ಮಂಗಳೂರು: ಖ್ಯಾತ ಹಿಂದುಸ್ಥಾನಿ ಗಾಯಕ ಪಂಡಿತ್ ಕೆ. ಉಪೇಂದ್ರ ಭಟ್ ಅವರಿಗೆ ಮಹಾರಾಷ್ಟ್ರ ಸರಕಾರ ಹಿಂದುಸ್ಥಾನಿ ಶಾಸ್ತ್ರೀಯ 2016ನೇ ಸಾಲಿನ ಸಾಂಸ್ಕೃತಿಕ ಪ್ರಶಸ್ತಿಯನ್ನು ಘೋಷಿಸಿದೆ. ಪ್ರಶಸ್ತಿಯು ರೂ.ಒಂದು ಲಕ್ಷ ನಗದು ಪುರಸ್ಕಾರವನ್ನು ಹೊಂದಿದೆ. ಈ ನೆಲೆಯಲ್ಲಿದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪಂಡಿತ್ ಕೆ. ಉಪೇಂದ್ರ ಭಟ್ ಅವರನ್ನುಇಂದು ಗೌರವಿಸಿ ಅಭಿನಂದಿಸಲಾಯಿತು.
ಕರ್ನಾಟಕ ವಿಧಾನ ಸಭೆಯ ಮಾಜಿ ಉಪ ಸಭಾಪತಿ ಎನ್. ಯೋಗೀಶ್ ಭಟ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ನಿತ್ಯಾನಂದ ಕಾರಂತ ಪೊಳಲಿ, ಪ್ರೊ. ಜಿ.ಕೆ. ಭಟ್ ಸೇರಾಜೆ, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಘಟಕಾಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ, ಆಕೃತಿ ಪ್ರಿಂಟರ್‍ಸ್‌ನ ತಲ್ಲೂರು ನಾಗೇಶ್, ಪಿ. ಸುರೇಶ್ ಶೆಣೈ, ದ.ಕ. ಜಿಲ್ಲಾ ಕಸಾಪ ಗೌರವ ಕೋಶಾಧಿಕಾರಿ ಪೂರ್ಣಿಮಾ ರಾವ್ ಪೇಜಾವರ, ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್, ದ.ಕ. ಜಿಲ್ಲಾ ಗೌರವ ಕಾರ್ಯದರ್ಶಿ ಬಿ. ತಮ್ಮಯ್ಯ, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಪಂಡಿತ್ ಉಪೇಂದ್ರ ಭಟ್ ರವರು ಮೂಲತಃ ಮಂಗಳೂರಿನ ಗೋಕರ್ಣ ಮಠದ ವೈದಿಕ ಮನೆತನದವರು, ಭಾರತ ರತ್ನ ಪಂ. ಭೀಮ ಜೋಶಿಯವರ ಶಿಷ್ಯರಾಗಿ ಪ್ರಖ್ಯಾತರಾದವರು. ಎಳವೆಯಲ್ಲೇ ಪೂನಾದಲ್ಲೇ ನೆಲೆಸಿ ಜೋಶಿಯವರ ಶಿಷ್ಯರಾಗಿ ಪಾಂಡಿತ್ಯ ಪಡೆದವರು.
ಸವಾಯಿ ಗಂಧರ್ವ ಸಂಗೀತ ಉತ್ಸವ, ರಾಷ್ಟ್ರೀಯ/ಅಂತರಾಷ್ಟ್ರೀಯ ಉತ್ಸವಗಳಲ್ಲಿ ಪಾಲ್ಗೊಂಡ ಅನುಭವಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಹೌದು. ಈ ಹಿಂದೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ನೀಡುವ ವಾದಿರಾಜ ಪ್ರಶಸ್ತಿಯನ್ನುವಿ.ಎಸ್. ಆಚಾರ್ಯರಿಂದ ಪಡೆದಿರುತ್ತಾರೆ. ಮಹರಾಷ್ಟ್ರ ಘನ ಸರಕಾರದ ಈ ಪ್ರಶಸ್ತಿಗೆ ಭಾಜನರಾದುದು ಕನ್ನಡಿಗರೆಲ್ಲರೂ ಹೆಮ್ಮೆಯ ವಿಚಾರ ಎಂದು ಕಲ್ಕೂರ ಸಂತಸ ವ್ಯಕ್ತಪಡಿಸಿದ್ದಾರೆ.
Comments are closed.