ಕರಾವಳಿ

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ : ಡಿಜಿಧನ್ ಮೇಳಕ್ಕೆ ಕೇಂದ್ರ ಸಚಿವರಿಂದ ಚಾಲನೆ

Pinterest LinkedIn Tumblr

ಮಂಗಳೂರು.ಜನವರಿ.26: ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಾಗೂ ಡಿಜಿಟಲ್ ಪಾವತಿ ಹಾಗೂ ನಗದು ರಹಿತ ವ್ಯವಹಾರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಸರಕಾರದ ನೀತಿ ಆಯೋಗದ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಲಾದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಡಿಜಿಟಲ್ ಪಾವತಿಗಾಗಿರುವ ಡಿಜಿಧನ್ ಮೇಳದ 32ನೇ ಕಾರ್ಯಕ್ರಮಕ್ಕೆ ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರು ಬುಧವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಆಧಾರ್ ಆಧಾರಿತ ನಗದು ರಹಿತ ಡಿಜಿಟಲ್ ಪಾವತಿಯನ್ನು ವ್ಯಾಪಾರ, ಮಾರುಕಟ್ಟೆ ಕೈಗಾರಿಕೆ ಸೇರಿದಂತೆ ದೇಶದ ಎಲ್ಲಾ ರಂಗಗಳಲ್ಲಿಯೂ ವಿಸ್ತರಿಸುವ ಯೋಜನೆಯನ್ನು ಸರಕಾರ ಹೊಂದಿದೆ. ಭಾರತವನ್ನು ವಿಶ್ವದಲ್ಲೇ ಪರಿಣಾಮಕಾರಿ, ಪ್ರಾಮಾಣಿಕ ಹಾಗೂ ಉತ್ತರದಾಯಿ ದೇಶವನ್ನಾಗಿ ಮಾಡುವ ಸಲುವಾಗಿ ಡಿಜಿಟಲ್ ಇಂಡಿಯಾ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇಡೀ ದೇಶವನ್ನು ಬದಲಾವಣೆಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಬೆರಳಿನ ಗುರುತು ದಾಖಲಿಸಿ ಆರ್ಥಿಕ ವ್ಯವಹಾರ ನಡೆಸಲು ಅನುಕೂಲವಾಗುವ ರೀತಿಯಲ್ಲಿ ಡಿಜಿಟಲ್ ಪಾವತಿ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು. ಮಂಗಳೂರಿನಲ್ಲಿ 30ನೆ ಡಿಜಿಧನ್ ಮೇಳ ಮತ್ತು ಲಕ್ಕಿ ಗ್ರಾಹಕ ಯೋಜನೆಯ ಲಕ್ಕಿಡ್ರಾ ನಡೆದಿದೆ.

ಭಾರತದಲ್ಲಿ ನೋಟುಗಳ ಅಮಾನ್ಯಗೊಳಿಸಿದ ಸಂದರ್ಭದಲ್ಲಿ ದೇಶದ ಆರ್ಥಿಕ ವ್ಯವಹಾರ ನಗದು ರೂಪದಲ್ಲಿ ನಡೆಯುತ್ತಿತ್ತು. ಆದರೆ ಪ್ರಸಕ್ತ ದೇಶದಲ್ಲಿ ನಗದು ರಹಿತ ಡಿಜಿಟಲ್ ಮೂಲಕ ಆರ್ಥಿಕ ಚಟುವಟಿಕೆ ನಡೆಯುವ ಪ್ರಕ್ರಿಯೆ ಚುರುಕುಗೊಂಡಿದೆ. ದೇಶದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು 500,1000 ನೋಟುಗಳನ್ನು ನಿಷೇಧಿಸಲಾಯಿತು. ಇದರಿಂದ ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದು ರವಿಶಂಕರ ಪ್ರಸಾದ್ ಹೇಳಿದರು.

