ಈ ಸಾಲಿನ ಕರಾವಳಿ ಉತ್ಸವ ಕಾರ್ಯಕ್ರಮಕ್ಕೆ ಡಿ.23ರಂದು ಚಾಲನೆ ದೊರೆಯಲಿದೆ.ಕರಾವಳಿ ಉತ್ಸವ ಮೈದಾನದಲ್ಲಿ ಸಂಜೆ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಸ್ತುಪ್ರದರ್ಶನ ಉದ್ಘಾಟಿಸಲಿದ್ದು, ಸಂಜೆ 4.30ಕ್ಕೆ ಸಾಂಸೃತಿಕ ಮೆರವಣಿಗೆಗೆ ಆಹಾರ ಸಚಿವ ಯು.ಟಿ. ಖಾದರ್ ಚಾಲನೆ ನೀಡುವರು.
ಮಂಗಳೂರು,ಡಿಸೆಂಬರ್,21 : ಜಿಲ್ಲಾ ಕರಾವಳಿ ಉತ್ಸವ2016-17, ನಾಳೆ ಶುಕ್ರವಾರದಿಂದ ಶುಭಾರಂಭಗೊಳ್ಳಲಿದ್ದು ರಾಜ್ಯ ಮತ್ತು ಪಶ್ಚಿಮ ಕರಾವಳಿಯನ್ನು ಪ್ರತಿಬಿಂಬಿಸುವ ಎಲ್ಲಾ ಭಾಷೆ, ಧರ್ಮ, ಜೀವನ ಸಂಸ್ಕೃತಿ, ಜನಪದ, ದೇವಾಲಯ ಸಂಸ್ಕತಿ ಯಕ್ಷಗಾನ ಮೊದಲಾದವುಗಳನ್ನೊಳಗೊಂಡಂತೆ ಸುಮಾರು 70ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ಮೂಲಕ ಬೃಹತ್ ಸಾಂಸ್ಕತಿಕ ಮೆರವಣಿಗೆ – ದಿಬ್ಬಣವನ್ನುಆಯೋಜಿಸಲಾಗಿದೆ.
ಕರಾವಳಿ ಉತ್ಸವ ಮೈದಾನದಲ್ಲಿ ಸಂಜೆ 4ಕ್ಕೆ ಕರ್ನಾಟಕ ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಯು.ಟಿ. ಖಾದರ್ ಸಾಂಸ್ಕೃತಿಕ ಮೆರವಣಿಗೆಯನ್ನುಉದ್ಘಾಟಿಸಲಿರುವರು. ಮೆರವಣಿಗೆಯು ಕರಾವಳಿ ಉತ್ಸವ ಮೈದಾನದಿಂದ ಹೊರಟು ಕದ್ರಿ ಉದ್ಯಾನವನದಲ್ಲಿ ಸಂಪನ್ನಗೊಳ್ಳಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ದ.ಕ. ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಅಲ್ಲದೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಮೆರವಣಿಗೆ ಸಾಗಲಿರುವುದು.
ಸ್ವಸಹಾಯ ಹಾಗೂ ಸ್ತ್ರೀ ಶಕ್ತಿ ಗುಂಪುಗಳು, ರೆಡ್‌ಕ್ರಾಸ್,ಎನ.ಎಸ್.ಎಸ್., ಭಾರತ ಸೇವಾದಳ, ನೇವಲ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಧುಗಳು ಹಾಗೂ ಶಾಲಾ ಕಾಲೇಜಿನ ಸುಮಾರು ಐದಾರು ಸಾವಿರ ವಿದ್ಯಾರ್ಥಿಗಳು ಈ ವೈಭವ ಪೂರ್ಣ ಸಾಂಸ್ಕೃತಿಕ ಸಂಭ್ರಮದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು.
ಮೆರವಣಿಗೆಯಲ್ಲಿ ಮಂಗಳವಾದ್ಯ, ತಟ್ಟಿರಾಯ, ಪಕ್ಕಿನಿಶಾನೆ, ಕೊಂಬು, ಚೆಂಡೆ, ರಣಕಹಳೆ, ಜಿಲ್ಲಾ ಪೋಲೀಸ್ ಬ್ಯಾಂಡ್, ಬಣ್ಣದ ಕೊಡೆಗಳು, ಬಸವ ತಂಡ, ಶಂಖದಾಸರು, ಕನ್ನಡ ಭುವೇಶ್ವರಿ ಸ್ತಬ್ಧ ಚಿತ್ರ, ಕೀಲು ಕುದುರೆ, ಕರಗ, ಕುಸ್ತಿಪಟುಗಳ ತಂಡ, ಹಾಸ್ಯ ಗೊಂಬೆ ತಂಡ, ದಪ್ಪು ಕುಣಿತ, ಅರೆಭಾಷೆ ಜನರ ಕುದುರೆ ಸವಾರಿ, ಒಪ್ಪಣಿ ತಂಡ, ಕೋಲ್ಕಳಿ, ಕೊಡವ ನೃತ್ಯ,ತಾಲೀಮು, ಮರಕಾಲು ಹುಲಿವೇಷ ಮತ್ತು ಹುಲಿವೇಷ, ಶಾರ್ದೂಲ – ಕರಡಿ ಕುಣಿತ, ಡೋಲು ಕುಣಿತ, ಆಟಿಕಳಂಜ, ಛತ್ರ ಕುಣಿತ, ಬೊಳ್ಗುಡೆ ನಲಿಕೆ, ಇರೆನಲಿಕೆ, ಪರ ಕೋಲು ನಲಿಕೆ, ಯಕ್ಷಗಾನ ವೇಷ, ಯಕ್ಷಗಾನದ ಬೃಹತ್ ಗೊಂಬೆ, ವೀರಭದ್ರ ಕುಣಿತ, ಬೇಡರ ಕುಣಿತ, ಮೈಸೂರು ನಗಾರಿ, ಗೊರವರ ಕುಣಿತ, ಡೊಳ್ಳು ಕುಣಿತ, ಜಗ್ಗಳಿಕೆ, ಫಟ್ಟಾ ಕುಣಿತ, ಪೂಜಾ ಕುಣೀತ, ಕಂಸಾಳೆ, ಮಹಿಳಾ ವೀರಗಾಸೆ, ಪುರವಂತಿಕೆ, ಸಿದ್ದಿ ದಮಾಮ್ ಕುಣಿತ, ಅಕ್ಕಮಹಾದೇವಿ, ವೀರಶೈವ ಮಹಿಳಾ ತಂಡ, ಹಾಲಕ್ಕಿ ಸುಗ್ಗಿ ಕುಣಿತ, ಕೋಲಾಟ, ಕಂಗೀಲು ನೃತ್ಯ, ಸೊಮನ ಕುಣಿತ, ಗೋಂದೋಳು (ಕೊಂಕಣಿ ಕುಡುಬಿ ಜನಾಂಗದ ಗಮಟೆ ವಾದನ ನರ್ತನ) ಇತ್ಯಾದಿ ಕಲಾತಂಡಗಳಿಂದ ಸಾಂಸ್ಕೃತಿಕ ಕಲಾ ಪ್ರದರ್ಶನವು ಮೆರವಣಿಗೆ ಯುದ್ದಕ್ಕೂಆಕರ್ಷಣೀಯವಾಗಿ ಪ್ರದರ್ಶಿತಗೊಳ್ಳಲಿದೆ ಇದಲ್ಲದೆ ಅನೇಕ ಧಾರ್ಮಿಕ ಕ್ಷೇತ್ರಗಳ ಪ್ರಮುಖರು, ಸಚಿವರು, ಮಹಾಪೌರರು, ಜನಪ್ರತಿನಿಧಿಗಳು, ಅಧಿಕಾರಿಗಳು ಪುರ ಪ್ರಮುಖರು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ವಿವಿಧ ಬ್ಯಾಂಕುಗಳ ಕನ್ನಡ ಸಂಘದ ಸದಸ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗ್ರಾಮಾಂತರ ಮತ್ತು ನಗರ, ಅಲ್ಲದೆ ವಿವಿಧ ಸ್ವಸಹಾಯ ಗುಂಪುಗಳು ಅಂಗನಾಡಿ ಕಾರ್ಯಕರ್ತೆಯರು, ಎನ್.ಸಿ.ಸಿ. ವಿದ್ಯಾರ್ಥಿಗಳು, ಕುದುರೆ ಮುಖ ಕಬ್ಬಿಣ ಮತ್ತು ಅದಿರು ಕಾರ್ಖಾನೆ ಪಣಂಬೂರು ಇಲ್ಲಿನ ಕನ್ನಡ ಸಂಘದ ಸದಸ್ಯರು, ಅಂಚೆ ಇಲಾಖೆ, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್, ಸ್ವಚ್ಚ ಭಾರತ ತಂಡಗಳ ಸಹಿತ ಇನ್ನೂ ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅನೇಕ ಸಾಂಸ್ಕೃತಿಕ ತಂಡಗಳು ಪಾಲ್ಗೊಳ್ಳುವ ಈ ಸಂಭ್ರಮದ ಮೆರವಣಿಗೆಯ ಭಾವಚಿತ್ರ ಹಾಗೂ ವಿಡಿಯೋ ಚಿತ್ರಿಕರಣದ ಮೂಲಕ ದಾಖಲಿಸಿಕೊಳ್ಳಲು ಇದೊಂದೊಂದು ಸದಾವಕಾಶವಾಗಿದೆ. ಸಾರ್ವಜನಿಕ ಸಂಘ ಸಂಸ್ಥೆಗಳು, ತಮ್ಮ ಸಂಸ್ಥೆಯ ಬ್ಯಾನರ್‌ಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ. ತಹಶೀಲ್ದಾರ್‌ಸಿ. ಮಹಾದೇವಯ್ಯ ಕೆ.ಎ.ಎಸ್., ನವನೀತ ಮಾಳವ, ಸದಾಶಿವ ಶೆಟ್ಟಿ, ಪ್ರವೀಣ್ ಕುಮಾರ್ ಮೊದಲಾದವರನ್ನು ಒಳಗೊಂಡಂತೆ ಎಸ್. ಪ್ರದೀಪ ಕುಮಾರ ಕಲ್ಕೂರರ ಅಧ್ಯಕ್ಷತೆಯಲ್ಲಿ ಈಗಾಗಲೇ ಪೂರ್ವಭಾವೆ ಸಿದ್ಧತೆಯು ನಡೆದಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮೆರವಣಿಗೆ ಸಮಿತಿ ಅಧ್ಯಕ್ಷ ಎಸ್. ಪ್ರದೀಪ ಕುಮಾರ ವಿನಂತಿಸಿದ್ದಾರೆ.
Comments are closed.