ಕರಾವಳಿ

ಮನಪಾದಿಂದ ಅಕ್ರಮ ಗೂಡಂಗಡಿ ತೆರವು : ಜೆಸಿಬಿ ಬಳಸಿ ಕಾರ್ಯಾಚರಣೆ

Pinterest LinkedIn Tumblr

ಮಂಗಳೂರು, ಫೆಬ್ರವರಿ.13: ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಬೀದಿಬದಿ ವ್ಯಾಪಾರದಲ್ಲಿ ತೊಡಗಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿದ್ದಾರೆ.

ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವಲಯವನ್ನು ಮನಪಾ ವ್ಯವಸ್ಥೆ ಮಾಡಿಕೊಟ್ಟಿದ್ದರೂ ಕೂಡ ಹಲವಾರು ವ್ಯಾಪಾರಿಗಳು ಈ ವಲಯವನ್ನು ಬಳಸದೇ ಬೀದಿ ಬದಿಯಲ್ಲೇ ವ್ಯಾಪಾರ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸೋಮವಾರ ಬೆಳಗ್ಗೆ ಪೊಲೀಸ್ ರಕ್ಷಣೆಯಲ್ಲಿ ಬೀದಿಬದಿ ವ್ಯಾಪಾರ ತೆರವುಗೊಳಿಸಿದ್ದಾರೆ.

ಮನಪಾ ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ನಗರದ ಸ್ಟೇಟ್ ಬ್ಯಾಂಕ್ ಹಾಗೂ ರಾವ್ ಎಂಡ್ ರಾವ್ ಸರ್ಕಲ್ ಬಳಿಯ ಅಕ್ರಮವಾಗಿಟ್ಟಿದ್ದ ಗೂಡಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದರು. ಈ ಬಗ್ಗೆ ಮೊದಲೇ ಮಾಹಿತಿ ಪಡೆದುಕೊಂಡಿದ್ದ ಕೆಲವು ಬೀದಿ ಬದಿ ವ್ಯಾಪಾರಿಗಳು ತಕ್ಷಣ ತಮ್ಮ ವ್ಯಾಪಾರಕ್ಕೆ ಬಳಸುವ ಸಲಕರಣೆಗಳನ್ನು ಬೇರೆಕಡೆ ಸಾಗಿಸಿದರು.

ಸ್ಟೇಟ್ ಬ್ಯಾಂಕ್ ಹಾಗೂ ರಾವ್ ಎಂಡ್ ರಾವ್ ಸರ್ಕಲ್ ಬಳಿ ಕಾರ್ಯಾಚರಣೆ ನಡೆಯುತ್ತಿದ್ದ ಮಾಹಿತಿ ಪಡೆದ ಅನತಿ ದೂರದಲ್ಲಿ ನಗರದ ಲೇಡಿಘೋಷನ್ ಆಸ್ಪತ್ರೆ ಸಮೀಪದ ರಸ್ತೆ ಬದಿಯಲ್ಲಿ ಅಕ್ರಮವಾಗಿ ವ್ಯಾಪಾರದಲ್ಲಿ ತೊಡಗಿದ್ದ ವ್ಯಾಪಾರಿಗಳು ತಾವು ಮಾರಾಟಕ್ಕೆ ತಂದಿದ್ದ ಸಾಮಾನು ಸರಂಜಾಮುಗಳೊಂದಿಗೆ ಸ್ಥಳದಿಂದ ಕಾಲ್ಕಿತ್ತರು.

Comments are closed.