ದೊಡ್ಡ ನೋಟ ರದ್ಧತಿಯಿಂದ ಕಪ್ಪುಹಣ ಹಾಗೂ ಭ್ರಷ್ಟಾಚಾರಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ, ವೇಶ್ಯಾವಾಟಿಕೆ ಹಾಗೂ ಇನ್ನಿತರ ಮಾನವ ಕಳ್ಳಸಾಗಾಣಿಕೆಗಳಿಗೂ ತಡೆಯಾಗಿದೆ. ದಲ್ಲಾಳಿಗಳು ಬಾಂಗ್ಲಾದೇಶ ಹಾಗೂ ಈಶಾನ್ಯ ಭಾಗಗಳಿಂದ ಯುವತಿಯರನ್ನು ಸಾಗಾಣಿಕೆ ಮಾಡುತ್ತಿದ್ದರು. ಇಲ್ಲೆಲ್ಲಾ 500-1000 ರೂ. ನೋಟುಗಳ ಮೂಲಕ ವ್ಯವಹಾರ ಕುದುರಿಸಲಾಗುತ್ತಿತ್ತು. ಇದೀಗ ಇವೆಲ್ಲವೂ ಕಡಿಮೆಯಾಗಿದೆ ಎಂದರು.

ಪ್ರತಿಯೊಬ್ಬ ಅಂಗಡಿ ಮಾಲೀಕರೂ ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡುತ್ತಿದ್ದಾರೆ. ಅಷ್ಟೇ ಏಕೆ ದೇವಸ್ಥಾನಗಳಲ್ಲೂ ಡಿಜಿಟಲ್ ಪಾವತಿಯಾಗುತ್ತಿರುವುದು ಈ ಯೋಜನೆಗೆ ಸಂದ ಯಶಸ್ಸು. ದೇಶದಲ್ಲಿ 125 ಕೋಟಿ ಜನಸಂಖ್ಯೆ ಇದ್ದರೂ ಮೂರು ಕೋಟಿ ಜನ ಮಾತ್ರವೇ ಆದಾಯ ತೆರಿಗೆ ಪಾವತಿಸುತ್ತಿದ್ದರು. ನೋಟು ರದ್ಧತಿಯ ಬಳಿಕ 36 ಸಾವಿರ ಕೋಟಿ ರೂ. ದೇಶಕ್ಕೆ ಉಳಿತಾಯವಾಗಿದೆ ಎಂದರು.

ದೇಶದ 20 ಲಕ್ಷ ಕೋಟಿ ರೂ. ವೆಚ್ಚದ ಬಜೆಟ್ನಲ್ಲಿ 5ಲಕ್ಷ ಕೋಟಿ ಅಭಿವೃದ್ಧಿ ಯೋಜನೆಗೆ ಮೀಸಲಿಡಲಾಗುತ್ತಿದೆ. ಆದರೆ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಆದಾಯ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಪಾವತಿ, ಕ್ಯಾಶ್ಲೆಸ್ ಪಾವತಿ ಹೆಚ್ಚಾಗಬೇಕಾಗಿದೆ ಎಂದು ರವಿಶಂಕರ ಪ್ರಸಾದ್ ತಿಳಿಸಿದರು.

