ಕರಾವಳಿ

ಮನೆಗೆ ಬೀಗ ಹಾಕಿ ಹೋಗಲು ಭಯವೇ… ಭಯ ಬಿಟ್ಟು ಬಿಡಿ.. ನಿಶ್ಚಿಂತೆಯಿಂದ ಪ್ರಯಾಣಿಸಿ…

Pinterest LinkedIn Tumblr

police_protaction_home

ಮಂಗಳೂರು, ಡಿ.21: ದ.ಕ.ಜಿಲ್ಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ಇನ್ನು ಮುಂದೆ ತುಂಬಾ ದಿನಗಳ ಕಾಲ ಮನೆಗೆ ಬೀಗ ಹಾಕಿ ಹೋಗಲು ಭಯಪಡಬೇಕಿಲ್ಲ. ಇನ್ನು ಮುಂದೆ ನೀವು ನಿಮ್ಮ ಮನೆಯನ್ನು ಒಂಟಿಯಾಗಿ ಬಿಟ್ಟು ದೂರದ ಊರುಗಳಿಗೆ, ಸಂಬಂಧಿಕರ ಮನೆಗೆ ಹೋಗುವಾಗ ನಿಮ್ಮ ಮನೆಗೆ ಜಿಲ್ಲಾಪೊಲೀಸ್ ‘ಗೃಹ ಸುರಕ್ಷಾ’ವನ್ನು ಒದಗಿಸಲಿದೆ.

ಹೌದು, ಮಂಗಳೂರು ನಗರ ಹಾಗೂ ದ.ಕ. ಜಿಲ್ಲಾ ಪೊಲೀಸ್ ಇದೀಗ ‘ಗೃಹ ಸುರಕ್ಷಾ’ ಮೂಲಕ ನಿಮ್ಮ ಸಹಾಯಕ್ಕೆ ಮುಂದಾಗಿದೆ. ಈ ಮೂಲಕ ರಜಾ ದಿನಗಳಲ್ಲಿ ಮನೆ ಬಿಟ್ಟು ದೂರ ಪ್ರವಾಸ, ತೀರ್ಥಯಾತ್ರೆ, ಸಂಬಂಧಿಕರ ಮನೆಗೆ ಹೋಗುವವರಿಗೆ ರಕ್ಷಣೆ ನೀಡಲು ಮುಂದಾಗಿದೆ.

ಹೀಗೊಂದು ವಿನೂತನ ಕ್ರಮವನ್ನು ಮಂಗಳೂರು ನಗರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯ ಜನತೆಗೆ ಒದಗಿಸುತ್ತಿದ್ದಾರೆ. ನೀವು ಮನೆಯನ್ನು ಖಾಲಿ ಬಿಟ್ಟು ಹೋಗಬೇಕೆಂದಿದ್ದರೆ ನಿಮ್ಮ ಮನೆಯ ವಿಳಾಸ, ಎಷ್ಟು ದಿನಗಳ ಕಾಲ ಮನೆಯಲ್ಲಿರುವುದಿಲ್ಲ ಎಂಬ ಮಾಹಿತಿಯನ್ನು ಹಾಗೂ ‘ಜಿಪಿಎಸ್ ಲೊಕೇಶನ್’ ನಿಮ್ಮ ವಾಟ್ಸಾಪ್ ಮೂಲಕ ದಕ್ಷಿಣ ಕನ್ನಡ ಪೊಲೀಸ್ ಕಂಟ್ರೋಲ್ ರೂಂಗೆ ವಾಟ್ಸಾಪ್ ನಂ.9480805300ಗೆ ಮಾಹಿತಿ ನೀಡಿ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಂಗಳೂರು ನಗರ ಮತ್ತು ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಜಂಟಿಯಾಗಿ ‘ಗೃಹ ಸುರಕ್ಷಾ’ ಆಯಪ್ ಮೂಲಕ ಮನೆ ಕಳ್ಳತನ, ದರೋಡೆ ಕಾರ್ಯಗಳಿಗೆ ಸೆಡ್ಡು ಹೊಡೆಯಲು ತಂತ್ರಾಂಶವನ್ನು ರೂಪಿಸಿದೆ.

ದ.ಕ. ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಹಾಗೂ ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಈ ಆಯಪ್ ತಯಾರಿಸಲಾಗಿದೆ. ದ.ಕ. ಜಿಲ್ಲಾ ಪೊಲೀಸ್ಹಾಗೂ ಮಂಗಳೂರುನಗರದಲ್ಲಿ ಈ ಆಯಪ್ ಕಾರ್ಯಾಚರಿಸಲಿದೆ.

ಸಾರ್ವಜನಿಕರಿಗೆ ಈ ಆಯಪ್ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆ ವಿಶೇಷ ಕಾಳಜಿಯನ್ನು ವಹಿಸಿದೆ. ಅದಕ್ಕಾಗಿ ಆಯಪ್ ಕುರಿತಾದ ಮಾಹಿತಿಯನ್ನು ಕಿರು ಪ್ರಹಸನದ ವೀಡಿಯೊ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನವನ್ನೂ ಮಾಡುತ್ತಿದೆ.
ತಾಂತ್ರಿಕ ವಿಧಾನಗಳ ಬಗ್ಗೆ ಹೆಚ್ಚಿನ ಆಸಕ್ತಿ ಹಾಗೂ ಅನುಭವ ಹೊಂದಿರುವ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಈ ಹಿಂದೆ ಮಂಡ್ಯದಲ್ಲಿ ಎಸ್ಪಿಯಾಗಿದ್ದ ವೇಳೆ ವಾರಿಸುದಾರರಿಲ್ಲದ ವಾಹನ ಪತ್ತೆಗೆ ನೂತನ ಸಾಫ್ಟ್ವೇರ್ ಕಂಡು ಹಿಡಿದು ಅದರಲ್ಲಿ ಯಶಸ್ಸು ಕಂಡಿದ್ದರು.

ಈ ತಂತ್ರಾಂಶವೀಗ ಗೋವಾ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲೂ ಅಳವಡಿಕೆಯಾಗಿದೆ. ಇದೀಗ ಪ್ರಾಮಾಣಿಕ ಹಾಗೂ ದಿಟ್ಟ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರ ಸಲಹೆ, ಸೂಚನೆಯ ಮೇರೆಗೆ ಈ ಹೊಸ ಆಯಪ್ ಸಿದ್ಧಗೊಳಿಸಿದ್ದಾರೆ.

ವರದಿ ಕೃಪೆ : ವಾರ್ತಾ ಭಾರತಿ

Comments are closed.