(ಕಡತ ಚಿತ್ರ)
ಮ0ಗಳೂರು ಫೆಬ್ರವರಿ 13: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಿಸಲು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಹಾಗೂ ತಾಲೂಕು ಕೇಂದ್ರದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಸೂಚನೆ ನೀಡಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಈ ಸಹಾಯವಾಣಿ ಕೇಂದ್ರದಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಬರುವ ದೂರುಗಳನ್ನು ಸ್ವೀಕರಿಸಿ, ಅವುಗಳನ್ನು 24 ಗಂಟೆಯೊಳಗೆ ಇತ್ಯರ್ಥ ಪಡಿಸಬೇಕು, ದೂರುಗಳನ್ನು ನೋಂದಣಿ ಮಾಡಿ, ಅದರ ಪರಿಹಾರವಾಗುವವರೆಗೆ ನಿಗಾವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಸಾರ್ವಜನಿಕರು ಪ್ರತಿಭಟನೆ, ಹೋರಾಟ ಮಾಡುವಂತಹ ಸನ್ನಿವೇಶ ಉಂಟಾದರೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾದ ಅಗತ್ಯ ಬಿದ್ದರೆ ಸಂಬಂಧಪಟ್ಟ ಸಮಿತಿಯ ಅನುಮೋದನೆ ಪಡೆದು ನೀರು ಸರಬರಾಜು ಮಾಡಬೇಕು. ಬಳಿಕ ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಬೇಕು. ನೀರು ಸರಬರಾಜು ಘಟಕಗಳಲ್ಲಿ ಪಂಪ್‍ಸೆಟ್‍ಗಳು ಕೆಟ್ಟು ಹೋದರೆ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪರ್ಯಾಯ ಪಂಪ್‍ಸೆಟ್ ಹಾಗೂ ನುರಿತ ಮೆಕ್ಯಾನಿಕ್‍ಗಳನ್ನು ಸಿದ್ಧಗೊಳಿಸಿರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳನ್ನು ಮೊದಲೇ ಗುರುತಿಸಬೇಕು. ಜಿಲ್ಲೆಯ ಕೆಲವಡೆ ನದಿ ನೀರಿನಲ್ಲಿ ರಾಸಾಯನಿಕಗಳನ್ನು ಬೆರಸಿ ಮೀನು ಹಿಡಿಯುವುದನ್ನು ಕುಡಿಯುವ ನೀರಿನ ಸುರಕ್ಷತೆ ದೃಷ್ಠಿಯಿಂದ ನಿಷೇಧಿಸಲಾಗುವುದು. ಪಟ್ಟಣ ನಗರ ಪ್ರದೇಶಗಳಲ್ಲಿ ನೀರಿನ ಮಿತಬಳಕೆಗೆ ಜಾಗೃತಿ ಮೂಡಿಸಬೇಕು. ಜಿಲ್ಲೆಯ ನದಿ ಪಾತ್ರದಲ್ಲಿರುವ ಖಾಸಗಿ ಡ್ಯಾಂಗಳಲ್ಲಿ ನೀರಿನ ಒಳಹರಿವು ಕಡಿಮೆಯಾದರೆ ವಿದ್ಯುತ್ ಉತ್ಪಾದನೆಯನ್ನು ಜಿಲ್ಲಾಡಳಿತದ ಪೂರ್ವಾನುಮತಿ ಇಲ್ಲದೇ ಕೈಗೆತ್ತಿಕೊಳ್ಳದಂತೆ ನಿಗಾ ವಹಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಡಾ: ಕೆ.ಜಿ ಜಗದೀಶ್ ಸೂಚಿಸಿದರು.
ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ರಾಜ್ಯ ಸರಕಾರ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಈ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಜಾಗದಲ್ಲಿ ಗ್ರಾಮಕ್ಕೊಂದರಂತೆ ಆಟದ ಮೈದಾನಗಳನ್ನು ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಬರ ತಾಲೂಕುಗಳಲ್ಲಿ ಕೆರೆಗಳು ಬತ್ತಿ ಹೋಗಿದ್ದರೆ ಕೆರೆ ಸಂಜೀವಿನಿ ಯೋಜನೆಯಡಿ, ಅವುಗಳಲ್ಲಿ ಹೊಳೆತ್ತಲು ಪ್ರಸ್ತಾವನೆ ಸಲ್ಲಿಸಬೇಕು. ಬರಪರಿಹಾರ ಕಾಮಗಾರಿಗಳನ್ನು ಪಾರದರ್ಶಕವಾಗಿ ನಿರ್ವಹಿಸಬೇಕು ಜಿಲ್ಲೆಯಿಂದ ಅಥವಾ ಬೇರೆ ಜಿಲ್ಲೆಯಿಂದ ದ.ಕ ಮೂಲಕ ಕೇರಳ ರಾಜ್ಯಕ್ಕೆ ಮೇವು ಸಾಕಾಣಿಕೆ ಸಂಪೂರ್ಣವಾಗಿ ನಿರ್ಬಂಧಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು. ಬರಪೀಡಿತ ತಾಲೂಕುಗಳಲ್ಲಿ ಬೆಳೆ ನಷ್ಠವನ್ನು ಅಂದಾಜಿಸಲು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿಗಳು ಜಂಟೀ ಸಮೀಕ್ಷೆ ನಡೆಸಲು ಡಿ.ಸಿ. ಸೂಚಿಸಿದರು.
ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ತಹಶೀಲ್ದಾರ್‍ಗಳು ಪ್ರತೀವಾರ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ನೇತ್ರಾವತಿ ಅಣೆಕಟ್ಟು:
ಮಂಗಳೂರು ಮಹಾನಗರ ಪಾಲಿಕೆಗೆ ನೀರು ಸರಬರಾಜು ಮಾಡುವ ನೇತ್ರಾವತಿ ನೂತನ ಡ್ಯಾಂನಲ್ಲಿ 7+1 ಮೀಟರ್ ಎತ್ತರಕ್ಕೆ ನೀರು ಸಂಗ್ರಹ ಮಾಡಿದರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬೇಡಿಕೆಯನ್ನು ನಿರ್ವಹಿಸಬಹುದು. ಈ ಹಿನ್ನೆಲೆಯಲ್ಲಿ ಮುಳುಗಡೆ ಜಮೀನಿನ ಸಂಪೂರ್ಣ ಮಾಹಿತಿ, ಬೆಳೆ ಮಾಹಿತಿಯನ್ನು ಈ ಮಾಸಾಂತ್ಯದೊಳಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಬಂಟ್ವಾಳ ತಹಶೀಲ್ದಾರರಿಗೆ ಸೂಚಿಸಿದರು.
ಬೋರ್‍ವೆಲ್:
ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ಮಾತನಾಡಿ, ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳಲ್ಲಿ ಖಾಸಗಿಯವರು ಬೋರ್‍ವೆಲ್ ಕೊರೆಯಲು ರಾಜ್ಯ ಸರಕಾರ ಅನುಮತಿ ನೀಡಿದೆ. ಆದರೆ ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯತ್‍ಗಳಿಂದ ನಿರಾಪೇಕ್ಷಣೆ ಪತ್ರ ಕಡ್ಡಾಯವಾಗಿದೆ. ಅಲ್ಲದೆ ಸಾರ್ವಜನಿಕ ಕುಡಿಯುವ ನೀರಿನ 500 ಮೀಟರ್ ವ್ಯಾಪ್ತಿಯೊಳಗೆ ಬೋರ್‍ವೆಲ್ ಕೊರೆಯಲು ಅವಕಾಶವಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ತಹಶೀಲ್ದಾರ್‍ಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
Comments are closed.