಕ.ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವೇದಮೂರ್ತಿ ಹೇಳಿದರು.
ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಮಧುಶರ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಲ್ಲನ ಗೌಡ, ಸಂತ ಆಯಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ಜೆಸ್ವೀನಾ ಎ.ಸಿ., ಮಾನವ ಹಕ್ಕು ಸಂಘಟನೆಯ ಕೊಲ್ಲಾಡಿ ಬಾಲಕೃಷ್ಣ ರೈ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ಡಿಸಿಪಿ ಶಾಂತರಾಜು, ದ.ಕ.ಜಿಪಂ ಉಪ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಚಂದ್ರಮೋಹನ್ ಕಾರ್ಯಕ್ರಮ ನಿರೂಪಿಸಿದರು.
ತಡವಾಗಿ ಆರಂಭವಾದ ಕಾರ್ಯಕ್ರಮ : ಅಸಮಾಧಾನಗೊಂಡ ನ್ಯಾಯಾಧೀಶರು
ಸಮಯಕ್ಕೆ ಸರಿಯಾಗಿ ಸಭಾಂಗಣದಲ್ಲಿ ಉಪಸ್ಥಿತರಿದ್ದ ನ್ಯಾಯಾಧೀಶ ಕೆ.ಎಸ್. ಬೀಳಗಿ ಕಾರ್ಯಕ್ರಮ ವಿಳಂಬವಾದುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇದು ಅವ್ಯವಸ್ಥೆಯೋ ಅಥವಾ ಇದಕ್ಕೆ ನಾವು ಒಗ್ಗಿಕೊಂಡಿದ್ದೇವೆಯೋ ಗೊತ್ತಾಗುತ್ತಿಲ್ಲ. ಒಂದಂತೂ ನಿಜ, ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ನ್ಯಾಯಾಧೀಶರು ಅಸಮಾಧಾನದಿಂದಲೇ ನುಡಿದರು.
Comments are closed.