ಮಂಗಳೂರು, ಫೆಬ್ರವರಿ.13: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ಕಾರ್ಯಕರ್ತರು ಸೋಮವಾರ ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಿತು.
ಧರಣಿ ನಿರತರನ್ನು ಉದ್ದೇಶಿಸಿ ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ರಕ್ಷಣೆ ನೀಡಬೇಕಾದ ಸರಕಾರ ಹಾಗೂ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಹಿಳೆಯರು ಕೆಲಸ ಮಾಡುವ ಕಡೆ ಸೂಕ್ತ ಭದ್ರತೆ ಇಲ್ಲ. ಪುರುಷ ಪ್ರಧಾನ ಸಮಾಜವು ಮಹಿಳೆಯರ ಬಗ್ಗೆ ತಾರತಮ್ಯ ತಾಳುತ್ತಿದೆ. ಕೇಂದ್ರ ಸರಕಾರವು ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಸಾಕಷ್ಟು ಸಂಖ್ಯೆಯ ಮಹಿಳೆಯರು ತೊಂದರೆಗೀಡಾಗಿದ್ದಾರೆ. ಮಹಿಳೆಯರು ಪ್ರತೀ ಕ್ಷಣವೂ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದು ಆರೋಪಿಸಿದರು.
ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯದ ವಿರುದ್ಧ ಸುಮ್ಮನಿರದೆ ಹೋರಾಟದ ಮನೋಭಾವ ಬೆಳೆಸಬೇಕು ಎಂದು ಕರೆ ನೀಡಿದ ಚಂದ್ರಕಲಾ ನಂದಾವರ ಅವರು, ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅಲ್ಪ ಸಂಖ್ಯಾತ ಮಹಿಳೆಯರ ಮೇಲೆ ನಡೆಯುವ ಸಾಮಾಜಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು. ದಲಿತ ಮಹಿಳೆಯರ ಮೇಲೆ ನಡೆಯುವ ಸಾಮಾಜಿಕ, ಅರ್ಥಿಕ ದೌರ್ಜನ್ಯಗಳನ್ನು ಹತ್ತಿಕಬೇಕು, ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುವ ಮಹಿಳಾ ರಂಗದ ವಿಷಯಗಳಿಗೆ ಸರ್ಕಾರ ಅಧ್ಯತೆ ನೀಡಬೇಕು ಎಂಬ ಹಲವಾರು ಬೇಡಿಕೆಗಳಿಗೆ ಹಕ್ಕೊತ್ತಾಯ ಮಂಡಿಸಿದರು.
ಜೆಎಂಎಸ್ ಅಧ್ಯಕ್ಷೆ ಜಯಂತಿ ಬಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಧಾ, ಉಪಾಧ್ಯಕ್ಷೆ ಕಿರಣ ಪ್ರಭಾ, ಮಾಜಿ ಅಧ್ಯಕ್ಷೆ ಹೇಮಲತಾ ಸೇರಿದಂತೆ ಹಲವಾರು ಮಂದಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
Comments are closed.