ಪ್ರತ್ಯೇಕ ಐಟಿ ಪಾರ್ಕ್: ಜಿಲ್ಲೆಯಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳಿವೆ ಕಾಲೇಜುಗಳಿವೆ ಪ್ರಮುಖ ಬ್ಯಾಂಕ್ಗಳು ಜಿಲ್ಲೆಯಿಂದಲೇ ಆರಂಭವಾಗಿದೆ ಆದುದರಿಂದ ಜಿಲ್ಲೆಗೆ ಪ್ರತ್ಯೇಕವಾಗಿ ಐಟಿ ಪಾರ್ಕ್ನ್ನು ರಚನೆ ಮಾಡಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಐಟಿ ಸಚಿವರಿಗೆ ಬಹಿರಂಗವಾಗಿ ಮನವಿ ಸಲ್ಲಿಸಿದರು.ದಕ್ಷಿಣ ಕನ್ನಡ ಜಿಲ್ಲೆಯ ಬಳ್ಪ ಗ್ರಾಮದಲ್ಲಿ ಶೇ.100ರಷ್ಟು ಡಿಜಿಟಲ್ ವ್ಯವಹಾರ ಆರಂಭಗೊಂಡಿದೆ.ಮಾರ್ಚ್ ಅಂತ್ಯದೊಳಗೆ ದ.ಕ ಜಿಲ್ಲೆ ಸಂಪೂರ್ಣ ಡಿಜಿಟಲ್ ವ್ಯವಹಾರ ನಡೆಸುವ ಜಿಲ್ಲೆಯಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಸಭೆಯಲ್ಲಿ ಕೇಂದ್ರ ಸರಕಾರದ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ರಾಜ್ಯ ಸಚಿವ ರಮೇಶ್ ಜಿಗಜಿಣಗಿ, ಶಾಸಕರಾದ ಅಭಯ ಚಂದ್ರ ಜೈನ್, ಮೊಹಿಯುದ್ಧೀನ್ ಬಾವ, ಗಣೇಶ್ ಕಾರ್ನಿಕ್, ನೀತಿ ಆಯೋಗದ ಸಲಹೆಗಾರ ಯೋಗೇಂದ್ರ ಸೂರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಮ್.ಆರ್.ರವಿ, ಉಪಮೇಯರ್ ಸುಮಿತ್ರ ಕೆ.ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ನಗದು ರಹಿತ ವ್ಯವಹಾರ ಮಾಡಿದ ಲಕ್ಕಿ ಗ್ರಾಹಕರನ್ನು ಆಯ್ಕೆ ಮಾಡಲಾಯಿತು. ಅದೃಷ್ಟವಂತ ಗ್ರಾಹಕರಿಗೆ ಹಾಗೂ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಸ್ಲೋಗನ್ ಬರವಣಿಗೆಯ ವಿಜೇತರಿಗೆ ಬಹುಮಾನ ನೀಡಲಾಯಿತು.

ಇದೇ ಸಂದರ್ಭದಲ್ಲಿ ಡಿಜಿಧನ್ ಯೋಜನೆಯಲ್ಲಿ ಸಕ್ರಿಯವಾಗಿರುವರಿಗೆ ಲ್ಯಾಪ್ಟಾಪ್ ನೀಡಿ ಗೌರವಿಸಲಾಯಿತು. ಹಾಸನದ ಉಮ್ಮರ್ ಫಾರೂಕ್, ಬೀದರ್ನ ರವಿಶಂಕರ್, ದಾವಣಗೆರೆಯ ಕೈಲಾಸ್, ಧಾರವಾಡದ ಶಿವು, ಬೆಂಗಳೂರು ನಗರದ ಸಲೀಮ ಲ್ಯಾಪ್ ಟಾಪನ್ನು ಸಚಿವರಿಂದ ಸ್ವೀಕರಿಸಿದರು.

ಡಿಜಿಧನ್ ಲಕ್ಕಿ ಗ್ರಾಹಕ ಪ್ರಶಸ್ತಿಗೆ ಆಯ್ಕೆ ವಿಜೇತರಾದ ನಡೆದು ತುಳಸಿ ಶೆಟ್ಟಿ, ರವಿಂದ್ರ ನಾಥ ಕಾಮತ್, ಪೂರ್ಣಿಮಾ, ಜೊಸ್, ಸುರೇಶ್ ಹೆಗ್ಡೆ, ಗೀತಾ ಮೂಲ್ಯರವರಿಗೆ ಸಾಂಕೇತಿಕವಾಗಿ ಪ್ರಶಸ್ತಿ ವಿತರಿಸಲಾಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು.ಮನಪಾ ಉಪ ಆಯುಕ್ತ ಗೋಕುಲ್ ದಾಸ್ ನಾಯಕ್ ವಂದಿಸಿದರು.

Comments are closed.